ಶುಕ್ರವಾರ, ಏಪ್ರಿಲ್ 12, 2013

ಪ್ರಕೃತಿ ಬರೆದ ಕವಿತೆ



ಪ್ರಕೃತಿಯ ಕವಿತೆಯ ಪಲ್ಲವಿ ಹಾಡಿವೆ
ಚಿಲಿಪಿಲಿಗುಟ್ಟುವ ಹಕ್ಕಿಗಳು.
ಮೃದುಮಧು ನುಡಿಗಳ ಬರೆದಿವೆ ಬನದಲಿ
ಹಸುರಿನ ಹೊಸಹೊಸ ಚಿಗುರುಗಳು.

ಗಿರಿವನದಡಿಯಲಿ  ಸರಸರ ಸ್ವನದಲಿ
ಹೊಸೆದಿವೆ ಹಾಡನು ಹೊನಲುಗಳು.
ಹೊಸಹೊಸ ರಾಗವ ಕೊರಳಲಿ ಉಲಿದಿವೆ
ಮಾಮರದೊಳಗಿನ  ಕುಕಿಲಗಳು.

ಸುಮಧುರ ನುಡಿಗಳ ಲಯದಲಿ ಕುಣಿದಿವೆ
ಅಂದದ  ಚಂದದ ನವಿಲುಗಳು.
ಮೃದುಚರಣಗಳಲಿ ಬಳುಕುತ ತೇಲಿವೆ
ಕಿರುತೆರೆ ಮೇಲಿನ ಹಂಸಗಳು.

ಕವಿಗಳ ಕಲ್ಪನೆ ಕುಣಿದಿದೆ ಹರುಷದಿ
ಅನುದಿನ ನಸುಕಿನ ಕವಿತೆಯಲಿ.
ಹೊಸಹೊಸ ನುಡಿಗಳ ಗುನುಗಿದೆ ಹೃದಯವು
ಪ್ರಕೃತಿಯ ವಸಂತರಾಗದಲಿ.

ಮೊದಲ ಹಬ್ಬ



ವರುಷ ಚಕ್ರದ ಮೊದಲ ಹಬ್ಬಕೆ
ಬೇವು-ಬೆಲ್ಲದ ಸವಿಯಿದೆ.
ಬಾಳಪಯಣದಿ ಕಷ್ಟಸುಖಗಳು
ಚಕ್ರರೂಪದಿ ಹೊರಳಿವೆ.

ಚೈತ್ರ ವಧುವಿನ ಮುಡಿಯನೇರಲು
ಕಾಡು ಮಲ್ಲಿಗೆ ಅರಳಿದೆ.
ಪ್ರಕೃತಿ ಮಾತೆಯ ಬಸಿರ ಬಯಕೆಗೆ
ಹುಳಿಯ ಮಾವಿನ ಮಿಡಿಯಿದೆ.

ಯುಗವು ಉರುಳುತ ಋತುವು ಮರಳಿದೆ
ಕೃತಿಕೃತಿಯಲೂ ಸೊಬಗಿದೆ.
ನಿತ್ಯನೂತನಕಾಲಸ್ಪರ್ಶದಿ
ವರುಷ ಹೊಸತನ ಕಂಡಿದೆ.

ಮೊದಲ ಹಬ್ಬವು ಅರಿವು ನೀಡಿದೆ
ಭಾವಕುಸುಮವು ಅರಳಿದೆ.
ಕಾವ್ಯ ಕಿರಣದ ಅರುಣರಾಗವು
ಹೃದಯ ಬಾನಲಿ ಹರಡಿದೆ.





ಶನಿವಾರ, ಏಪ್ರಿಲ್ 6, 2013

ಭ್ರಷ್ಟತನ!



ಭ್ರಷ್ಟತನದಲಿ ಮುಳುಗಿ ಅಧಿಕಾರಿ ತಾ ಮೆರೆದು
ಎದೆಯುಬ್ಬಿ ನಡೆಯುವನು ಜನರಮುಂದೆ.
ಕೆಸರಿನಲಿ ಮಿಂದೆದ್ದು ತಲೆಯೆತ್ತಿ ನಿಂತಂತೆ
ಹೆದ್ದಾರಿ ಮಧ್ಯದಲಿ ಕೋಣಮಂದೆ.

ಕೆಸರಿನಲಿ ಮುಳುಗೆದ್ದ ಕೋಣನಾ ಸೊಕ್ಕನ್ನು
ಮುರಿಯದಿರುವನೆ ಯಮನು ಲೋಕದಲ್ಲಿ?
ಜೀವನದ ಗಣಿತವದು ತ್ರಿಕೋಣಮಿತಿಯಂತೆ
ಮೂಲೆಮೂಲೆಯ ಲೆಕ್ಕ ಇರುವುದಿಲ್ಲಿ.

ಸುಪ್ತಸ್ಮೃತಿಯಲಿ ಉಳಿವ ಕರ್ಮಚಿತ್ರದ ಬರಹ
ಚಿತ್ರಗುಪ್ತನ ನೆರಳ ಗುಪ್ತ ದಾರಿ.
ಪಾಪಪುಣ್ಯದ ಲೆಕ್ಕ ಗಣಿಸುತಲಿ ಕುಳಿತಿಹನು
ಯಮನೊಬ್ಬ ಹೃದಯದಲಿ ಕೋಣವೇರಿ.

ಶುಕ್ರವಾರ, ಏಪ್ರಿಲ್ 5, 2013

ವನಪೂಜೆ!



ಪೂಜೆsಗೆ ಬೇಕೆಂದು ಹೂವನ್ನು ಕೊಯ್ಯದಿರು
ಹೂವೆಲ್ಲ ಚೆಲ್ಲಿsವೆ ವನದಲ್ಲಿ.
ಕಾಡುಮಲ್ಲಿಗೆ ಹೂವು ಕೆಂಡಸಂಪಿಗೆ ಹೂವು
ಎಲ್ಲೆಲ್ಲು ಚೆಲ್ಲಿsವೆ ವನದಲ್ಲಿ.

ಕಾಡಿsನ ಹೂವೆಲ್ಲ ಶಂಕರಿಯ ಮುಡಿಯಲ್ಲಿ
ಇರುವಾಗ ಹೂವೇಕೆ ಕೊಯ್ಯಬೇಕು?
ದೇವಿsಯ ಪೂಜೆsಗೆ ದಿನನಿತ್ಯ ಹೂವಿರಲು
ಗುಡಿಯ ದೇವರಿಗೆ ಹೂ ಏಕೆ ಬೇಕು?

ಮನವೆಲ್ಲ ಅರಳಿರಲು ವನದಲ್ಲಿ ಹಸಿರಿರಲು
ಹಸಿರು ಪತ್ರಗಳನೇಕೆ ತರಿಯಬೇಕು?
ಹೆಜ್ಜೇನು ಕಟ್ಟಿರಲು ಸವಿಜೇನು ತುಂಬಿರಲು
ಬೆಳ್ಳಿsಯ ಮಧುಪಾತ್ರೆ  ಏಕೆ ಬೇಕು?

ಮುಗಿಲುಗಳು ವನತುಂಬ ಜಲಧಾರೆ ಸುರಿಸಿರಲು
ನಾವೇಕೆ ಅಭಿಷೇಕ ಮಾಡಬೇಕು?
ಸಿಹಿನೀರ ನದಿಯೊಂದು ವನದಲ್ಲಿ ಹರಿಯುತಿರೆ
ನಮಗೇಕೆ ಮತ್ತೊಂದು ತೀರ್ಥಬೇಕು?

ಆ ರವಿಯೆ ಆಗಸದಿ ಆರತಿಯ ಎತ್ತಿರಲು
ಬತ್ತಿಯಾರತಿಯೇಕೆ ಮಾಡಬೇಕು?
ಹಕ್ಕಿಗಳ ಕಲರವವು ಶ್ರುತಿಬದ್ಧವಾಗಿರಲು
ನಾವೇಕೆ ಶ್ರುತಿಮಂತ್ರ ಹಾಡಬೇಕು?

ತಾನಾಗೆ ಹೂವುಗಳು ನೆಲದಲ್ಲಿ ಸುರಿದಿರಲು
ಮತ್ತೇಕೆ ವರವನ್ನು ಬೇಡಬೇಕು?
ಕಣ್ತುಂಬ ವನ ಕಂಡು ಮನವಿಟ್ಟು ತಲೆಬಾಗಿ
ಅನುದಿನವು ವನಪೂಜೆ ಮಾಡಬೇಕು.

ಮಂಗಳವಾರ, ಏಪ್ರಿಲ್ 2, 2013

ಹರಿದ ಸೂತ್ರ!



ಅಧಿಕಾರ ಭ್ರಷ್ಟತೆಗೆ ಅಂಕುಶವು ಏಕಿಲ್ಲ?
ಆತಂಕ ಕಾಡುತಿರೆ ರಾಜ್ಯದಲ್ಲಿ.
ಅವನಿಕಾಯುವ ದೇವ ಸುಮ್ಮನಾಗಿಹನೇಕೆ?
ಪಾಪಪುಣ್ಯದ ಲೆಕ್ಕ ಪತ್ರವೆಲ್ಲಿ?

ಗಣರಾಜ್ಯವಿದೆಯಲ್ಲಿ ಜನಸೂತ್ರ ಸಾಕೆಂದು
ತಾ ಸೂತ್ರ ಹರಿಬಿಟ್ಟು ನೋಡುತಿಹನೆ?
ಭ್ರಷ್ಟತೆಯ ಪಟವಿಲ್ಲಿ ಹಾರುತಿರೆ ಗಗನದಲಿ
ಆ ದೇವ ಗಾಳಿಪಟ ಆಡುತಿಹನೆ?

ಪಟ್ಟವೇರಿದ ರಾಜ ಅಟ್ಟಹಾಸದಿ ಮೆರೆಯೆ
ಹೋಯಿತೆಲ್ಲಿಗೆ ನಮ್ಮ ರಾಜ್ಯಸೂತ್ರ?
ಕಲಿಗಾಲವಿದೆಯಲ್ಲಿ ಕಲಿನಿಯಮ ಸಾಕೆಂದು
ಹರಿದುಬಿಟ್ಟಿದೆಯೇನು ಜಗದಸೂತ್ರ?

ಚಟ್ಟವೇರಿದ ರಾಜ ಹೊತ್ತೊಯ್ಯುವನೆ ಗಂಟ?
ಮತ್ತೇಕೆ ಭ್ರಷ್ಟತನ ಬಿಡಬಾರದೆ?
ಸುಡುಗಾಡ ಕಟ್ಟಿಗೆಯು ಸುಟ್ಟೀತೆ ಕೃತಕರ್ಮ!?
ಪ್ರಾರಬ್ಧ ಫಲವಾಗಿ ಸುಡಲಾರದೆ?