ಮಂಗಳವಾರ, ಫೆಬ್ರವರಿ 12, 2013

ಕರುಳಿನ ಕರೆ


ತಾಯಿಬೇರಿನ ಸಾರ ಸೆಳೆಯುತ
ಮರವು ಭರದಲಿ ಚಿಗುರಿದೆ.
ತಾಯಿ ಕರುಳಿನ ಕರೆಯನಾಲಿಸಿ
ಬಲಿತ ಎಲೆಯದು ಉದುರಿದೆ.

ಎಲೆಯು ಮಣ್ಣಲಿ ಬೆರೆತು ಕೊಳೆಯುತ
ತಾಯಿಬೇರನು ಸೇರಿದೆ.
ಮಮತೆಯೆರೆದಾ ತಾಯಿಯುದರಕೆ
ತಾನೆ ಸಾರವನುಣಿಸಿದೆ.

ಮರವು ಬೇರಿಗೆ ನೀರನುಣಿಸಲು
ಕರಿಯ ಮುಗಿಲನು ಸೆಳೆದಿದೆ.
ಮರದ ಮಮತೆಯ ಕರೆಯನಾಲಿಸಿ
ಮುಗಿಲು ಮಳೆಯನು ಸುರಿಸಿದೆ.

ಮುಗಿಲ ಮಳೆಯಲಿ ಮರವು ಅರಳಿದೆ
ಚಿಗುರು ಚಿಗುರಲಿ ನಗುವಿದೆ.
ಮಳೆಯ ಗಾಳಿಗೆ ಎಲೆಯು ಉದುರಿದೆ
ತಾಯಿಮಡಿಲಲಿ ಮಲಗಿದೆ.


ಮರದ ಮಮತೆಯ ಮನುಜ ತಳೆಯಲಿ
ಕಣ್ಣ ಪೊರೆಯನು ಕಳಚಲಿ.
ತಾಯಿಬೇರಿಗೆ ಸಾರವುಣಿಸಲಿ
ಜೀವದಾ ಋಣ ಅರಿಯಲಿ.


ಸೋಮವಾರ, ಫೆಬ್ರವರಿ 11, 2013

ಕಾವ್ಯದ ಹಬ್ಬವ ಮಾಡೋಣ


ಮಾವಿನ ತೋರಣ ಮನದ ಬಾಗಿಲಿಗಿರಿಸಿ
ಭಾವದೋಕುಳಿಯನಾಡೋಣ.  
ಬೇವಿನ ಚಿಗುರಿಗೆ  ಬೆಲ್ಲವನು ಬೆರೆಸುತ್ತ
ಕಾವ್ಯದ ಹಬ್ಬವ ಮಾಡೋಣ.

ಭಾವಚೈತ್ರದ ಕವಿತೆಯ ಚಿಗುರಲ್ಲಿ
ಕವಿಗಳ ಅನುಭವದ ನೆರಳಲ್ಲಿ
ಸವಿಯಾದ ರಸವನ್ನು ಬೆರೆಸುತ್ತ ನಾವು
ಕಾವ್ಯದ ಹಬ್ಬವ ಮಾಡೋಣ.

ಕಾವ್ಯವನದಾ ಚಿಗುರಿನ ಒಗರಲ್ಲಿ
ಭಾವಗೀತೆಯಾ ರಸದಲ್ಲಿ
ಸಾವನರಿಯದ ಸ್ವನದಲ್ಲಿ ಹಾಡುತ್ತ
ಕಾವ್ಯದ ಹಬ್ಬವ ಮಾಡೋಣ.

ನೋವ ಮರೆಯಲು ನಲಿವನ್ನು ಮೆರೆಯಲು
ಭಾವದೋಕುಳಿಯನಾಡೋಣ.
ಕಾವ್ಯದಾ ಸವಿಯೂಟ ಸವಿಯುತ್ತ ನಾವು  
ಜೀವನ ಯಾತ್ರೆಯ ಮಾಡೋಣ.

ಭಾನುವಾರ, ಫೆಬ್ರವರಿ 10, 2013

ಹೊಸಹರುಷದಲಿ ಬರೆವೆ ನಾನು


ಹೊಸಚಿಗುರ ಶರದೊಸಗೆಯ ಹರುಷದಲಿ ಬರೆವೆ ನಾನು.
ಹೊಸವಿವರ ವಿಚಾರಪರ ಪದಗಳನು ಸುರಿಸಿ ನಾನು.

ಸತ್ತ್ವಯುತ ರಸದಲುದಿತ ಕವಿತೆಗಳ
ನಿತ್ಯಮರೆವ ಸತ್ಯಕತೆ ವಿವರಗಳ
ಮನಮನದಿ ಮಿಡಿಯುತಿರುವ ಕನಸುಗಳ
ಕಣಕಣದಿ ಹೊಳೆವ ಸುರಿಮಳೆಹನಿಗಳ

ಕುಸುಮಿಸದೆ ಬೆಸಲಾದ ಮಿಡಿಗವಿತೆಗಳ
ಕಸದಲ್ಲಿ ರಸವಾದ ಕಿರುಗತೆಗಳ
ಉಸಿರುಸಿರಿನಾ ಬಿರುಬೆಸುಗೆಯ ನಶೆಗೆ
ಹೊಸೆದ ನವರಾಗ ಸ್ವರಗೀತೆಗಳ

ಶನಿವಾರ, ಫೆಬ್ರವರಿ 9, 2013

ಪದಬಿರಿದು ಬಾ ಸರಸತಿಯೆ (ಹೊಸ ಆವೃತ್ತಿ)


ಬಾ ಬೇಗ ಸರಸತಿಯೆ  ಸರಸಿಜಾತನ ಮತಿಯೆ
ಮತಿಯಲ್ಲಿ ಪದವಿರಿಸಿ  ಸರಸರನೆ ಬಾ.
ಲಯಗತಿಯ ನಡಿಗೆಯಲಿ ಮೃದುವಾದ ಪದವಿರಿಸಿ
ಹದವಾಗಿ ಕುಣಿಕುಣಿದು ಮನತಣಿಸು ಬಾ.

ಪದದುಡುಗೆ ಪದದೊಡವೆ ಕರದಲ್ಲಿ ಪದಮಾಲೆ
ವಧುವಂತೆ ಪದವರವ ನೀ ವರಿಸು ಬಾ.
ಹದವಾದ ಪದಗಳಲಿ ಸರಿಗಮದ ದನಿಯಿರಿಸಿ
ಕದತೆರದು ಪದಬಿರಿದು ಮುದದೋರು ಬಾ.

ಪದರತಿಯ ಸರಸದಲಮರಪದದ ಕೃಪೆಯಿರಿಸಿ
ಮಧುರರಸವನು  ಕೃತಿಕೃತಿಯಲಿರಿಸು ಬಾ.
ಮದಭರಿತ ಮತಿಯನವಿರತವು ನತಗೊಳಿಸಿ ಮೃದು-
ಪದಜಲದ ನದಿಯಾಗಿ  ನೀ ಹರಿದು ಬಾ.

ಬುಧವಾರ, ಫೆಬ್ರವರಿ 6, 2013

ನಂಜನ್ನು ಹಿಂಜು ಬಾ ನಂಜುಂಡ...!


ಬಾರಯ್ಯ ನಂಜುಂಡ ಹಿಂಜು ಬಾ ನಂಜನ್ನು
ಪಸರಿಸಿದೆ ದ್ವೇಷದತಿಘೋರ ನಂಜು.
ಸಾಕಯ್ಯ ಜನಸಂಗ ಬೇಕಯ್ಯ ನಿನಸಂಗ
ಎಲ್ಲೆಲ್ಲು ಕವಿದಿರಲು ಮೋಹ ಮಂಜು.

ಜಗದೊಳಗೆ ತುಂಬಿರುವ ಮನುಜನಾ ಮತ್ಸರವ
ನುಂಗುತ್ತ ಕಲಿಸು ಬಾ ನಗೆಯ ಗುಂಗು.
ಮುಗುಳುನಗೆ ಸಾಧನದಿ ನಂಜನ್ನು ಹಿಂಜುವಾ
ವರವಿರಲು ಬಾಳೆಲ್ಲ ರಂಗು ರಂಗು.

ಕಡಲಲುದಿಸಿದಾ ನಂಜನುಂಡ ನಂಜುಂಡ!
ಬಿಡದೆ ಸುತ್ತಲ ನಂಜ ನೀನು ನುಂಗು.
ನನ್ನೆದೆಯ ಸಿಂಧುವಿನ ಹನಿಹನಿಯಲಿಂಗಿರುವ
ನಾನೆಂಬ ನಂಜನ್ನು ಮೊದಲು ನುಂಗು.

ಮಂಗಳವಾರ, ಫೆಬ್ರವರಿ 5, 2013

ಚಂದಿರನ ಮೊಗವ ಹೊತ್ತು ಬಾ


ಬಾ ಗೆಳತಿ ಬಳಿ ಬಾರೆ ನೀ ಬಾಳಿನಾ ಒಡತಿ
ಹುಣ್ಣಿಮೆಯ ಚಂದಿರನ ಮೊಗವ ಹೊತ್ತು.
ಭಾವನೆಯ ಬಾಂದಳದಿ ಹೊಂಬೆಳಕ ಚೆಲ್ಲುತ್ತ
ಸೊಗ ತಾರೆ ಜಗದಗಲ ನಗುವ ಹೊತ್ತು

ನಗುಮೊಗದ ಚಂದಿರನ ಬಿಳಿಹಾಲ ನೊರೆಯಲ್ಲಿ
ನನ್ನೆದೆಯ ಹುಳಿಯೊಲವ ಹೆಪ್ಪುಬೆರೆಸಿ.
ಕಡೆದಿರುವೆ ಸಿಹಿಯೊಲವ ತೇಲುತಿಹ ಬೆಣ್ಣೆಯನು
ಕಾಯಿಸುವ ಬಾ ತುಟಿಗೆ ತುಟಿಯನಿರಿಸಿ.

ಬಾನಿನಾ ಚಂದಿರನು ಮೊಗದಲ್ಲೆ ಇರುವಾಗ
ಬಾಳಲ್ಲಿ ಬೆಳದಿಂಗಳಿನಾ ಹರಹು.
ನಗುವಿರಲು ಸೊಗವಿರಲು ಕಾಲದಾ ಮರೆವಿರಲು
ನಮಗಿಲ್ಲ ಸುತ್ತಲಿನ ಜಗದ ಅರಿವು.

ಸುಧಾಸಾಗರದಿ ಹುಟ್ಟಿದಾ ಚಂದಿರನ ತಾ
ಹೊತ್ತು ತಂಪಾಯಿತಾ ಶಿವನ ಬದುಕು.
ಸುಧಾಧಾರಾ ಸಿಂಚನದ ಮೊಗದ ಹೊಳಪಲ್ಲಿ
ಶಿವವಾಗುತಿದೆಯೆನ್ನ  ಭಾವ- ಬದುಕು.

ಗುರುವಾರ, ಜನವರಿ 24, 2013

ನನ್ನ ಚೆಲುವಿನ ಕವನ



ಬಾರೆ ಭಾಮಿನಿಯೆ! ಎದೆಯ ಬಾನಿನಲಿ
ಬಣ್ಣದುಡುಗೆ ಧರಿಸಿ ಬಾ.
ತೋರೆ ಸಂಪದವ ಬೀರಿ ಹೊಸತನವ
ಸ್ವರವರ್ಣಚರಣೆ ಬಾ.

ಹೂಬನದ ಚೆಲುವೆ! ಹೊಂಬಿಸಿಲ ನಗುವೆ!
ಅಂಬರದ ದನಿಯ ಸಿರಿಯೆ!
ಚುಂಬಿಸುತ ಮನವ ಹೊಮ್ಮಿಸುತ ಹೊಳಪ
ಘಮಘಮಿಸು ಬಾರೆ ಒಲವೆ!

ಮೃದುವಾದ ಚಿಗುರ ಹದವಾದ ಹಣ್ಣ
ಮಾಧುರ್ಯ ತುಂಬಿ ಬಾರೆ.
ಅಣಿಗೊಣಿಸಿ ಸ್ವನವ ಮುದಗೊಳಿಸಿ ಮನವ
ಕಣಕಣದಿ ಕಲೆತು ಬಾರೆ.

ಭಾಮಿನಿಯೆ! ಬಾರೆ ಬಾ ಬಾನತಾರೆ!
ನೀನೆನ್ನ ಭಾವವದನ.
ಕಾಮಿನಿಯೆ! ಬಾರೆ ಕೆಂದೊಲವ ತಾರೆ
ನೀನೆನ್ನ ಮನದ ಕವನ.