ಅತ್ತ ಮುಗಿಲಲಿ ಬೆಳ್ಳಿ ಮೂಡಿತು
ಕತ್ತಲುದರವು ಸೀಳಿತು
ಮತ್ತಕೋಕಿಲಚಾರುನಿಸ್ವನ-
ವಿತ್ತ ಬುವಿಯೊಳು ಮೊಳಗಿತು
ಕಂದನೋರ್ವನು ಕಣ್ಣ ಬಿಟ್ಟನು
ಬಂದನಾ ಗಿರಿಯೋರೆಗೆ
ಅಂದಚಂದದ ರಂಗನಿತ್ತನು
ಇಂದು ನಿನ್ನೆಯ ಸಂಧಿಗೆ
ಬಾನ ಮಲ್ಲಿಗೆ ಹೂವ್ಗಳೆಲ್ಲವು
ಬನದ ಮಾಳಿಗೆಗಿಳಿಯಲು
ಮೌನಗಾನದೊಳವಿತ ತಾನಕೆ
ಹನಿಗಳಾಡುತ ಕುಣಿಯಲು
ಎಲ್ಲ ಖೇಚರಗಳಿಗೆ ಕಾತರ
ಬೆಳಕ ಹಬ್ಬದ ಸಡಗರ
ಮೇಲೆ ಹಾರುವ ದೂರ ಸಾಗುವ
ಕಾಳ ಹೆರಕುವ ಆತುರ
ಕಾಲತಾಳಕೆ ಕುಣಿವ ವಿಶ್ವದ
ಮೂಲದಲ್ಲಿರೆ ಸೂತ್ರವು
ನಾಳೆಯಾಗುವ ಸೂರ್ಯನುದಯಕೆ
ಬೆಳಕು-ಕತ್ತಲ ಗಣಿತವು
ಡಿ.ನಂಜುಂಡ
22/10/2014