ಮಂಗಳವಾರ, ಏಪ್ರಿಲ್ 16, 2013

ತಲೆಯ ನೋವು-ಕಲೆಯ ಕಾವು!



ತಲೆಗೆ ಬಂದರೆ ನೋವು ಕಲೆಗೆ ಬಂದರೆ ಕಾವು
ಕಾವುದೇತಕೆ ಇನ್ನು ಸುಡುತಲಿರಲು!?
ಕವಿತೆಯೊಳಗಿನ ಸದ್ದು ತಲೆಯ ನೋವಿಗೆ ಮದ್ದು
ಲಯದ ಬದ್ಧತೆಯೊಳಗೆ ಗಮನವಿರಲು.

ಭಾವಗಳ ಚೆಲ್ಲಾಟ ನೋವು ತಂದಿರೆ ತಲೆಗೆ
ಕಲೆಯ ಕಾವಿನ ಕುದಿಗೆ ಕರಗಬೇಕು.
ಮನಸಿನಲಿ ಲಯವಿಟ್ಟು ನುಡಿಗಟ್ಟನಿಡಬೇಕು
ಪುಟಿದೆದ್ದ ಭಾವಕ್ಕೆ ಪುಟವು ಬೇಕು.

ಬದ್ಧತೆಯ ಸಾಲೊಂದು ಸಿದ್ಧವಾಗಲು ಬೆಂದು
ಮದ್ದೊಂದು ಹೊರಬರಲು ಪದ್ಯದಂತೆ.
ಪದ್ಯದಾ ಸದ್ದಿನಲಿ ನೋವೆಲ್ಲ ನಲಿವಾಗಿ
ಎದ್ದು ಬರುವುದು ಮೌನ ಬುದ್ಧನಂತೆ.


ಕಲೆಯ ಬಲೆಯಲಿ ಇರಿಸಿ ಕಾವು-ನೋವನು ಸಹಿಸೆ
ಸೋಲಿಲ್ಲ ಬದುಕಿನಲಿ ಗೆಲುವೆ ಎಲ್ಲ.
ಕಲೆಯ ಗರಿಮೆಯ ಅರಿವು ಉದಯಿಸಲಿ ಎಲ್ಲೆಲ್ಲು
ಮದ್ದಾಗಿ ಮರೆಸುವುದು ನೋವನೆಲ್ಲ.





ಸೋಮವಾರ, ಏಪ್ರಿಲ್ 15, 2013

ಸಂಪರ್ಕ-ಸಂಬಂಧ!



ಸಂಪರ್ಕಮಾಧ್ಯಮವು ಸೌಕರ್ಯ ಹೆಚ್ಚಿಸಿದೆ
ಹತ್ತಿರದಿ ಕೇಳುತಿದೆ ದೂರಕೂಗು.
ಚರವಾಣಿ ಭಾಷಣದ ಭೀಷಣತೆಗೆಟುಕುವುದೆ
ತುತ್ತ ನೀಡಿದ ತಾಯ ಕರುಳ ಕೂಗು?

ಹೆತ್ತವರ ಠೇವಣಿಗೆ ನಿಮಿಷದಲಿ ಹಣತುಂಬಿ
ಕೃತಾರ್ಥರಾಗುವರು ಮಕ್ಕಳೆಲ್ಲ.
ಸಂಪರ್ಕ ಹೆಚ್ಚುತಿದೆ ಸಂಬಂಧ ಕುಸಿಯುತಿದೆ
ಮನದಲ್ಲಿ ಚಿಂತಿಸುವ ಒಮ್ಮೆ ಎಲ್ಲ.

ದೂರದೂರಿನ ಘಟನೆ ಸೂರುಸೂರಿಗು ಗೊತ್ತು
ದೂರದರ್ಶನವಿರಲು ಮನೆಯಲೆಲ್ಲ.
ಸೂರ ಒಳಗಿನ ಗೋಳು ಬೇಕಿಲ್ಲ ನಮಗೆಂದು
ದೂರದರ್ಶನದ ಗೀಳು ಮಂದಿಗೆಲ್ಲ.

ದಿನದ ಪತ್ರಿಕೆ ತುಂಬ ಚಿತ್ರನಟಿಯರ ಬಿಂಬ
ಬೆಡಗುಬಿನ್ನಾಣಗಳ ಪುಟಗಳೆಲ್ಲ.
ಮಂತ್ರಿಗಳ ಶಾಸಕರ ಲೀಲಾವಿನೋದಗಳ
ವಿಸ್ತಾರವಿಷಯಗಳೆ ಬರೆವರೆಲ್ಲ.

ದೂರದಾ ವಿಷಯಗಳು ಹತ್ತಿರಕೆ ಬರುತಿರಲು
ಹತ್ತಿರದ ಸಂಬಂಧ ದೂರ ದೂರ.
ತಲೆತುಂಬ ವಿಷಯಗಳ ತುರುಕಿಸುವ ಸೌಕರ್ಯ
ತಿಳಿಸುವುದೆ ನಮಗೆಲ್ಲ ಬದುಕಸಾರ.


ಉಪ್ಪಿಟ್ಟಿನ ಗರಿಮೆ!



ಜಠರದ ಅಗ್ನಿಗೆ ಆಹುತಿ ನೀಡಲು
ಬೇಕಿದೆ ಬಿಸಿಬಿಸಿ ಉಪ್ಪಿಟ್ಟು.
ಪ್ರಾತಃಕಾಲದ ನಿತ್ಯದ ಹೋಮಕೆ
ಸುಲಭದ ಹವಿಯೇ ಉಪ್ಪಿಟ್ಟು.

ಆ ರವಿ ಕಿರಣವು ರವೆಯೊಳು  ಹುದುಗಿದೆ
ಪೂಜಿಸಿ ರವೆಯನು ಕಾಪಿಟ್ಟು.
ರವೆಯಾ ಕಾಂತಿಯು ಎಲ್ಲೆಡೆ ಹರಡಲು
ಹುರಿಯಿರಿ ಪಾತ್ರೆಗೆ ಸೌಟಿಟ್ಟು.

ತರಕಾರಿಗಳನು ಬೆರೆಸುತ ಬೇಯಿಸೆ
ತಿನ್ನಲು ತುಂಬಾ ರುಚಿಕಟ್ಟು.
ಉಳ್ಳಾಗೆಡ್ಡೆಯ ಬಳಸಿದರಂತೂ
ಲಾಲಾರಸವದು ದುಪ್ಪಟ್ಟು.

ಬಿಸಿಬಿಸಿ ತುಪ್ಪದ ಜೊತೆಯಲಿ ಸೇವಿಸೆ
ಹೊಳೆವುದು ಸುಂದರ ಮೈಕಟ್ಟು.
ಪೂರ್ಣಾಹುತಿಯಾ ಸಮಯದಿ ನಮಿಸಿರಿ
ರವೆಯಾ ಡಬ್ಬದಿ ಕಣ್ಣಿಟ್ಟು.

ನೆಂಟರು ಬಂದರೆ ಕಸಿವಿಸಿಯಾದರೆ
ಹವನಕೆ ತಪ್ಪದು ಉಪ್ಪಿಟ್ಟು.
ಒಂಟಿ ಬದುಕಿನಾ ಹತಾಶ ಮನಸಿಗೂ
ತಿಳಿದಿದೆ ರವೆಯಾ ಒಳಗುಟ್ಟು

ರವೆಯನು ಹುರಿಯುತ ಪರಿಮಳ ಬೀರಲು
ಎಲ್ಲಿದೆ ಮನಸಿಗೆ ಚೌಕಟ್ಟು?
ಕವಿಋಷಿ ಸಂತರ ನುಡಿನುಡಿಯಲ್ಲೂ
ಇರುವಾ ತ್ರಾಣವೆ ಉಪ್ಪಿಟ್ಟು.





ಭಾನುವಾರ, ಏಪ್ರಿಲ್ 14, 2013

ಬಕ್ಕ ತಲೆಗೊಂದು ಮದ್ದು!



ಬಕ್ಕತಲೆಯ ಅರಸನೊಬ್ಬ
ಚಿಕ್ಕರಾಜ್ಯವಾಳುತಿರಲು
ಹೊಕ್ಕಿತೊಂದು ತಲೆಯ ಒಳಗೆ ಸುಡುವ ಚಿಂತೆಯು
ಅಕ್ಕಪಕ್ಕದಲ್ಲಿ ಇರಲು
ಲೆಕ್ಕಮಾಡಲಾಗದಷ್ಟು
ಸೊಕ್ಕಿ ಬೆಳೆದ ಕೂದಲಿರುವ ತಲೆಯ ಅರಸರು.

ಕೂದಲಿರದ ತಲೆಯ ನೋಡಿ
ಮೂದಲಿಸುವ ಮಂದಿ ಎಲ್ಲ
ಮದ್ದು ಮಾಡಿ ಬನ್ನಿ ಎಂದು ಸದ್ದು ಸಾರಿದ.
ಸಾಧ್ಯವಿರದ ಕಾರ್ಯ ಎಂದು
ವೈದ್ಯಮಂದಿ ಸೋತರೆಲ್ಲ
ಸಾಧುವೊಬ್ಬ ಎದ್ದು ನಿಂತು ಮದ್ದು ತಿಳಿಸಿದ.

ಮಲಗುವಾಗ ತೈಲವನ್ನು
ತಲೆಯ ತುಂಬ ಸವರಬೇಕು
ಇಲಿಯ ನೆನಪು ಬಂದರಾಗ ಹಚ್ಚಕೂಡದು.
ಇಲಿಯ ನೆನಪು ಆದರಾಗ
ಉಳಿದ ಕೂದಲೆಲ್ಲ ಉದುರಿ
ತಲೆಯು ತಾಮ್ರಕಲಶದಂತೆ ನಿತ್ಯ ಹೊಳೆವುದು.

ತಲೆಯ ತುಂಬ ಕೂದಲೆಲ್ಲ
ಬೆಳೆದ ಪರಿಯ ಕನಸ ಕಂಡು
ಮಲಗುವಾಗ ರಾಜನವನು ತೈಲ ಪಿಡಿದನು.
ಇಲಿಯ ನೆನಪು ಮಾಡನೆಂದು
ತಲೆಗೆ ತೈಲ ಸವರುವಾಗ
ಇಲಿಯ ನೆನಪು ಮತ್ತೆ ಮತ್ತೆ ಬಿಡದೆ ಕಾಡಿತು.

ತಲೆಯು ಬಕ್ಕವಿದ್ದರದುವೆ
ಇಳೆಯ ರಾಜಯೋಗವೆಂದು
ತಿಳಿದು ಮನದಿ ತೈಲವನ್ನು ದೂರ ಬಿಸುಟನು.
ತಲೆಯ ಮೇಲೆ ಕೂದಲೇಕೆ
ಒಳಗೆ ಬುದ್ಧಿ ಇರಲು ಸಾಕು
ಚೆಲುವು ನಮಗೆ ಬಕ್ಕ ತಲೆಯೆ ಎಂದು ಅರಿತನು.