ಶನಿವಾರ, ನವೆಂಬರ್ 16, 2013

ಕವಿಯುಲಿಗೆ ಕಾವಿಟ್ಟ ದಿವ್ಯಪಕ್ಷಿ



ಕರಿಯ ಸುಂದರ ಕಾಗೆ! ಯಾರಿಲ್ಲ ನಿನ ಹಾಗೆ
ಗುರುವಂತೆ ಅನುದಿನವು ಅರಿವನೆರೆವೆ.
ಮರಮರವ ಸಿಂಗರಿಪ ಪರಮಮಿತ್ರರ ಕೂಡಿ
ಹಾರುತಲಿ ಆರವದಿ ಬೆಳಕ ಕರೆವೆ.

ಆ ರವಿಯು ಕರಗಿಸಿದ ಪರಿತ್ಯಕ್ತ ವರ್ಣವನು
ಕರುಣೆಯಿಂದಲಿ ಹೀರಿ ನೀ ಧರಿಸುವೆ.
ಮರಣ ಹೊಂದಿದ ದೇಹ ನಾರುತಿರೆ ದಾರಿಯಲಿ
ಕರೆದು ಕುಲಬಾಂಧವರ ಸಂಸ್ಕರಿಸುವೆ.

ಗುಡಿಯ ಶಿಖರವೆ ಇರಲಿ ಗುಡಿಸಿಲಿನ ಸೂರಿರಲಿ
ಒಡಲೊಳಗೆ ಎರಡೆರಡು ಎಣಿಕೆಯಿಲ್ಲ;
ಅಡಿಯಿಡುತ ಎಲ್ಲೆಲ್ಲೂ ನೋಡಿ ಸಮದೃಷ್ಟಿಯಲಿ
ಬಡವ ಬಲ್ಲಿದರೆಂಬ ಭೇದ ತೊರೆವೆ.

ಕವಿಯುಲಿಗೆ ಕಾವಿಟ್ಟ ದಿವ್ಯಪಕ್ಷಿಯು ನೀನು
ಭವದೊಳಗೆ ನಿನಗಿಂತ ಭವ್ಯರಿಲ್ಲ.
ಸಾವನಪ್ಪಿದ ಜನರು ಭಾವರೂಪವ ತಳೆದು
ಅವತರಿಸಿ ನಿನ್ನೊಳಗೆ ನಿಲುವರೆಲ್ಲ!

ಡಿ.ನಂಜುಂಡ
16/11/13

ಮಂಗಳವಾರ, ನವೆಂಬರ್ 12, 2013

ಕರೆದರು ಆಟಕೆ ಮಾಧವನ!



ಚಿಣ್ಣರ ಗೆಜ್ಜೆಯ ನಾದವನಾಲಿಸಿ
ಕಲ್ಲರಳಿರೆ ಗುಡಿಗುಡಿಗಳಲಿ.
ತೊದಲಿನ ಪಂಚಾಮೃತಸಿಂಚನದಲಿ
ಮಿಂದಿಹ ದೇವನು ಹರುಷದಲಿ.

ಎದೆಗೊಂದೊದೆಯುತ ಕರೆದಿರೆ ಕೂಟಕೆ
ಒಳಗಡೆಯಡಗಿದ ಮಾಧವನ.
ಮೊಸರಿನ ಗಡಿಗೆಯನೊಡೆಯುತ ಬರುವನು
ಬೆಣ್ಣೆಯ ಚೆಂಡನು ತಿರುಗಿಸುತ.

ಕಲ್ಲೆದೆಯೊರಳಿಗೆ ಕಟ್ಟಿದ ಕೃಷ್ಣನ
ಬಾಲರು ಸ್ಪರ್ಶದಿ ಬಿಡಿಸುತಿರೆ.
ಸ್ವಾರ್ಥದ ಕಣ್ಣಿಗೆ ಬಟ್ಟೆಯ ಬಿಗಿಯುತ
ಜಿಗಿವನು ಹಿಡಿವವರಾಡಿಸುತ.

ಮನಸನು ಬೆತ್ತಲೆಗೊಳಿಸಲಿ ಮುಗ್ಧರು
ಮೋಹದ ಬಟ್ಟೆಯ ಬಿಚ್ಚುತಲಿ.
ಹೃದಯವ ತೊಳೆಯಲಿ ಜೇನ್ಮಳೆಹನಿಗಳು
ನಿತ್ಯವು 'ಜೀವ'ನ ತೋಯಿಸಲಿ.

ಡಿ.ನಂಜುಂಡ
12/11/2013

ಗುರುವಾರ, ನವೆಂಬರ್ 7, 2013

ನಾನು ನಾನಲ್ಲ



ನಾನು ನಾನೆನೆ ಅದು ನಾನಲ್ಲ.
ನಾನು ತಾನನವೆನೆ ಅದು ನಾನು.

ತನುವಲ್ಲ ಮನವಲ್ಲ ನೋವಲ್ಲ ನಲಿವಲ್ಲ
ಕಣಕಣದಿ ರಿಂಗಣಿಪ ತಾನನವು ನಾನು.
ಗುರುಪದದ ಸಂಚರವು ಮತ್ತದರ ಇಂಚರವು
ಅಂತರಂಗದ ಮೌನಮಾರ್ದನಿಯು ನಾನು.

ನಿಯತಸೃಷ್ಟಿಯ ಗೀತೆಯೊಳವಿತಿರುವ ಬೀಜವದು
ಮೊಳೆತು ಬೆಳೆಯುವ ಪರಿಯ ಪದದಿರವು ನಾನು.
ಬೇರ ಸಾರವ ಹೀರಿ ಪಲ್ಲವಿತ ಹಸಿರೆಲೆಯ
ಒಗರ ರಸವನು ಸವಿದ ಕೊರಳುಲಿಯು ನಾನು.

ಅರಿವೊಳಗೆ ಹೂಂಕರಿಸಿ ಹರಿಯುತಿಹ ಓಂಕಾರ-
ನಾದತರಂಗವೆಲ್ಲ ಮಮಕಾರವಲ್ಲ.
ಚಾರು ನಿಸ್ವನದೊಲವ ಚಲಿತ ಚರಣವ ಪಿಡಿದು
'ನಾನು' ಕಳೆದಿಹ ಕ್ಷಣದಿ, ನಾನು ನಾನಲ್ಲ.

ಡಿ.ನಂಜುಂಡ
7/11/2013

ಮಂಗಳವಾರ, ನವೆಂಬರ್ 5, 2013

ಕೇಳು ಬಾ ನೀರದನೆ ಹೃದಯದಾಳದ ಮಾತ!



ನೀಲ ಬಾನಲಿ ತೇಲಿ ಸಾಗುತಿಹ ನೀರದನೆ!
ಆಲಿಸೆನ್ನಯ ಮಾತ ಹೃದಯಸಖನೆ!
ಚಲಿಸಲಾರೆನು ಏಕೊ ನಿನ್ನಂತೆ ಅರೆಕ್ಷಣವು
ಮಳೆಯಾಗಿ ಕೆಳಗಿಳಿದು ಬಾ ಬೇಗನೆ.

ಎದೆಯ ಕೊರೆಯುವ ನೋವನರುಹುವೆನು ನಿನ್ನ ಬಳಿ
ನದಿಯ ಜಲದಲಿ ಇರಿಸಿ ಹರಿವಾಗಿಸು.
ಪದವಿರದ ವ್ಯಥೆಯೊಂದ ಮರೆಯುವೆನು ನಾನದರ
ಮಧುರಕೋಮಲಚರಣಹಿತಸ್ಪರ್ಶದಿ.

ಕಣಿವೆಯಾಳಕೆ ಜಿಗಿದು ನಗುನಗುತ ನಲಿದಾಡಿ
ಅನುದಿನವು ಬಂಡೆಗಳ ಸುತ್ತಿ ಬಳಸು.
ಹೊನಲರಾಣಿಯ ಮೊಗಕೆ ನಾಚಿಕೆಯ ಕೆಂಪಿಡುತ
ಮಣ್ಣ ಕಣಗಳ ಕುಣಿಸಿ ಬಣ್ಣವಿರಿಸು.

ಶರಧಿಯಲಿ ಒಂದಾಗಿ ಭಾವವರ್ಣಗಳೆಲ್ಲ
ಹಾರುತಿರಲಾಗಸಕೆ ಹಗುರವಾಗಿ.
ಕರಗಿ ಸುರಿಯುತಲಿರಲು ಆಸೆಗಳ ಕಾರ್ಮುಗಿಲು
ಗಿರಿಯಾಗೆ ಉಳಿಯುವೆನು ನಾನೆಂದಿಗೂ.

ಡಿ.ನಂಜುಂಡ
5/11/2013

ಶನಿವಾರ, ನವೆಂಬರ್ 2, 2013

ನಾನೆಂಬ ನಂಟಿನಲಿ ಅಂಟದಿರು ಎಲೆ ಮನವೆ!



ನಾನೆಂಬ ಭಾರವನು ಕೆಳಗಿಳಿಸು ಎಲೆ ಮನವೆ!
ಸಂತತವು ಅರಳುತಲಿ ಹಗುರವಾಗು.
ಎದೆಯೊಳಗ ಸುರಿಯುತಿಹ ಭಾವಗಳ ಧಾರೆಯನು
ಬಯಲ ಹರಹಲಿ ಇರಿಸಿ ಲೀನವಾಗು.

ತಂದಿಲ್ಲ ಮಕುಟವನು ಬರುವಾಗ ಈ ಜಗಕೆ
ಬಿಡುವಾಗ ನನದೆಂಬ ಚಿಂತೆಯೇಕೆ?
ಹಣ್ಣುಗಳ ಕಳಚುತಿಹ ಮರದಂತೆ ನೀನಾಗು
ಫಲವ ಬಯಸುವ ಕರ್ಮಬಂಧವೇಕೆ?

ಹಲಸಿನಾ ಹಣ್ಣಿನಲಿ ಅಂಟಿರುವ ನೊಣದಂತೆ
ಒದ್ದಾಟ ನಿನಗೇಕೆ ನಂಟಿನೊಳಗೆ?
ತಂದಿದ್ದು ಕಳೆದಿಲ್ಲ ಕಳೆದದ್ದು ನಿನದಲ್ಲ
ಸಿಲುಕದಿರು ಆಸೆಗಳ ಗಂಟಿನೊಳಗೆ.

ಚರದಿರವ ನೀ ಮರೆತು ಸ್ಥಿರವಾಗಿ ಹರಿಯುತಲಿ
ಒಂದಾಗು ಜಗದೊಲವ ಬಯಲಿನೊಳಗೆ.
ಕಡಲಿನೊಡಲನು ಸೇರಿ ಹೆಸರನ್ನು ತಾ ಕಳೆದ
ಹೊನಲಂತೆ ಬೆರೆತುಬಿಡು ಅರಿವಿನೊಳಗೆ.

ಡಿ.ನಂಜುಂಡ
03/11/2013