ಭಾನುವಾರ, ಮಾರ್ಚ್ 17, 2013

ಕನ್ನಡಿ ಬದಲಿಸಿದರೆ ಹೆಚ್ಚೀತು ನಮ್ಮಂದ !


ಡೊಳ್ಳು ಹೊಟ್ಟೆಯನೇ  ಮತ್ತೆ ಮತ್ತೆ  ತುಂಬಿಸುತ್ತೇವೆ;
ಸಣಕಲು ಹೊಟ್ಟೆಯೊಳಗೆ ಜೀರ್ಣರಸಕೇನು ಬರವೇ?
ಬಿಗ್ ಬಜಾರ್ ಗಳತ್ತಲೇ ದಿನನಿತ್ಯದ ನಮ್ಮ ನೋಟ;
ರಾಗಿ ಬೆಳೆದ ರೈತನ ಹೊಲವೇಕೆ ನಿರ್ಲಕ್ಷ್ಯ?

ತೋಟ ನುಗ್ಗಿ ಹುಲ್ಲು ತಿನ್ನುವ ಹಸುವಿಗೆ ಚಡಿಯೇಟು ನೀಡುತ್ತೇವೆ;
ಅದರ ಹಾಲು ಕುಡಿದು ದೇಹವೇಕೆ ಬೆಳೆಸಬೇಕು?
ತಿಂದನ್ನ ಮಿಕ್ಕಿದರೆ  ಹಸುವಿಗೆ ಬಿಸಾಕುತ್ತೇವೆ;
ಕೃತಜ್ಞತೆಯೇ? ಕಸಹೊರಹಾಕುವ ಕೈಂಕರ್ಯವೇ?

ಗುಡಿಗೋಪುರಗಳೇ ಕಾಣುತ್ತಿವೆ; ಗುಡಿಸಲುಗಳೇಕೆ ಕಾಣುತ್ತಿಲ್ಲ?
ಹುಟ್ಟಿನಿಂದಲೇ ಮಕ್ಕಳ ಕಣ್ಣುಗಳೇಕೆ ಮಂಜಾಗುತ್ತಿವೆ?
ಹಿರಿಯರು ಕೊಟ್ಟ ಕನ್ನಡಕವನ್ನೇ ತೊಡಬೇಕೆ?
ದೃಷ್ಟಿಹೀನತೆ ಹುಟ್ಟಿನಿಂದಲೇ ಬರುತ್ತದೆಯೇ?

ಕನ್ನಡಿಯಲೊಮ್ಮೆ ಮುಖವ ದಿಟ್ಟಿಸಿ ನೋಡೋಣ;
ಮುಖದಲ್ಲೇನಾದರೂ ಕಲೆಗಳು ಮೂಡಿವೆಯೇ?
ಚಿಂತೆಯಿಲ್ಲ ಬಿಡಿ.., ಕನ್ನಡಿಯನ್ನು ಬದಲಿಸಿದರಾಯಿತು;
ಬಿಂಬ ನೀಡೀತು ಹೃದಯ; ಹೆಚ್ಚೀತು ನಮ್ಮಂದ!



ಸೋಮವಾರ, ಮಾರ್ಚ್ 11, 2013

ಕನ್ನಡ-ನುಡಿಗಳು


ಕನ್ನಡವು ಕುಣಿದಾಡಿ ನಮ್ಮೆದೆಯ ರಂಗದಲಿ
ಕರುನಾಡ ತಾಯ್ನೆಲದ ಕಲೆಯಾಗಲಿ.
ಕನ್ನಡದ ಮಾತಿನಲಿ ನಾಲಿಗೆಯು ನಲಿದಾಡಿ
ಹೊಸತನವು ಉದಯಿಸಲಿ ಕರುನಾಡಲಿ.

ಕನ್ನಡದ ಸೊಗಡಿರಲು ಸಂಸ್ಕೃತಿಯ ಬೀಡಿನಲಿ
ಕಾದಾಟ ಇನ್ನೇಕೆ ಗಡಿನಾಡಲಿ?
ಅಡಿಗಡಿಗೆ ಕವಿತೆಗಳ ಮೆದುವಾದ ನುಡಿಗಳಲಿ
ಕನ್ನಡದ ಒಗ್ಗಟ್ಟ ಪಡೆಮೂಡಲಿ.

ಹಿತವಾದ ಜನಪದದ ಹಿನ್ನೆಲೆಯ ಗೀತೆಯಲಿ
ಕರುನಾಡ ಹೃದಯಗಳು ಕುಣಿದಾಡಲಿ.
ಕನ್ನಡದ ಸವಿನುಡಿಯ ಸಹಕಾರ-ಸಹಬಾಳ್ವೆ
ಅನುದಿನವು ಮನೆಮನೆಯ ಮಾತಾಗಲಿ.

ಕನ್ನಡದ ಇತಿಹಾಸ-ಸಂಸ್ಕೃತಿಯ  ನೆಲೆಯಾದ
ಕರುನಾಡ ಕಾನನವು ಹಸಿರಾಗಲಿ.
ಹಸಿರಿನಾ ಕಾನನದ ಕಲ್ಪನೆಯು ಕಸುವಾಗಿ
ನವರಸವು ಕಾವ್ಯದಲಿ ಹೊರಹೊಮ್ಮಲಿ.


ಶನಿವಾರ, ಮಾರ್ಚ್ 9, 2013

ತ್ರಿಪುರಾಂತಕೀ ತೋಟಕಾಷ್ಟಕಂ



 ನಮ್ಮ ಊರಿನ ತ್ರಿಪುರಾಂತಕೀ ಅಮ್ಮನವರ ಬಗ್ಗೆ ತೋಟಕವೃತ್ತದಲ್ಲಿ ರಚಿಸಿದ ನನ್ನ ಬಾಲಿಶ ಶ್ಲೋಕಗಳಿವು. ತಪ್ಪುಗಳಿದ್ದರೆ ತಿಳಿಸಲು ವಿನಂತಿಸಿಕೊಳ್ಳುತ್ತೇನೆ.

ತ್ರಿಪುರಾಂತಕೀ ತೋಟಕಾಷ್ಟಕಂ
************************
ಸುಮನೋಹರಚಾರುಮುಖೇ ಲಲಿತೇ
ಜನಮೋಹನಕಾರಣನೇತ್ರಧರೇ |
ಭುವನತ್ರಯಪಾಲಕಿ ಪಾಲಯ ಮಾಂ
ಭವತಾಪಹರೇ ತ್ರಿಪುರೇ ಜನನಿ || 1 ||

ಸಕಲಾಗಮಸಾರನಿಧೇ ಮಧುರೇ
ತವಪಾದಸರೋಜಮಹಂ ಶರಣಂ|
ಅಖಿಲಾಂಡವಿನಾಯಕಿ ಪಾಲಯ ಮಾಂ
ಭವತಾಪಹರೇ ತ್ರಿಪುರೇ ಜನನಿ || 2 ||

ನವರಾತ್ರಿಸುಪೂಜಿತದೇವಿ ಹರೇ
ನವರೂಪಧರೇ ಶರದಿಂದುಮುಖೇ |
ವಪುಷಾ ವಚಸಾ ಮನಸಾ ಶರಣಂ
ಭವತಾಪಹರೇ ತ್ರಿಪುರೇ ಜನನಿ || 3 ||

ಸುರಸಂಸ್ಕೃತಭಾಷಣಪೋಷರತೇ
ವಸ ಮೇ ವದನೇ ಕೃಪಯಾ ಜನನಿ |
ಮುನಿವಂದ್ಯಶಿರೋಮಣಿ ಪಾಲಯ ಮಾಂ
ಭವತಾಪಹರೇ ತ್ರಿಪುರೇ ಜನನಿ || 4 ||

ಸುಮಸೌರಭಸನ್ನಿಹಿತೇ ಸುಮನೇ
ಮಮ ಹೃತ್ಕಮಲೇ ವಸ ಹೇ ಸತತಂ |
ವಸನೇ ಕರಣೇ ವಸ ಮೇ ರುಧಿರೇ
ಭವತಾಪಹರೇ ತ್ರಿಪುರೇ ಜನನಿ || 5 ||

ಗಗನಾಂತರಗಾಮಿನಿ ಗಾನರತೇ
ಶಿವರಾಗಿಣಿ ಮೋಹಿನಿ ಮೌನರತೇ |
ಕೃತಪಾಪಹರೇ  ವಸ ಮೇ ಸುಗೃಹೇ
ಭವತಾಪಹರೇ ತ್ರಿಪುರೇ ಜನನಿ || 6 ||

ಮನಚಾರಿಣಿ ಚಾರುಮತೇ ಮಮತೇ
ವನಚಾರಿಣಿ ಶಂಕರಿ ಕೋಮಲತೇ |
ಶ್ರುತಿಗಾನರತೇ ಚರ ಮೇ ವಚನೇ
ಭವತಾಪಹರೇ ತ್ರಿಪುರೇ ಜನನಿ || 7 ||

ಚಿರಯೌವನಮೋಹನರೂಪಿಣಿ ಹೇ
ಪರಮಾರ್ಥವಿದಾಯರತೇ ಶರಣಂ |
ಭವತಾಪಹರೇ ತ್ರಿಗುಣೇ ಜನನಿ
ತ್ರಿಪುರಾಂತಕಿ ಹೇ ಪರಿಪಾಲಯ ಮಾಂ || 8 ||










ಮಾತು-ಮಳೆ


ಹೃದಯದಾ ಮಾತುಗಳು ಮೌನದಲಿ ಹದವಾಗಿ
ವಿನಯದಾ ಭಾರದಲಿ ಮೈದುಂಬಲಿ.
ಘನಜಲವ ಹೊತ್ತಿರುವ ಕರಿಮುಗಿಲು ಕೆಳಬಾಗಿ
ಮಳೆಸುರಿದು ಹೊಸಬೆಳೆಗೆ ರಸತುಂಬಲಿ.

ಜನಪದದ ಅರಿವಿನಲಿ  ಸಂಸ್ಕೃತಿಯ ಹರಿವಿನಲಿ
ಮನಬಿರಿದು ಮಾತೆಲ್ಲ ಹೊರಹೊಮ್ಮಲಿ.
ಕಾಲದಾ ತಿಳಿವಿನಲಿ ಹದವಾಗಿ ಮಳೆಸುರಿದು  
ನೆಲವೆಲ್ಲ ಜಲಬಿರಿದು ಮೆದುವಾಗಲಿ.

ವಿನಯದಾ ಮಾತೆಲ್ಲ ಕವಿತೆಗಳ ಸಾಲಾಗಿ
ಜನಮನದ ಬಾಗಿಲಿನ ತಳಿರಾಗಲಿ.
ಮಳೆಯ ಹನಿಹನಿಯು ಬೆಳೆಯ ತೆನೆಯಲಿ ಹಾಲಾಗಿ
ಮನೆಮನೆಯ ತೋರಣದ ಕಣವಾಗಲಿ.

ಮನವೆಲ್ಲ ಬಾನಂತೆ ತನುವೆಲ್ಲ ಮುಗಿಲಂತೆ
ಮಾತೆಲ್ಲ ಮಳೆಯಂತೆ ಅರಿವಾಗಲಿ.
ಅರಿವಿನಲಿ ಬಾನಾಗಿ ಹರಿವಿನಲಿ ಹೊನಲಾಗಿ
ಹೃದಯದಾ ಮಾತೆಲ್ಲ ಮಳೆಯಾಗಲಿ.

ಗುರುವಾರ, ಮಾರ್ಚ್ 7, 2013

ಶಿವಧ್ಯಾನ


ನಾನೆಂಬ ಮದಜಲವು ಮೈ ತುಂಬಿ ಭೋರ್ಗರೆದು
ಹೊನಲಾಗಿ ಹರಿಯುತಿರೆ ಎಲ್ಲೆ ಮೀರಿ.
ಮೊಳೆತಬೆಳೆಗಳೆಲ್ಲವು ಕೊಳೆತು ಹೋಗುತಲಿರಲು
ಧ್ಯಾನಶಿವ ತಾ ಬರಲಿ  ಮೌನಮೀರಿ.

ಮದಜಲದ ಗಂಗೆಯನು ಜಟೆಯಲ್ಲಿ ಧರಿಸುತ್ತ
ಮತಿಯಲ್ಲಿ ಪದವಿರಿಸಿ ಸೆಟೆದು ಬರಲಿ.
ಕುಣಿದು ತಾಂಡವವಾಡಿ ಎನ್ನೆದೆಯ ಹದಮಾಡಿ
ಕಣಕಣದಿ ಹಾಲ್ತುಂಬಿ ಶಿವನು ಬರಲಿ.

ಮೂರನೆಯ ಕಣ್ಣನ್ನು  ಜಗದಗಲ ತೆರೆಯುತ್ತ
ಕಾಮಾದಿ ಶತ್ರುಗಳ ಸುಡುತ ಬರಲಿ.
ಮನದ ಅಲೆಯಲೆಯಲ್ಲು ಬೆರೆತಿರುವ ತಮವನ್ನು
ಲಯಮಾಡಿ ಹೊಸತನವ ಹೊಸೆತು ತರಲಿ.

ಧ್ಯಾನರಸ ತುಂಬಿರುವ ಮೌನಘನಚೇತನವು
ಮಾತಾಗಿ ಬರಲೆದೆಗೆ ಮೌನಮೀರಿ.
ಅನುದಿನವು ಮಾತಿನುಪವಾಸನೇಮವನಿತ್ತು
ಇಂಗಿಸಲಿ ಮದಜಲವ ಕೃಪೆಯ ತೋರಿ.

ಮಂಗಳವಾರ, ಮಾರ್ಚ್ 5, 2013

ಕನ್ನಡದೊಲವಿನ ಬಂಧ


ತೊದಲಿನ ನುಡಿಯಲೆ ಮುದವನು ನೀಡಿದೆ
ಕನ್ನಡ ಭಾಷೆಯ ಪದಬಂಧ.
ತಾಯಿಯ ಮಡಿಲಲಿ ಮಮತೆಯ ನೆಲದಲಿ
ಕಂಡೆವು ಜೀವನದಾನಂದ.

ಹೃದಯದಿ ಬರೆದಾ ಕನ್ನಡವೋದುತ
ಅರಿತೆವು ಸಂಸ್ಕೃತಿ-ಸಂಬಂಧ.
ಬೆರೆತಿದೆ ಉಸಿರಿನ ಗತಿಗತಿಯಲ್ಲೂ
ಅಕ್ಷರಮಾಲೆಯ ಹೂಗಂಧ

ಅಕ್ಷರ ಬೀಜವ ಬಿತ್ತುತ ಬೆಳೆದಾ
ಕವಿತೆಯ ಚಿಗುರು ಬಲು ಅಂದ.
ಕವಿಗಳ ಅನುಭವಸಾರವು ಬೆರೆತಿಹ           
ಮಧುರಸವದು  ಕಾವ್ಯಾನಂದ.

ಕನ್ನಡ ತಾಯಿಯ ಮಮತೆಯ ಮಡಿಲಲಿ
ಸಮತೆಯೆರೆಯುತಿದೆ ಪದವೃಂದ.
ಅಕ್ಷರಜಾತ್ರೆಯ ರಥವನು ಎಳೆದಿದೆ
ಕನ್ನಡ ಕವಿಭಾವನಿಬಂಧ.

ಭಾನುವಾರ, ಮಾರ್ಚ್ 3, 2013

ಬಡತನದ ಸಿರಿ ಭಾವ


ಭಾವಗಳ ಸಿರಿಯಿರಲು ಬಡತನದ ಮಾತೇಕೆ?
ಜಗವಿತ್ತ ವರವದುವೆ ಬದುಕಿನೊಳಗೆ.
ಕನಸುಗಳ ಕಣಕಣವು ಕವಿತೆಗಳ ಹನಿಯಂತೆ
ಒಲವಿನಾ ಗಣಿಯಿರಲು ಹೃದಯದೊಳಗೆ.

ಸಿಹಿಯೊಲವ ಒಡವೆಯಲಿ ಸಿಂಗರಿಸಿದಾ ಚೆಲುವು
ಹಣ್ಣಂತೆ ಬಡತನದ ತರುವಿನೊಳಗೆ.
ಸವಿಯಾದ ಮಾತಿನಲಿ ಹಿತವಾದ ನಡೆಯಿರಲು
ಪುಣ್ಯಗಳ ಫಲವದುವೆ ಬಾಳಿನೊಳಗೆ.

ಸಿರಿತನವೆ ಸೊಬಗೆಂದು ಮನತುಂಬ ಬಯಸಿರಲು
ಸಿಗದಿರಲು ಬಲುನೋವು ಹೃದಯದೊಳಗೆ.
ಹುಳಿಮಾವ ಮಿಡಿಗಾಗಿ ಎಸೆದಿರುವ ಕಲ್ಲುಗಳು
ತಾ ತೂರಿ ಬಿದ್ದಂತೆ ನೆತ್ತಿಯೊಳಗೆ.

ಭಾವಗಳ ಸಿರಿಯಲ್ಲಿ ಕನಸುಗಳು ಮೇಳೈಸಿ
ಚಿತ್ತಾರ ಬಿಡಿಸುತಿವೆ ಬಡವರೊಳಗೆ.
ಕನಸುಗಳೆ ಕಾಣದಾ ಸಿರಿತನದ ಭಾವಗಳು
ನಲುಗುತಿವೆ ಚಿಂತೆಗಳ  ಸಂತೆಯೊಳಗೆ.