ಗುರುವಾರ, ಜುಲೈ 11, 2013

ಪರಿಪೂರ್ಣದಾನಂದ ವರ್ತಮಾನ!



ಸುಖವಿರಲು ಮನದಲ್ಲಿ
ಯುಗವು ಕ್ಷಣವಾಗುವುದು,
ಯುಗವಾಗುವುದು ಕ್ಷಣ; ದುಃಖವಿರಲು.
ಸುಖದುಃಖವೆರಡಿಲ್ಲ-
ದಿರಲೊಂದೇ ಕಾಲವದು
ಪರಿಪೂರ್ಣದಾನಂದ ವರ್ತಮಾನ.

ವರ್ತಮಾನದ ನಿತ್ಯ
ಸಂತತದಿ ಹರಿದಿರಲು
ಭೂತಭವ್ಯಗಳಿಲ್ಲ, ಮನವೇ ಇಲ್ಲ.
ಭೂತದಾ ಮನದಲೆಯೆ
ಭವಿತವ್ಯ ಹೇಳುತಿದೆ
ವರ್ತಮಾನದ ಸತತವರಿಯದಿರಲು.

ವರ್ತಮಾನವು ಒಂದು
ಚಿಕ್ಕದಾಗಿಹ ಬಿಂದು
ಸುಖದುಃಖವನು ಮನವು ಅಳೆಯುತಿರಲು.
ಅಳೆತೆಗೋಲನು ಎಸೆದು
ಬಿಂದುವಲೆ ನೆಲೆಯಾಗೆ
ಸಂತತದಿ ಹರಿಯುವುದು ವರ್ತಮಾನ.






ಬುಧವಾರ, ಜುಲೈ 10, 2013

ಸಮದೂರವಿರಬೇಕು ಸುಖದುಃಖಗಳಲಿ



ಹಿತದ ಅನುಭವವಿರಲು ರಭಸದಲಿ ಉಸಿರೆಳೆದು
ಎದಯೊಳಗೆ ತಡೆಹಿಡಿದು ಸುಖಪಡುವೆವು.
ಅಂಬೊಡೆಯ ಪರಿಮಳದ ಹಿತವನ್ನು ಒಳಸೆಳೆದು
ರುಚಿಗಾಗಿ ಕಾತುರವ ತೋರುವಂತೆ.

ದುಃಖದಲಿ ಉಸಿರನ್ನು ರಭಸದಲಿ ಹೊರನೂಕಿ
ಕಷ್ಟವನು ಎದೆಹೊರಗೆ ತಡೆಹಿಡಿವೆವು.
ಸತ್ತಿರಲು ಹೆಗ್ಗಣವು ಸಹಿಸಲಾಗದೆ ನಾತ
ಉಸಿರನ್ನು ಎದೆಹೊರಗೆ ದಬ್ಬುವಂತೆ.

ದುಃಖಗಳ ಹೊರನೂಕಿ ಸುಖಗಳನು ಒಳಸೆಳೆವ
ಯತ್ನಗಳ ಒತ್ತಡದಿ ನಲುಗುತಿರೆ ನಾವು.
ಉಸಿರ ತಾಳಕೆ ಮನವು ಕುಣಿವ ಪರಿಯನು ಅರಿತು
ಸಮದೂರವಿರಬೇಕು ಸುಖಕಷ್ಟಗಳಲಿ.

ಮಂಗಳವಾರ, ಜುಲೈ 9, 2013

ಅರ್ಥಶಾಸ್ತ್ರ



ಬನ್ನಿ ಶಿಷ್ಯರೇ! ತರಗತಿಯೊಳಗೆ
ಪಾಠವ ಕೇಳಿರಿ ನೀವೆಲ್ಲ.
ಹಾಜರಿಯೊಂದೇ ಸಾಲದು ನಿಮಗೆ
ಅದುವೇ ಕಲಿಕೆಯ ಕುರುಹಲ್ಲ.

ಅರ್ಥಶಾಸ್ತ್ರವ ಬೋಧನೆ ಮಾಡುವೆ
ಗಮನವ ಹರಿಸಿರಿ ಇತ್ತಕಡೆ.
ಅರ್ಥತತ್ತ್ವದ ಅರ್ಥವನರಿಯಲು
ಹೋಗದು ಮನಸು ಸ್ವಾರ್ಥದೆಡೆ.

ಕೇಳುವ ಕಿವಿಯು ದುಡಿಯುವುದಿಲ್ಲ
ದುಡಿಯುವ ಬೆವರಿಗೆ ಕಿವಿಯಿಲ್ಲ.
ಶ್ರದ್ಧೆಯ ಶ್ರಮವೇ ಫ್ರತಿಫಲ ಕೊಡುವುದು
ಬುದ್ದಿಯ ಕುಶಲತೆ ಬೇಕೇ ಇಲ್ಲ.

ಬಿಲ್ಲನು ಹಿಡಿಯಲು ಅರಿತರೆ ತಾನೆ
ಬಾಣವು ಗಮ್ಯವ ತಲುಪುವುದು.
ತನುಮನ ಬಗ್ಗಿಸಿ ಗುರಿಯನು ಇಟ್ಟೊಡೆ
ಫಲಿತವು ತಾನೇ ಲಭಿಸುವುದು.

ಎಲ್ಲಾ ಪ್ರಶ್ನೆಗಳಿಗುತ್ತರ ಬರೆದು
ಸಾರ್ಥಕವಾಯಿತು ಎನ್ನದಿರಿ.
ಅರ್ಥದ ಅರಿವಿನ ಆಳವ ಸ್ಪರ್ಶಿಸಿ
ಬದುಕಿನ ಪ್ರಶ್ನೆಗೆ ಉತ್ತರಿಸಿ.




ಭಾನುವಾರ, ಜುಲೈ 7, 2013

ನಿಂತ್ಕೊಂಡೇ ಒಂದ್ ನಾಕ್ ಮಾತು!



ಬಾರೇ ಮನೆಗೆ ಸರಸ್ವತಮ್ಮ
ಕಾಫೀ ಕುಡ್ಕೊಂಡ್ ಹೋಗೇ..
ಯಾಕೇ ತುಂಬಾ ಸೊರಗಿಬಿಟ್ಟೆ
ಕೆಲ್ಸ ಜಾಸ್ತಿಯೇನೇ?

ಸೊಂಟಾ ನೋವು ಹೇಗಾತ್ ಹೇಳೇ
ಜೀರ್ಗೇ ಬಿಸ್ ನೀರೇ ಕುಡಿಯೇ.
ಕೆಲ್ಸಾ ಜಾಸ್ತಿಯಾದ್ರೂ ಕೂಡ
ಕೆಲ್ಸ್ ದೋರ್ ಕರ್ಸೋದ್ ಬೇಡ್ವೇ.

ಪಕ್ಕದ್ಮನೆ ಪಾರ್ವತಮ್ಮನ್
ಸೊಕ್ಕನ್ ನೋಡಿದ್ ಯೇನೇ?
ಜುಮ್ಕಿ ಮಾಡ್ಸಿ ಕತ್ತು ತಿರುಗಿಸಿ
ಹೋಗ್ತಾಳವ್ಳು  ಅಲ್ವೇನೇ.

ಒಂದಕ್ಕೊಂದು ಸೀರೇ ಉಚಿತ
ಅಂಗ್ಡೀ ಬಂದಿದೆ ನೋಡೇ.
ಸಂಜೆ ವೇಳೇ ಹೋಗೋಣ್ವೇನೇ
ಪುರ್ ಸೊತ್ತ್ ಮಾಡ್ಕಂಡ್ ಬಾರೇ.

ಹಾಳಾದ್ ಫೋನು ಬಡ್ಕೊಳ್ತಿದೆ
ಒಳ್ಗೆ ಹೋಗ್ತೀನ್ ಕಣೇ.
ನಮ್ ಯಜ್ ಮಾನ್ರೇ ಮಾಡಿರ್ಬೇಕು
ಆಮೇಲ್ ಬರ್ತೀನ್ ನಾನೇ.




ಶನಿವಾರ, ಜುಲೈ 6, 2013

ರ್ರೀ….ಕೇಳ್ರೀ ಇಲ್ಲಿ..



ಯಾಕ್ರೀ ನೀವು ಕೇಳ್ತಾ ಇಲ್ಲ
ನನ್ನೀ ಮಾತ ಕಿವಿಕೊಟ್ಟು?
ಕೂಗೀ ಕೂಗೀ ಹೇಳಿದೆ ನಿಮ್ಗೆ
ಆದ್ರೂ ಲೇಟು ಯಾಕಿಷ್ಟು?

ತೆಂಗಿನಕಾಯಿ ತನ್ರೀ ಎಂದ್ರೆ
ಕೇಳುವುದಿಲ್ಲ ರೇಟೆಸ್ಟು?
ಕೊಟ್ಟಿದ್ದನ್ನೇ ತರುವಿರಿ ನೀವು
ಒಂದಕೆ ಎರಡು ದುಡ್ಡ್ ಕೊಟ್ಟು.

ಚೌಕಾಶಿ ಮಾಡಿ ಎಂದ್ರೆ ನಾನು
ನಗುವುದು ಯಾಕೆ ಹಲ್ಬಿಟ್ಟು?
ನಿಮ್ಮಾ ಸೊಡ್ಡಿಗೆ ಬೆಂಕಿ ಹಾಕ
ನಿಮ್ಮನು ಯಾಕೆ ನನಗ್ ಕೊಟ್ರು?

ಎಲ್ಲಿಗೆ ಹೊರಟ್ರೀ ಬರ್ರೀ ಇಲ್ಲಿ
ಬಡ್ ಕೊಂತಿದ್ದೀನಲ್ರೀ.
ಭೀಮಾಗೋಲ್ಡು  ತರೋಣ್ ವೇನ್ರೀ
ನನ್ನನ್ ಕರ್ಕೊಂಡ್ ಹೋಗ್ರೀ.

ಪಾಪ ನಿಮ್ಗೆ ಒಂದ್ ಲೋಟಾ
ಕಾಫೀ ಕೊಡ್ತೀನಿ ಕಣ್ರೀ.
ಯಾವ ಸೀರೆ ಉಟ್ಕೊಂಡ್ ಬರ್ಲೀ
ಚೆನ್ನಾಗ್ ಕಾಣ್ತೀನೇನ್ರೀ?