ಸೋಮವಾರ, ಮಾರ್ಚ್ 25, 2013

ತಿಳಿ-ಸಾರು!




ಮೆಣಸು, ಜೀರಿಗೆ, ಮೆಂತ್ಯ, ಸಾಸಿವೆ
ಧನಿಯಗಳನು ಹುರಿಯಿರಿ.
ಕರಿಯಬೇವಿನ ಎಸಳುಗಳನು
ಸ್ವಲ್ಪ ಬಾಡಿಸಿ ಬೆರೆಸಿರಿ.

ಎಲ್ಲ ಸೇರಿಸಿ ಪುಡಿಯ ಮಾಡುತ
ತೆಂಗಿನೊಂದಿಗೆ ರುಬ್ಬಿರಿ.
ರುಚಿಯ ಹದವನು ಮನದಿ ಯೋಚಿಸಿ
ಉಪ್ಪುಬೆಲ್ಲವ ಬೆರೆಸಿರಿ.

ತೊಗರಿ ಬೇಳೆಯು ಬೆಂದನಂತರ
ಎಲ್ಲ ಸೇರಿಸಿ ಕುದಿಸಿರಿ.
ಹುಣಿಸೆ ಹಣ್ಣನು ಹಿಂಡಿ ಹಾಕುತ
ಕೈಯನೊಮ್ಮೆ ತೊಳೆಯಿರಿ.

ಇಂಗು,ಸಾಸಿವೆ ತುಪ್ಪದೊಂದಿಗೆ
ಒಗ್ಗರಣೆಯನು ಹಾಕಿರಿ.
ಕೊತ್ತಂಬ್ರಿಸೊಪ್ಪ ತರಿದು ಉದುರಿಸಿ
ತಟ್ಟೆಯೊಂದನು ಮುಚ್ಚಿರಿ

ಪಾಕಪುಸ್ತಕ ಓದಿ ಮಾಡಿದ
ತಿಳಿಯ ಸಾರಿದು ಎಚ್ಚರ!
ಅನ್ನದೊಂದಿಗೆ ಬೆರೆಸಿ ತಿನ್ನಿರಿ
ಹಸಿದ ಹೊಟ್ಟೆಗೆ ರುಚಿಕರ.

ಭಾನುವಾರ, ಮಾರ್ಚ್ 24, 2013

ಭಾವದೋಕುಳಿ



ಹೃದಯನವರಂಗದಲಿ ಭಾವದೋಕುಳಿಯಾಡಿ
ತನುಮನವೆಲ್ಲ ಕಾದು ಕೆಂಪಾಯಿತು.
ಬಿಸಿಯಾದ ಎನ್ನೆದೆಗೆ ಭಾವಗೀತೆಯ ಇಂಪು
ಇಳೆಗೆ ಮಳೆ ಸುರಿದಂತೆ ತಂಪೆರೆಯಿತು

ಕವಿಯ ಹೃದಯದ ಭಾವ ವರ್ಣವರ್ಣದಿ ಮಿಂದು
ಕಾಮನಾ ಬಿಲ್ಲಾಗಿ ಮುಗಿಲೇರಿತು.
ಕವಿತೆಗಳ ಚಿಗುರುಗಳು ಕೆಂಪಡರಿ ಚಿಗಿಯುತಲಿ
ಮನ್ಮಥನ ಶರದಂತೆ ಮನಸೋಕಿತು.

ಪರಶಿವನು ಕಣ್ತೆರೆದು ಬೆಂಕಿಯನು ಉಗುಳುತಲಿ
ಮನಸಿಜನ ಸುಟ್ಟಂತೆ ಕನಸಾಯಿತು.
ಅರ್ಥಶಿವ ತಾ ಬಂದು ಪದಗಿರಿಜೆಯನು ವರಿಸಿ
ಸಪ್ತಪದಿ ತುಳಿದಂತೆ. ಮನ ಕಂಡಿತು.

ಕಾಮನಾ ಹುಣ್ಣಿಮೆಗೆ ಭಾವದೋಕುಳಿಯಾಡಿ
ಕವಿಮೊಗವು ಕಾವೇರಿ ರಂಗಾಯಿತು.
ಅರ್ಥಪುರುಷನ ರಸಕೆ ಪದವಧುವು ಮೈದುಂಬಿ
ಶಕ್ತಿಧರಪಲ್ಲವಿಯ ಹಾಡಾಯಿತು.

(ಶಕ್ತಿಧರ=ಕುಮಾರ, ಸುಬ್ರಹ್ಮಣ್ಯ)


ಶನಿವಾರ, ಮಾರ್ಚ್ 23, 2013

ಐದು ಹನಿಗಳು



ಬತ್ತಿ
ಹೋಯಿತು
ಎಣ್ಣೆ
ಹತ್ತಿರ
ದೀಪ
ಹೊತ್ತುರಿಯಿತು!
-----------
ಹೊತ್ತಿಗೆ
ಸಾಕಷ್ಟಿದ್ದರೆ
ಓದು
ಹಿಂದುಳಿಯುತ್ತದೆ!
-------------
ಸತ್ತಿದ್ದಲ್ಲೇ
ಚಿತ್ತಿದ್ದಲ್ಲೇ
ಆನಂದವಿದೆ!
----------
ನನ್ನರಿ
ನೀನು!
-----
ನಿನ್ನ
ತಿಳಿ
ಸಾರಲಿದೆ
ಎಲ್ಲ!

ಗುರುವಾರ, ಮಾರ್ಚ್ 21, 2013

ಬಾ ಮುಂಜಾನೆ !



ಮಂಜಿನ ಮುಂಜಾನೆಯೆ! ಹೊತ್ತು ತಾ ಬಗೆಬಗೆಯ
ಚಂದದಾ ಮಲ್ಲಿಗೆಯ ಹೂಗಂಧವ.
ಸುಂದರಿಯ ಮೆಲುಮಾತ ಕೇಳಿ ಬಾ ಮುಂಜಾನೆ!
ತಿಳಿಸೆನಗೆ ಬಲುಬೇಗ ಅವಳಂದವ.

ಮೊಗದಲ್ಲಿ ಅರಳಿರುವ ಮಲ್ಲಿಗೆಯ ನಗುವನ್ನೆ
ನಮ್ಮೂರ ಅಂಗಳದಿ ಚೆಲ್ಲಿರುವಳು.
ಮರಮರದಿ ಹಬ್ಬಿದಾ ಮಲ್ಲಿಗೆಹೂಬಳ್ಳಿಗೆ
ನಗುಮೊಗದ ಚಲುವನ್ನು ತುಂಬಿರುವಳು.

ಚಂದಿರನ ಬಿಳಿಹಾಲ ನೊರೆಯಲ್ಲಿ ಮಿಂದಿಹಳು
ನಸುಗೆಂಪು ಕೆನ್ನೆಯನು ಹೊಂದಿರುವಳು.
ಮೂಡಣ ದಿಕ್ಕ ನೋಡಿ ತಲೆಬಾಗಿ ಕೈಮುಗಿದು
ಆಗಸದಿ ಹೊಂಬಣ್ಣ ಬಳಿದಿರುವಳು.

ಹಸಿರಾದ ಮರಗಳಿಗೆ ಸೌಂದರ್ಯ ತುಂಬಿಹಳು
ಹೊಸಹಸಿರ ಅಂಬರವ ತೊಟ್ಟಿರುವಳು.
ಹಕ್ಕಿಗಳಾ ಕೊರಳಿನಲಿ ಇಂಪನ್ನು ಬೆಸೆಯುತಲಿ
ಸರಿಗಮದ ಅಲೆಯಲ್ಲಿ ತೇಲುತಿಹಳು.

ಎಲ್ಲೆಲ್ಲು  ಮಲ್ಲಿಗೆಯ ಪರಿಮಳವ ಬೀರಿಹಳು
ಒಲವಿನಾ ಬಳ್ಳಿಯನು ತಬ್ಬಿರುವಳು.
ಹಿತವಾದ ಮೆಲುದನಿಯ ಕೇಳಿ ಬಾ ಮುಂಜಾನೆ!
ಜಗತುಂಬ ಹೊಸಹುರುಪ ಹಬ್ಬಿರುವಳು.

ಮಂಗಳವಾರ, ಮಾರ್ಚ್ 19, 2013

ಗರ್ಭಗುಡಿ


ನವ ಮಾಸಗಳು ಹೊತ್ತ ನವ ಜೀವವನು ಹೆತ್ತ
ತಾಯ ಉದರವೆ ನಿಜದ ಗರ್ಭಗುಡಿಯು.
ನವರಾತ್ರಿದೇವತೆಯೆ ನವಜಾತಶಿಶುವಾಗಿ
ನವರಂಗದಲಿ ಕುಣಿವ ನಾಟ್ಯಮಣಿಯು.

ಕಾಲದಾ ಗರ್ಭದೊಳು ಶಿಶುವು ತಾ ಬಲಿತು
ಬಣ್ಣಕಟ್ಟಿದ ತಾಯ ಉದರ ಮರೆತು.
ಮೋಹಬಲೆಯಲಿ ಸಿಲುಕಿ ಮಾಯೆಯಾಟದಿ ನಲುಗಿ
ಬದುಕಿನಲಿ ಸಂಬಂಧ ಸೂತ್ರ ಮರೆತು.

ಮರೆತು ಮೆರೆಯುತಿರೆ ತಾಯ ಕಾಯಲಾರದು ಸೂತ್ರ
ಗಂಟೊಂದು ಬಿಗುವಾಗಿ ಕಾಡಬಹುದು.
ಹುಟ್ಟುಸಾವುಗಳ ಜಾತ್ರೆ ಇಹದಲ್ಲಿ ನಡೆದಿರಲು
ಬಲಿಯ ಕುರಿಮರಿಯಾಗಿ ಹುಟ್ಟಬಹುದು.

ನಾವು ಮಾಡಿದ ಕರ್ಮ ಬಹುಬೇಗ ಫಲವಾಗಿ
ಸ್ಮೃತಿಯೊಳಗೆ ಗಂಟಾಗಿ ಉಳಿಯಬಹುದು.
ಶಕ್ತಿಬಿಂದುವಿನಲೆಯು ನಿತ್ಯಮನದಲೆಯಾಗಿ
ಹೃದಯದಾ ನಂಟಾಗಿ ಸುಡಲುಬಹುದು.

ನವರಸದ ನಾಟ್ಯದಲಿ ತಾರುಣ್ಯದಂದದಲಿ
ಮರೆಯದಿರು ತಾ ಬಂದ ನೇಪಥ್ಯವ.
ಜಗದ ಸೂತ್ರವ ಪಿಡಿದು ಭವದ ನಾಟಕವಾಡಿ 
ಪರಮಾತ್ಮ ಪವಡಿಸಿದ ಆ ಉದರವ.