ಬುಧವಾರ, ಜುಲೈ 26, 2017

ತಿಳಿವೊಂದ ತೋರು

ನಿನಗೇನನರ್ಪಿಸಲಿ? ನಿನ್ನ ಹೇಗರ್ಚಿಸಲಿ?
ನಿನ್ನ ಬಿಟ್ಟಾವುದಿದೆ? ಹೇಳು ಕೃಷ್ಣ
ನಾನಿಚ್ಛಿಸಿದ ವಸ್ತು ನಿನ್ನದಾಗಿರುವಾಗ
ಕೊಡಲೇನು ಉಳಿದಿಹುದು? ತಿಳಿಸು ಕೃಷ್ಣ

ಬಯಸಿದಾ ಮನವನ್ನೆ ಬಯಲಿನಲಿ ಹರಿಬಿಟ್ಟು
"ತೆಗೆದುಕೋ, ಬಾ ಕೃಷ್ಣ" ಎನ್ನಲೇನು?
ಆ ಮನವು ನಿನಗಿಂತ ಬೇರೆಯಾದೀತೇನು?
ನಿನ್ನನ್ನೆ ನಿನಗೆಂದು ಕೊಟ್ಟ ಹಾಗೇನು?

“ನೀನಲ್ಲಿ ನಾನಿಲ್ಲಿ” ಎಂದು ಚಿಂತಿಸುವಾಗ
ಇಲ್ಲಿ-ಅಲ್ಲಿಯ ನಡುವೆ ಇರುವುದೇನು?
ಅಂತರವ ಚಿಂತಿಸಿದ ಮತಿಯ ಮಂತ್ರವ ಪಠಿಸಿ
ನಿನ್ನ ಪೂಜಿಪ ಬಗೆಯ ಕೇಳಲೇನು?

ಕೇಳಿದವನಾನೊಬ್ಬ ನಿನ್ನ ಬಿಟ್ಟಿಹೆನೇನು?
ಬಿಟ್ಟಿರುವ ಬಗೆಯಿರಿಸಿ ನೋಡುತಿಹೆಯ?
ನಿನ್ನ ಪೂಜಿಪೆನೆಂಬ ಸಂಕಲ್ಪವೊಂದಿಹುದೆ?
ಚಿತ್ತದೊಳಗದನೆಸೆದು ಆಡುತಿಹೆಯ?

ಜಗದಗಲ ನೋಟದಲಿ ಜಗವನ್ನೆ ನೋಡುತಿಹ
ನೀನೆ ಜಗವಾಗಿರಲು ನಾನು ಯಾರು?
ನನ್ನಿಂದ ನೀ ಬೇರೆಯೆಂದೆಣಿಪ ನನ್ನೆಣಿಕೆ-
ಕುಣಿಕೆಗಳ ಕಳೆವ ತಿಳಿವೊಂದ ತೋರು

ಡಿ.ನಂಜುಂಡ

26/07/2017

ಸೋಮವಾರ, ಜುಲೈ 24, 2017

ಕೃಷ್ಣಾರ್ಪಣಂ

ಕೃಷ್ಣಾರ್ಪಣಂ...
ಸರ್ವಂ ಕೃಷ್ಣಕಾರುಣ್ಯಜಂ|

ಕೃಷ್ಣವಿನೋದಂ ಕೃಷ್ಣವಿಚಾರಂ
ಕೃಷ್ಣಾನಂದಂ ಕೃಷ್ಣಾರ್ಪಣಂ|
ಕೃಷ್ಣಕಲಾಪಂ ಕೃಷ್ಣವಿಲಾಪಂ
ಕೃಷ್ಣಾಲಾಪಂ ಕೃಷ್ಣಾರ್ಪಣಂ|

ಕೃಷ್ಣಾರೋಪಿತ ಭಾವನಿಬಂಧಂ
ಕೃಷ್ಣವಿರಾಜಿತ ಛಂದಃಪ್ರಾಸಂ|
ಕೃಷ್ಣಾವರ್ತಿತ ಚರಣನಿನಾದಂ
ಕೃಷ್ಣೋದ್ದಿಷ್ಟಂ ಕೃಷ್ಣಾರ್ಪಣಂ|

ಪ್ರಾಣೋಪಾನಂ ವ್ಯಾನೋದಾನಂ
ಕೃಷ್ಣಸಮಾನಂ ಕೃಷ್ಣಾರ್ಪಣಂ|
ಅಂತಃಕರಣಂ ದೇಹಾವರಣಂ
ಜನನಂ ಮರಣಂ ಕೃಷ್ಣಾರ್ಪಣಂ|

ಡಿ. ನಂಜುಂಡ

24/07/2017

ಶುಕ್ರವಾರ, ಜುಲೈ 21, 2017

ತಿನ್ನಲಿನ್ನೇನಿದೆ ಬಾಕಿ?

ಬಯಸಿದ್ದೆಲ್ಲಾ ತಿಂದೂ ತಿಂದೂ ಹಾಳಾಯಿತೆ ಹೊಟ್ಟೆ?
ಬಾಯಿಯ ಚಪಲಕೆ ಬಾಗಿ, ಖಾಲಿಯಾಯಿತೇ ತಟ್ಟೆ?

ಬಲುಚಳಿಯಿದೆ ನೋಡೆನ್ನುತ ಕುರುಕಲು ಡಬ್ಬಕೆ ಕೈಹಾಕಿ
ಮೂರೂ ಹೊತ್ತು ಮುಕ್ಕುತಲಿದ್ದರೆ ಅಲ್ಲೇನುಳಿಯಿತು ಬಾಕಿ?

ಮೆಣಸಿನ ಬೋಂಡ, ಮಸಾಲೆ ಪೂರಿ, ಆಲೂಬಜಿಗಳ ತಿಂದು
ಇಂದೇ ಕೊನೆಯ ಹಲಸಿನ ಸಂತೆ, ಬಿಡಬಾರದು ಎಂದು

ಬಿಸಿ ಕಡುಬೊಂದು, ಮೂಳಕಗಳೆರಡನು ರುಚಿನೋಡುವ ಸಲುವಾಗಿ
ಒಂದೊಂದಾಗಿ ಹೊಟ್ಟೆಯೊಳಿಳಿಸಿ ತೇಗುತ ಮುಂದಕೆ ಸಾಗಿ

ತಿಂದದ್ದೇನೂ ಇಲ್ಲ, ಆದರೂ ಹೊಟ್ಟೆಯೇಕೋ ಸರಿಯಿಲ್ಲ
ಏನಾಯಿತೋ!? ಇದು ಏಕಾಯಿತೊ!? ಆ ದೇವನೊಬ್ಬನೆ ಬಲ್ಲ

ಎನ್ನುತ ಗೊಣಗೊಣಗುಟ್ಟುತ ಕೊನೆಗೆ ತಿಂದದ್ದೆಲ್ಲವ ಹೊರಹಾಕಿ
ಮತ್ತೆ ಹುಡುಕುವರು ನೋಡು, ತಿನ್ನಲಿನ್ನೇನಿದೆ ಬಾಕಿ?

ಡಿ.ನಂಜುಂಡ

21/07/2017

ಶನಿವಾರ, ಜೂನ್ 3, 2017

ಭವಬಂಧಿಯೇಕೆ?

ಭಾವವೇ! ನೀನೇಕೆ ಭವಬಂಧಿಯಾದೆ?
ಕಾಮಾದಿವೈರಿಗಳ ಸಂಬಂಧಿಯಾದೆ

ಜಗದೊಲವು ಸಮರಸದಲೆಲ್ಲಲ್ಲೂ ಪಸರಿಸಿದೆ
ಇದು ಮೇಲು ಅದು ಕೀಳು ಎಂಬುದಿಲ್ಲ
ನಿತ್ಯಮುಕ್ತಾನುಭವದಾನಂದಸೃಷ್ಟಿಯಲಿ
ಸುಖದುಃಖದೇರಿಳಿತದಲೆಗಳಿಲ್ಲ

ಮರ ಚಿಗುರಿ ಕಾಯ್ಕಚ್ಚಿ ಪÀಕ್ವವಾದೊಡೆ ಕಳಚಿ
ನೆಲಕುದುರಿ ಮೊಳೆತು ಮರವಾಗುವಾಗ
ಪ್ರಕೃತಿಯಾ ತಾನನದಿ ತನ್ನತನವನು ಬೆಸೆದು
ಬಾಳುವಾ ಕಲೆಯು ಕಣ್ತುಂಬುವಾಗ

ನೋಡಿ ತಾ ಕಲಿಯದೆಯೆ ಬಾನ್ದನಿಯನರಿಯದೆಯೆ
ತಾಳ ತಪ್ಪುತ ಕುಣಿಯಲಾಸೆಯೇಕೆ?
ಜಗದೇಕ ಮಾಧುರ್ಯವರ್ಣಮೇಳಕೆ ಕುಣಿದು
ಬಂಧಿಯಾಗದೆ ಬಾಗಲಿಲ್ಲವೇಕೆ?
ಮೌನದೊಳ ಮಾತಾಗಬಾರದೇಕೆ?

ಡಿ.ನಂಜುಂಡ

03/06/2017