ಮಂಗಳವಾರ, ಏಪ್ರಿಲ್ 23, 2013

ಮೌನದ ಮನೆ-ಮನದ ಜಗಲಿ



ಮೌನವೆಂಬುದು ನಮ್ಮ
ನಿಜದ ಮನೆಯಾಗಿಹುದು
ಸ್ಥಿರಾಸ್ತಿಯಂತೆ ನಮಗೆ ಮೂಲಸೊತ್ತು.
ಮೌನದೊಳು ಸ್ಥಿರವಾಗಿ
ಮಾತುಗಳನಾಡುತಿರೆ
ನಮಗದುವೆ ಬದುಕಿನಲಿ ಚರದ ಸೊತ್ತು.

ಮನದ ಜಗಲಿಯ ಮೇಲೆ
ಕುಳಿತು ಆಡುವ ಮಾತ
ಕೇಳಬಾರದು ನಾವು ಕಿವಿಯಗೊಟ್ಟು.
ನೋಡುತ್ತಲಿರಬೇಕು
ಮಾತನಾಡುವ ಬಗೆಯ
ಮನೆಯೊಳಗೆ ಕುಳಿತಲ್ಲೆ ದೃಷ್ಟಿಯಿಟ್ಟು.

ಮೌನದಲಿ ಸ್ಥಿರವಾಗಿ
ಜಗಲಿಯನು ನೋಡಿದೊಡೆ
ಮನದ ಜಗಲಿಯೆ ಮಾಯ- ಮಾತುಗಳು ಇಲ್ಲ.
ಮಾತಿನಾ ಗದ್ದಲದಿ
ಮೌನವನು ಮರೆತಾಗ
ಜಗಲಿಯೊಂದಿದೆ ಅಲ್ಲಿ ಮನೆಯೆಂಬುದಿಲ್ಲ.

ಹಗಲಿರುಳಿನ ಬಿರುಬೆಸುಗೆ!



ಹಗಲಿರುಳಿನ ಸಮ್ಮಿಲನಕೆ
ಕೆಂಪಾಗಿದೆ ಮುಗಿಲು.
ಇಳಿಸೂರ್ಯನ ಮೃದುನೋಟಕೆ
ತಂಪಾಗಿದೆ ಹಗಲು.

ತಂಪೆರೆಯುವ ಹಾಲಿರುಳಿಗೆ
ಹಗಲೆಲ್ಲಿದೆ ಸನಿಹ?
ಬಿರುಬಿಸಿಲಿನ ನಡುಹಗಲಿಗೆ
ಇರುಳಿಲ್ಲದ ವಿರಹ.

ಸುಡುಹಗಲಿನ ಕಾವಿಳಿಸಲು
ಕಡಲೊಳು ರವಿ ಮುಳುಗಿ.
ನಡುಯಿರುಳಿನ ಕರಿಯಿಳಿಯಲು
ಎದ್ದನು ಜಗ ಬೆಳಗಿ.

ಇರುಳಂಚಿನ ಮೃದುಸ್ಟರ್ಶಕೆ
ಕಾದಿರೆ ಎಳೆ ಹಗಲು.
ಹಗಲಿರುಳಿನ ಬಿರುಬೆಸುಗೆಗೆ
ಕಾದಿದೆ ಜಗದೊಡಲು.





ಸೋಮವಾರ, ಏಪ್ರಿಲ್ 22, 2013

ಗಡಿ ಕಾವಲು!



ತೃಪ್ತವಾಗದ ಆಸೆ ಸುಪ್ತಮನಸಲಿ ಹುದುಗಿ
ದುಃಖರೂಪದಲೆಮ್ಮ ಕಾಡುತಿಹುದು.
ವಸ್ತುವಿಷಯದ ಚಿತ್ರ ಅಚ್ಚಳಿಯದಿರಲಲ್ಲಿ
ತಪ್ತವಾಗಿಹ ಮನಸು ನಲುಗುತಿಹುದು.

ಆಸೆಗಳ ಚಿತ್ರವನು ಕಣ್ಮುಚ್ಚಿ ದಿಟ್ಟಿಸುತ
ನಿಟ್ಟುಸಿರಲದನೊಮ್ಮೆ ಅಳಿಸಬೇಕು.
ಸನ್ನೆ ಕೋಲಲಿ ಕಲ್ಲ ದಬ್ಬುವಂತೆಯೆ ನಾವು
ಉಸಿರಿನಲೆ ಆಸೆಯನು ದಬ್ಬಬೇಕು.

ಅನಗತ್ಯ ಆಸೆಗಳು ಮನದೊಳಗೆ ಬರದಂತೆ
ಅನುಕ್ಷಣವು ಗಡಿಯನ್ನು ಕಾಯಬೇಕು.
ಪರರ ಸೊತ್ತನು ಬಯಸಿ ನುಸುಳಿರುವ ಆಸೆಯನು
ಕಂಡಲ್ಲಿ ಗುಂಡಿಟ್ಟು ಕೊಲ್ಲಬೇಕು.

ಭಾನುವಾರ, ಏಪ್ರಿಲ್ 21, 2013

ಉದಯಿಸಲಿ ನಮ್ಮೊಳಗೆ ಜೈನತತ್ತ್ವ!



ಬಣ್ಣ ಬಣ್ಣದ ಭಾವದುಡುಗೆಯನು ಕಳಚೆಸೆದು
ಜಿನನಾದ ವೀರನವ ಮಹಾವೀರ.
ವೈರಾಗ್ಯಕಷಾಯವ ಕುಡಿಯುತಲಿ ಧರಿಸಿದನು
ದಿಕ್ಕೆಂಬ ಅಂಬರವ ಸಂತ ಧೀರ.

ತನ್ನೊಳಗೆ ಅವಿತಿರುವ ಅರಿಗಳನು ಸದೆಬಡಿದು
ವಿರಾಗಿಯಾಗುವವನೆ ನಿಜದಿ ವೀರ.
ರಾಗ ಕಳೆಯಲು ಅಲ್ಲಿ ಬಣ್ಣಗಳು ತಿಳಿಗೊಂಡು
ಉಳಿಯುವುದು ಒಳಗೊಂದೆ ಶಾಂತರಾಗ.

ಶಾಂತತೆಯ ಅರಿವಿನಲಿ ಜಿನತತ್ತ್ವವುದಯಿಸಲು
ಹಿಂಸಿಸುವ ವೈರಿಗಳು ಇಲ್ಲವಲ್ಲಿ.
ಕಾಮಾದಿ ವೈರಿಗಳೆ ನಮ್ಮನ್ನೆ ಹಿಂಸಿಸಲು
ಉದಯಿಸಲಿ ನಮ್ಮೊಳಗೆ ಜೈನತತ್ತ್ವ.





ಶನಿವಾರ, ಏಪ್ರಿಲ್ 20, 2013

ನಟ-ನಟನೆ-ನೋಡುಗ



ನೋವು ನಲಿವಿನ ಅಲೆಯು ಮನಸಿನಲಿ ಪುಟಿದೆದ್ದ
ನೀರಗುಳ್ಳೆಯ ತೆರದಿ ಕ್ಷಣಿಕವೆಲ್ಲ.
ನೋವಿನಾ ಅಸ್ತಿತ್ತ್ವ ನಲಿವಿನಲ್ಲಿಯೆ ದಿಟವು
ನಲಿವನದು ನೋವಿನಲಿ ಇರುವುದೆಲ್ಲ.

ನೋವುನಲಿವಿನ ಅರಿವು ಸಾಪೇಕ್ಷವಾಗಿಹುದು
ಭಾವತೀವ್ರತೆಯ ತೀರ್ಮಾನದಂತೆ.
ಭಾವದೊಡಲಿನ ತಳದ ಶಾಂತದರಿವಲಿ ನೆಲೆಸೆ
ನಿರಪೇಕ್ಷವಿಸ್ತಾರ ಅನಂತವೆಲ್ಲ.

ನೋವು ನಲಿವಿನ ಅಲೆಯ ಸಾಕ್ಷಿಭಾವದಿ ನೋಡೆ
ಕಿರುಪರದೆ ಮೇಲಿಹುದು ನಟನೆ ಎಲ್ಲ.
ತನ್ನ ನಟನೆಯ ತಾನೆ ಮೌನದಲಿ ನೋಡುತಿರೆ
ನಟನಿಲ್ಲವಲ್ಲಿ ನೋಡುಗನೆ ಎಲ್ಲ.

ನೋಡುಗನೆ ಓಡಿದರೆ ಓಟ ನೋಡಲು ಕಷ್ಟ
ನಿಂತು ನೋಡಲು ಓಟ ಇಲ್ಲ ಅಲ್ಲಿ.
ಓಡುಗನ ಓಟವನು ನಿಂತು ನೋಡುವ ಭಾವ
ಉದಯಿಸಲು ನಮ್ಮೊಳಗೆ ಶಾಂತವೆಲ್ಲ.