‘ಮರ’ ‘ಮರ’
ಎಂದರೆ ಸರಸರ ಬರುವನು
ವರವೀಯುತಲಾ
ಶ್ರೀರಾಮ
ಮರದೊಳಗಿನ
ಮಂದಾಗ್ನಿಯ ತೆರದಲಿ
ಅರಿವೊಳಗಿಹನಾ
ರಘುರಾಮ
ಹರಿವ ಹೊನಲುಗಳ
ಬೆಳ್ನೊರೆ ನಗುವಲಿ
ಇರವನು ತೋರುವನರೆ
ಚಣದಿ
ಮೆರೆವನು
ಮೌನದ ತಳದುದ್ದಗಲದಿ
ಸರಯೂ ನೀರಂತವಸರದಿ
ಬೀಸುವ ಗಾಳಿಯೊಳೀಸುತ
ಬರುವನು
ಉಸಿರೊಳು
ಧುಮುಕುತಲೇಳುವನು
ಹಸಿರಲೆ ಕುಡಿಗಳಿಗೀಯುತ
ಹೊಸತನು
ನಸುನಗುತಲಿ
ಕುಣಿದಾಡುವನು
ಹೊಲದೊಳಗಿಹನಾ
ಹಾಲ್ದೆನೆಕಾಳೊಳು
ನೆಲದೊಳಗಾ
ಜಲರೂಪದೊಳು
ಒಲವಿನಲುಸುರಿದ
ಒಂದಕ್ಷರವನು
ಹಲವಾಗಿಸುವಾ
ಮಂತ್ರದೊಳು
ಹಕ್ಕಿಗಳುಲಿಗಳ
ಬಾನಲಿ ಹರಹುತ
ಒಕ್ಕುವನಾ
ಹರಿ ಪ್ರಣವವನು
ಅಕ್ಕರದುದರಕೆ
ಅರ್ಥವ ತೂರಿ
ಹೊಕ್ಕೆದೆಯೊಳು
ತಾ ಮೊಳಗುವನು
ಡಿ.ನಂಜುಂಡ
29/03/2015