ಗುರುವಾರ, ಮೇ 9, 2013

ಪದಾರ್ಥಸಂಮಿಲನ



ಮೊದಲ ಚಲನೆಯ ಮೌನರಿಂಗಣ
ಪ್ರಣವನಾದಕೆ ಪ್ರೇರಣ.
ನಾದಮಯದಾ ಅಲೆಯ ಕುಣಿತವೆ
ಪದಗಳುಗಮಕೆ ವೇದನ.

ಶಬ್ದಶಿಶುಗಳ ಮೊದಲ ರೋದನ
ಮಧುರಛಂದೋಗಾಯನ.
ಕುಣಿದ ಛಂದೋಪ್ರಕೃತಿಪದಗಳೆ
ವೇದಜನನಕೆ ಕಾರಣ.

ವೇದಚರಣದ ಪಥಸಂಚಲನ
ಅರ್ಥಪುರುಷಾಕರ್ಷಣ.
ಶಬ್ದದುದರದಿ ರಸದ ಸಿಂಚನ
ಲಲಿತಪದಗಳ ಪ್ರಜನನ.

ಪದಕೆ ಅರ್ಥದ ನಿತ್ಯಚುಂಬನ
ಭಾವಗಾನಕೆ ಸ್ಪಂದನ.
ಪದ್ಯಪ್ರಕೃತಿಯ ಆತ್ಮದರ್ಶನ
ನಿತ್ಯಮುಕ್ತಿಗೆ ಸಾಧನ.

ಬುಧವಾರ, ಮೇ 8, 2013

ಹಳೆಯ ಜಗಳ




ತಂಪು ಪೆಟ್ಟಿಗೆಯೊಳಗೆ
ಹಳೆಯ ಜಗಳವನಿಟ್ಟು
ಕಾಪಿಡುವೆ ಕಡೆತನಕ-ಏಕೆ ಮನವೆ?
ಪಳೆಯುಳಿಕೆ ಜಗಳವದು
ಮನದೊಳಗೆ ಹುದುಗಿರಲು
ನಗುವಿಲ್ಲ ಬದುಕಿನಲಿ –ಕೇಳು ಮನವೆ?

ಮನದೊಳಗ ಬೇಗುದಿಯ
ತಾಳಲಾರದು ಜಗಳ
ಮನದ ಹೊರಗಿನ ಬಿಸಿಯ ಕಾವು ಬೇಕು.
ಕೋಪದಲಿ ಕುದಿಸೊಮ್ಮೆ
ಆವಿಯಾಗಲಿ ಬೇಗ
ತಂಪು ಮಾಡಲು ಮತ್ತೆ ಉಳಿಯದಂತೆ.

ಕುದಿಸಿ ಉಳಿದರೆ ಸ್ವಲ್ಪ
ಹಳಸಿ ಹೋಗಲಿ ಅಲ್ಲೆ
ಬಿಸುಟದನು ಉಸಿರುಬಿಡು ಒಮ್ಮೆ ಹೊರಗೆ.
ಉಳಿಸದಿರು ಜಗಳವನು
ಕುದಿಸದಿರು ಮತ್ತೆಂದು
ಕೊಟ್ಟುಬಿಡು ಪೆಟ್ಟಿಗೆಯ ಗುಜರಿಯವಗೆ.







ಸೋಮವಾರ, ಮೇ 6, 2013

ಮುಂಗಾರಿನ ಆಗಮನ



ಕಾರ್ಮೋಡದ ಕೊಡೆಯರಳಿದೆ
ವೈಶಾಖದ ಬಿಸಿಲಿನಲಿ.
ನಡುಹಗಲಲೆ ಕರಿಗತ್ತಲು
ಕವಿದಿದೆ ಗಿರಿಸೆರಗಿನಲಿ.

ಕೋಲ್ಮಿಂಚಿನ ಕರದೀಪವು
ಸಾಲ್ಗಟ್ಟಿದೆ ಬಾನಿನಲಿ.
ಇಳೆಗಿಳಿಯಲು ಪಥತೋರಿದೆ
ಮುಂಗಾರಿಗೆ ಹಗಲಿನಲಿ

ತಂಗಾಳಿಯು ಕುಣಿದಾಡಿದೆ
ಮಳೆಸುರಿಯುವ ಸುಳಿವಿನಲಿ.
ಕೈಬೀಸಿವೆ ಹೆಮ್ಮರಗಳು
ತಲೆದೂಗುತ ಹರುಷದಲಿ.

ಕಾರ್ಗಲ್ಲಿನ ಕಾವಲಿಗಳು
ಕಾದಿರೆ ಬಿರುಬಿಸಿಲಿನಲಿ.
ತಂಪಾಗಿದೆ ವೈಶಾಖವು
ಮಿಂದಿದೆ ಮಳೆಹನಿಗಳಲಿ.





ಗುರುವಾರ, ಮೇ 2, 2013

ಪೂರ್ಣಾಹುತಿ!



ತನು ಉದುರಿ ಮಣ್ಣಾಗಿ
ಮನ ಚಿಗುರಿ ಮರವಾಗಿ
ಹೃದಯಭಾವಗಳೆಲ್ಲ ಹೂವಾಗಲಿ.
ಚಿತ್ತಸಂಕಲ್ಪಗಳು
ಪರಿಪೂರ್ಣ ಫಲವಾಗಿ
ಹೋಮಾಗ್ನಿಕುಂಡದಲಿ ಹವಿಯಾಗಲಿ.

ಹುತಹವಿಯ ಹೊಗೆಯೆಲ್ಲ
ಮುಗಿಲುಗಳ ಕಣವಾಗಿ
ಎಲ್ಲೆಲ್ಲು ಹದವಾದ ಮಳೆಸುರಿಯಲಿ.
ಮಳೆಯ ಹನಿಗಳನುಂಡು
ಇಳೆಯ ಬಸಿರೊಡೆದೊಡೆದು
ಹೊಲತುಂಬ ಹಾಲ್ದೆನೆಯ ಕಾಳಾಗಲಿ.

ಹಿಗ್ಗಿನಲಿ ಒಕ್ಕಲಿಗ
ಸುಗ್ಗಿಯಲಿ ಮೈಮರೆತು
ಎದೆತುಂಬಿ ಸವಿನುಡಿದು ಕುಣಿದಾಡಲಿ.
ಕುಣಿದೆದೆಯ ತಾಳದಲಿ
ಸಂಸಾರ ಶ್ರುತಿಬೆರೆತು
ನೆಮ್ಮದಿಯ ರಾಗಗಳು ಮೇಳೈಸಲಿ.

ನೆಮ್ಮದಿಯ ಅನುಭವದಿ
ಪೂರ್ಣತೆಯ ಫಲವುಂಡು
ತನುವುದುರಿ ಭೂತಾಯ ಮಣ್ಣಾಗಲಿ.
ಜೀವನದ ನಶ್ವರವ
ಚೇತನದ ಶಾಶ್ವತೆಯ
ಅರಿವುಂಡು ಪ್ರಕೃತಿಯಲಿ ಒಂದಾಗಲಿ.