ಶನಿವಾರ, ಜನವರಿ 24, 2015

ಕುಂತೀಪ್ರಲಾಪ

ಕಂದನಂದವು ಮೊಗದ ಚೆಂದವು
ತಂದೆಯಂತಿದೆ ಎಂದರೆ?
ಒಂದು ದಿನದಲಿ ಹೇಗೆ ಬಂದನು
ಎಂದರಾಗದೆ ತೊಂದರೆ?

ಹೂವನಿಡದೇ ಫಲವ ಬಿಡುವುದೆ?
ಯಾವ ಬಳ್ಳಿಯದೆಂದರೆ?
ಭಾವವಿರದೇ ಕವಿತೆಯಿರುವುದೆ?
ಯಾವುದೀ ಬಗೆಯೆಂದರೆ?

ಏನ ಮಾಡಲಿ ಎತ್ತ ಪೋಗಲಿ
ಕಾಣದಾಗಿದೆ ಕಂದನೆ!
ಕ್ಷಣದಿ ವರವನು ಒರೆಗೆ ಹಚ್ಚಲು
ಮಾನವನ್ನೇ ತೆತ್ತೆನೆ?

ನನ್ನ ತಾಯ್ತನಕೇಕೆ ನಿಂದೆಯು
ಇನನ ಹೆತ್ತವರಾರದು?
ಮೌನದುದರದಿ ಮಾತು ಮೊಳೆಯದೇ?
ತಾನದಮ್ಮನದಾರದು?

ಹರಿಯ ಚರಣದ ಸತತಧಾರೆಯೆ
ಹರನ ಜಟೆಯೊಳ ಬಂಧಿಯೆ!
ಹರಿಯಬಿಡುವೆನು ನಿನ್ನ ಹರಿವಲಿ
ಹರಸಲಾರೆಯ ಗಂಗೆಯೆ!

ಕರುಳ ಕುಡಿಯನು ಮಡಿಲಿಗಿಡುವೆನು
ಪೊರೆಯಲಾರೆಯ ಪಾಪವ?
ಕರ್ಮಭಾರವ ಮೇಲೆ ತೇಲಿಸಿ
ತಣಿಸಲಾರೆಯ ತಾಪವ?

ಡಿ.ನಂಜುಂಡ
25/01/2015



ಬುಧವಾರ, ಜನವರಿ 14, 2015

ಸಂಭ್ರಮಿಸು

ಬಿತ್ತರದ ಆಗಸದಿ ಕತ್ತಲೆಯ ತಾ ಕಳೆದು
ಬತ್ತದುತ್ಸಾಹದಲಿ ಸಂಚರಿಸೆ ರವಿಯು
ನಿತ್ಯ ಋತುಪರ್ವಗಳ ಉಲ್ಲಾಸರಸದಲ್ಲಿ
ಉತ್ತರಕೆ ಪದವಿರಿಸಿ ಹಾಡಿದನು ಕವಿಯು

ಎಳ್ಳು ಬೆಲ್ಲವ ತಿಂದು ಒಳ್ಳೆಯಾ ಮಾತಾಡು
ಬಲ್ಲವರ ಸೂಳ್ನುಡಿಗಳನು ಸಂಕಲಿಸು
ಹಲ್ಲುಗಳ ನಡುವಿರಿಸಿ ಕಬ್ಬ ಮೆಲ್ಲುತ ಸಾಗು
ಗೆಲ್ಲುಗಳ ಸಂಕ್ರಮಿಸಿ ಸಂಭ್ರಮಿಸಿ ಸುಖಿಸು

ಅಣುವಣುವು ಕ್ಷಣವೆಣಿಪ ತಾಳಕ್ಕೆ ಝಣಝಣಿಸೆ
ಮನಕೆ ಸಂತಸವೀವ ಭಾವವನು ಹರಿಸು
ಮೌನಘನಚೇತನದ ಕಣದಿ ನುಡಿಗಳನೊಕ್ಕಿ
ಅನವರತ ಕುಣಿಕುಣಿದು ಸುಗ್ಗಿಯಾಚರಿಸು

ಡಿ.ನಂಜುಂಡ

15/01/2015

ಭಾನುವಾರ, ಜನವರಿ 11, 2015

ಉಪ್ಪಿಟ್ಟಿನ ಸ್ವಗತ

ಇಡ್ಲಿಗಾದರೆ ಚಟ್ನಿ, ಸಾಂಬಾರು, ಸಾಗುಗಳು,
ಬಗೆಬಗೆಯ ಪಲ್ಯಗಳ ರುಚಿರುಚಿಯು ಏಕೆ?
‘ಉಪ್ಪಿಟ್ಟು’ ನಾನಾಗಿ ಬಹು ಉದರ ಸೇರಿದರೂ
ಒಂದಿನಿತು ಗೌರವವೂ ನನಗಿಲ್ಲವೇಕೆ?

“ಉಪ್ಪಿಟ್ಟು!” ಥೂ! ಎಂದು ಹೀಗಳೆಯುವವರೆಲ್ಲ
ಮರೆತಿಹರು ‘ಮಾನ’ವನು ಉಳಿಸಿದಾ ದಿನವ
ಎಂಟು ಜನ ದಂಡಾಗಿ ಬಂದಾಗ ಮಾಡುವರೆ
ಅವರ ನೆಚ್ಚಿನ ಇಡ್ಲಿ ಮತ್ತು ವ್ಯಂಜನವ?

ಬಡವಬಲ್ಲಿದರೆಂಬ ಭೇದವಿಹುದೇ ನನಗೆ
ಖಾಲಿಯಾಗದು ಎಂದೂ ರವೆಯ ಹಳೆ ಡಬ್ಬ
ಹೊತ್ತಿನರಿವಿಲ್ಲದಾ ಹತ್ತು ನೆಂಟರು ಬಂದು
ತಿಂದುಂಡು ತೇಗುತಿರೆ ಅಂದೆನಗೆ ಹಬ್ಬ

ಮದುವೆಯಾಗದ ಮಂದಿ ನೆಚ್ಚಿಹರು ನನ್ನನ್ನೇ
ತಿಳಿದುಕೋ ಮಾನವನೆ! ಉಪ್ಪಿಟ್ಟ ಮಹಿಮೆ
ಹೆಂಡತಿಯು ತವರಿನಲಿ ತಳವೂರಿ ಕುಳಿತಿರಲು
ಕಾಪಿಟ್ಟೆನಲ್ಲವೇ ಗಂಡನಾ ತಾಳ್ಮೆ   

ಡಿ.ನಂಜುಂಡ
11/01/2015



ಶನಿವಾರ, ಜನವರಿ 3, 2015

ಭಾಷಣ

ಕಾರ್ಯಕ್ರಮಾಧ್ಯಕ್ಷಪೀಠದೊಳಗಾರೂಢ
ಆತ್ಮೀಯ ಸನ್ಮಿತ್ರ ಮಾನ್ಯ ಶಾಸಕರೆ!
ವೇದಿಕೆಯ ಮೇಲಿರುವ ಅತಿಥಿ ಅಭ್ಯಾಗತರೆ!
ಓ ನನ್ನ ನೆಚ್ಚಿನಾ ಬಂಧುಭಗಿನಿಯರೆ! 

ಒಂದೆರಡು ಮಾತುಗಳ ಆಡಿ ಮುಗಿಸುವೆನೀಗ
ಭಾಷಣದ ರೀತಿಯದು ತಿಳಿದಿಲ್ಲ ಎನಗೆ
ತಪ್ಪು ಒಪ್ಪುಗಳಿಗೆಲ್ಲ ಚಪ್ಪಾಳೆ ಹೊಡೆಯುವಾ
ನಿಮ್ಮಂಥ ಕೇಳುಗರು ವರದಂತೆ ನನಗೆ

ಅಮೆರಿಕಾ ದೇಶಕ್ಕೆ ಮೊನ್ನೆ ನಾ ಹೋಗಿದ್ದೆ
ಅಲ್ಲಿನಧ್ಯಕ್ಷರನು ಭೇಟಿಯಾಗಿದ್ದೆ
ಬಹುರಾಷ್ಟ್ರ ವ್ಯಾಪಾರದೊಪ್ಪಂದವೊಂದರಲಿ
ಶತಕೋಟಿ ಹೂಡಿಕೆಯನೊಳಗೆ ತಂದಿದ್ದೆ

ಅಭಿವೃದ್ಧಿ ಪರವಾದ ಮಂತ್ರಗಳನುಚ್ಚರಿಸಿ
ಪ್ರತಿಪಕ್ಷತಂತ್ರಗಳ ಮೆಟ್ಟಿ ನಿಂತಿರುವೆ
ಸಾಮಾನ್ಯ ಪ್ರಜೆಯೊಬ್ಬನಾ ಬವಣೆಗಳನರಿತು
ಹಗಲಿರುಳು ಎಡಬಿಡದೆ ಹೋರಾಡುತಿರುವೆ

ಶುದ್ಧ ಕುಡಿಯವ ನೀರ ಹಳ್ಳಿ ಹಳ್ಳಿಗೆ ಹರಿಸಿ
ಜನರ ಮೊಗದಲಿ ನಿತ್ಯ ನಗುವ ತಂದಿರುವೆ
ಮೂಟೆಮೂಟೆಗಳಷ್ಟು ಕಾಳುಗಳ ಕೊಟ್ಟಿರುವೆ
ಪ್ರತಿಯೊಬ್ಬ ಬಡವನಿಗೂ ಸೂರನಿತ್ತಿರುವೆ

ಇದುವರೆಗೆ ತಾಳ್ಮೆಯಲಿ ಕುಳಿತು ಕೇಳಿದ ನಿಮಗೆ
ನೂರೊಂದು ನಮನಗಳ ಮೊದಲು ಅರ್ಪಿಸುವೆ
ಮತ್ತೊಮ್ಮೆ ಎಲ್ಲರಿಗೂ ನಮನಗಳ ಸಲ್ಲಿಸುತ
ಮಾತುಗಳ ಮುಗಿಸುತಲಿ ಕೈಮುಗಿಯುತಿರುವೆ

ಡಿ.ನಂಜುಂಡ
03/01/2015