ಶನಿವಾರ, ಏಪ್ರಿಲ್ 29, 2017

ಕಾಯಕ

ದುಡ್ಡು ಗಳಿಸಬೇಕೋ? ಅದನು
ಗುಡ್ಡೆ ಹಾಕಬೇಕೋ?
ದುಡಿಮೆ ಮಾಡಿ ತಿಂದುಣ್ಣುವ
ತೃಪ್ತಿಯೊಂದೆ ಸಾಕೋ

ಕೆಲಸಗೈವ ವೇಳೆಯಲ್ಲಿ
ಗೊಣಗುಟ್ಟುವುದೇಕೋ?
ಹಣವೆಣಿಸುವ ಕ್ಷಣಕೆ ಮಾತ್ರ
ಮನವಟ್ಟದೊಳೇಕೋ?

ತ್ಯಾಗದ ತಳಪಾಯವಿರದ
ಭೋಗಸೌಧವೇತಕೊ?
ಕರ್ಮದ ಕೊಳೆಯಂಟದಂತೆ
ಕಾಯಕವಿರೆ ಸಾಕೊ

ಪ್ರತಿನಿಮಿಷದಿ ಸಂತೃಪ್ತಿಯ
ಪ್ರತಿಫಲಗಳು ಮಾಗಿ
ಮೊಗಮೊಗದಲಿ ಸಂತುಷ್ಟಿಯ
ಕೈಲಾಸವು ಬಾಗಿ
ಸಂತತಸುಖನದಿಯುಕ್ಕಲಿ
ಶಿವಮೊಗದೆಡೆ ಸಾಗಿ

ಡಿ.ನಂಜುಂಡ

29/04/2017

ಶನಿವಾರ, ಏಪ್ರಿಲ್ 22, 2017

ಹೇಳು ಮಾತೆ!

ಮತ್ತೇತಕೆ ವನವಾಸವು?
ಹೇಳು ಮಾತೆ! ಸೀತೆ!
ಮಾತಿನಾತ್ಮದರ್ಥವಿಂದು
ದೇಹಭಾವ ತ್ಯಜಿಸಿತೆ?

ಅಂತರಾರ್ಥಶಕ್ತಿಯಂದು
ವ್ಯೋಮಯಾನವೇರಿತೆ?
ಅಗಸನೀಗ ಕುಹಕವಾಡೆ
ಅರ್ಥಾಂತರವಾಯಿತೆ?

ಮಾತಿಗೆ ಹತ್ತರ್ಥಗಳನು
ಹೊಂದಿಸೆ ನೀನಪಹೃತೆ!
ಮೋಹಾರ್ಥಕೋಟಿಗಳನು
ತಾಪಾಗ್ನಿಯು ದಹಿಸಿತೆ?

ಮೌನಗರ್ಭದೊಳಗೆ ಮಲಗಿ
ಮಾತು ನಿದ್ದೆಗೈವುದೆ?
ಹೇಳೆ ಮಾತೆ! ರಾಮಗೀತೆ!
ಮತ್ತೆ ಅರ್ಥವಳುವುದೆ? 

ಡಿ.ನಂಜುಂಡ
22/04/2017


ಶುಕ್ರವಾರ, ಏಪ್ರಿಲ್ 21, 2017

ದರ್ಶನವ ನೀಡೈ ಜಗನ್ಮಾತೃಕೆ!

ಸುಕುಮಾರಿ ಸುರನಾರಿ ಪೂರ್ಣೇಂದುರೂಪಸಿರಿ
ಕನಕಾಂಗಿ ಜಗದೇಕಘನಸುಂದರಿ
ಅಪರೆ ಅಪ್ಸರೆ ಅಮರೆ ಅಜರೆ ಅಗಣಿತತಾರೆ
ಅರ್ಥಧರೆ ಆದ್ಯಂತಶೂನ್ಯಾಂಬರೆ

ಹೇ ತ್ರ್ಯಕ್ಷರಾಗರ್ಭತತ್ತ್ವಾರ್ಥಪೂರೆ
ಬಂಧರಾಹಿತ್ಯ ಪ್ರೇಮಾವತಾರೆ
ಪರಿಪೂರ್ಣಪದವರ್ಣಪೂರ್ಣದಿಂ ಪ್ರತಿಫಲಿತ
ಭಾವಕಲ್ಪೋಕ್ತಸಾಹಿತ್ಯಧಾರೆ

ಉಕ್ತಾಕ್ಷರಾವರ್ತನೋಚ್ಚಾರಶಕ್ತಿಧರೆ
ಲಲಿತವಾಕ್ಯಾಂಗಸೌಂದರ್ಯಭಾರೆ
ಹೇ ವಾಣಿ ಗೀರ್ವಾಣಿ ಕಲ್ಯಾಣಿ ಕಲ್ಪಮಣಿ 
ಜಿಹ್ವಾಗ್ನಿಕುಂಡದೊಳಗೆದ್ದು ಬಾರೆ 

ಉದಾತ್ತಾನುದತ್ತಾದಿ ಸ್ವರಸಂಭ್ರಮೋತ್ಸವದಿ
ಉತ್ಕಂಠಿತಾಮಂತ್ರಣೋದ್ಗಾರಕೆ
ಉತ್ಥಾನಮಾರ್ಗದೊಳಗುತ್ತುಂಗರಥವೇರಿ
ಶಬ್ದಮಣಿನೂಪುರವನಾಲಿಸಲಿಕೆ
ದರ್ಶನವ ನೀಡೈ ಜಗನ್ಮಾತೃಕೆ

ಡಿ.ನಂಜುಂಡ

21/04/2017

ಶುಕ್ರವಾರ, ಫೆಬ್ರವರಿ 24, 2017

ಬಾ ಶಿವ ಬಾ ಶಿವ

ಬಾ ಶಿವ ಬಾ ಶಿವ ಸಾಂಬಸದಾಶಿವ
ಬಾ ಶಿವ ಬಾ ಶಿವ ಹೃದಯಶಿವ

ಸೃಷ್ಟಿಯ ಸಂತತ ಸುಂದರಮೌನಾ-
ವೃಷ್ಟಿಧಾರಾಭಿಷಿಕ್ತಶಿವ
ನಾನಾರೂಪವಿಲೀನ ವಿಶೇಷಿತ
ವ್ಯೋಮಾಂತರ್ಗತ ಧ್ಯಾನಶಿವ

ಋಷಿಗಣಸಂಸ್ತುತ ನಾಮಾವಲಿಗತ
ಭಾವಾಕರ್ಷಿತ ಭವ್ಯಶಿವ
ಇಷ್ಟಾನಿಷ್ಟನಿವೇದನಮಾತ್ರಕೆ
ಕಷ್ಟವ ಕಳೆಯುವ ತುಷ್ಟಶಿವ

ನಿತ್ಯಾನಿತ್ಯವಿವೇಕವಿಮರ್ಶಿತ
ಚಿದ್ರೂಪಾತ್ಮಕ ತತ್ತ್ವಶಿವ
ಮತಿಸಂಚಾಲಿತ ಕಾರಣಕಲ್ಪಿತ
ಪಂಚಾಕ್ಷರಮಂತ್ರಾತ್ಮಶಿವ

ವಿಶ್ವಾಗೋಚರಶಕ್ತ್ಯಾಲಂಬಿತ
ವಿಶ್ವವಿಶಾಲಾದೃಷ್ಟಶಿವ
ವಿಶ್ವವಿಲೋಕಿತ ವಿಶ್ವವಿರಾಜಿತ
ವಿಶ್ವೇಶ್ವರ ಹೇ ಚಾರುಶಿವ

ಡಿ.ನಂಜುಂಡ

24/02/2017

ಸೋಮವಾರ, ಫೆಬ್ರವರಿ 13, 2017

ಮಾರೀ ಹಬ್ಬ

ಬಂದಿದೆ ಬಂದಿದೆ ಮಾರೀ ಹಬ್ಬ
ಜನಜಂಗುಳಿಯೋ ಅಬ್ಬಬ್ಬ!
ಜಗವನೆ ಜನತೆಗೆ ಮಾರಲು ಬಂದಿವೆ
ವಿಧವಿಧದಂಗಡಿಗಳ ದಿಬ್ಬ

ರಸ್ತೆಗಳಿಕ್ಕೆಲಗಳನೂ ಮುತ್ತಿವೆ
ಸುತ್ತಿವೆ ಚಕ್ರವ್ಯೂಹದೊಲು
ಒಳಗಡಿಯಿಟ್ಟರೆ ಹೊರಬರದಂತೆ
ತಡೆಗಟ್ಟುತಲಿವೆ ವಸ್ತುಗಳು

‘ಕೊಳ್ಳಿರಿ, ಬನ್ನಿರಿ’ ಎಂದರೆ ಸುಬ್ಬ
ಮಾತಿನಲೆಳೆವನು ಇದಿನಬ್ಬ
ಮನವಿಬ್ಬಗೆಯಲಿ ಮುಂದಡಿಯಿಟ್ಟರೆ
ಹಿಂದಕೆ ನೂಕುವನಿನ್ನೊಬ್ಬ

ಕೊಳ್ಳಲು ನುಗ್ಗುವ ಮಂದಿಗಳಾರು
ತಳ್ಳುತ ಹಿಗ್ಗಿ ನಲಿವರು ನೂರು
ಅತ್ತಿತ್ತಗಲದೆ ಸುಮ್ಮನೆ ನಿಂತರೂ
ಆ ಕಡೆಗೀಕಡೆಗೊತ್ತುವರು

ಸಾಗರಮಥನದ ಕಡಗೋಲಾದ
ವಾಸುಕಿಯೇ ಮೈದಳೆದಂತೆ
ಕಾಣುತಲಿಹುದು ಸರತಿಯ ಸಾಲು
ದೇವರ ದರುಶನಕಂತೆ

ಸಾಗರದುಬ್ಬರದಲೆಗಳ ಅಬ್ಬರ
ತಾನೇ ಇಲ್ಲಿಗೆ ಬಂದಿದೆಯೋ?
ಇಲ್ಲಿಯ ಗದ್ದಲಕೆದ್ದಿಹ ದೇವರ
ಗದ್ದುಗೆಯೇ ಅಲ್ಲಲುಗಿದೆಯೋ?

ಡಿ.ನಂಜುಂಡ

14/02/2017

ಮಾರೀ ಹಬ್ಬ

ಬಂದಿದೆ ಬಂದಿದೆ ಮಾರೀ ಹಬ್ಬ
ಜನಜಂಗುಳಿಯೋ ಅಬ್ಬಬ್ಬ!
ಜಗವನೆ ಜನತೆಗೆ ಮಾರಲು ಬಂದಿವೆ
ವಿಧವಿಧದಂಗಡಿಗಳ ದಿಬ್ಬ

ರಸ್ತೆಗಳಿಕ್ಕೆಲಗಳನೂ ಮುತ್ತಿವೆ
ಸುತ್ತಿವೆ ಚಕ್ರವ್ಯೂಹದೊಲು
ಒಳಗಡಿಯಿಟ್ಟರೆ ಹೊರಬರದಂತೆ
ತಡೆಗಟ್ಟುತಲಿವೆ ವಸ್ತುಗಳು

‘ಕೊಳ್ಳಿರಿ, ಬನ್ನಿರಿ’ ಎಂದರೆ ಸುಬ್ಬ
ಮಾತಿನಲೆಳೆವನು ಇದಿನಬ್ಬ
ಮನವಿಬ್ಬಗೆಯಲಿ ಮುಂದಡಿಯಿಟ್ಟರೆ
ಹಿಂದಕೆ ತಳ್ಳುವ ಮತ್ತೊಬ್ಬ

ಕೊಳ್ಳಲು ನುಗ್ಗುವ ಮಂದಿಗಳಾರು
ತಳ್ಳುತ ಹಿಗ್ಗಿ ನಲಿವರು ನೂರು
ಅತ್ತಿತ್ತಗಲದೆ ಸುಮ್ಮನೆ ನಿಂತರೂ
ಆ ಕಡೆಗೀಕಡೆಗೆಳೆಯುವರು

ಸಾಗರಮಥನದ ಕಡಗೋಲಾದ
ವಾಸುಕಿಯೇ ಮೈದಳೆದಂತೆ
ಕಾಣುತಲಿಹುದು ಸರತಿಯ ಸಾಲು
ದೇವರ ದರುಶನಕಂತೆ

ಸಾಗರದುಬ್ಬರದಲೆಗಳ ಅಬ್ಬರ
ತಾನೇ ಇಲ್ಲಿಗೆ ಬಂದಿದೆಯೋ?
ಇಲ್ಲಿಯ ಗದ್ದಲಕೆದ್ದಿಹ ದೇವರ
ಗದ್ದುಗೆಯೇ ಅಲ್ಲಲುಗಿದೆಯೋ?

ಡಿ.ನಂಜುಂಡ

14/02/2017