ಸೋಮವಾರ, ಜನವರಿ 13, 2014

ಬಾ ರವಿಪಥಸಂಕ್ರಮಣಕ್ರಮದಲಿ



ಬಾ ರವಿಪಥಸಂಕ್ರಮಣಕ್ರಮದಲಿ
ಮೃದುಲ ನವೋದಯ ಪದವಿರಿಸಿ
ಮಾತಿನ ಮಿತಿಯನು ಮೀರದ ಗತಿಯಲಿ
ಅನುದಿನ ಮತಿಯನು ಸಂಸ್ಕರಿಸಿ.

ಸೃಷ್ಟಿನಿಬಂಧದ ನಿಯಮಾವಳಿಯಲಿ
ಹೂವೆಲೆಕಾಯ್ಗಳ ನೀನೆಣಿಸಿ
ನವಿಲಿನ ನರ್ತನವೆದೆಯೊಳು ಬಿಂಬಿಸಿ
ಕೊರಳಿನ ರವದಲಿ ಕಲವಿರಿಸಿ.

ಗಂಧವ ತೀಡಿದ ಮಂದಸಮೀರವ
ಸೋಕಿಸಿ ತನುವಲಿ ಹುರುಪಿರಿಸಿ
ಹಸಿರೆಲೆಯುಸಿರನು ಸ್ವರಗಳಲಿರಿಸುತ
ಅಕ್ಷರದುದರದಿ ಅಂಕುರಿಸಿ

ಕತ್ತಲೆಯರೆದಿಹ ನೀಲಾಂಜನದಲಿ
ಕಣ್ಣಿನ ಬಿಲ್ಲನು ಹುರಿಗೊಳಿಸಿ
ಕಾಂತಿಯ ಶರವನು ದೃಷ್ಟಿಗೆ ಜೋಡಿಸಿ
ಶಾಂತಿಯ ಬೆಳಕಿಗೆ ಗುರಿಯಿರಿಸಿ

ಸೂರ್ಯನ ಕ್ರಮಣದಿ ಚಂದ್ರನ ಭ್ರಮಣದಿ
ಕಾಲವು ಗಣಿತದ ಗತಿಯಿರಿಸೆ
ವಿಧವಿಧ ಬಣ್ಣವ ಸುಮದೊಳು ಯೋಜಿಸೆ
ಅಳತೆಗೆ ಮೀರದ ಹದವಿರಿಸಿ.

ಸರಸರ ರಸನಕೆ ಬಾ ಬಾ ಸರಸತಿ!
ತರತರದಭಿನವ ನುಡಿಯಿರಿಸಿ
ನಿಯತದ ನಿಯಮದಿ ಮನಸನು ಬಂಧಿಸಿ
ಆಸೆಯ ಕುದುರೆಗೆ ಗೆರೆಯಿರಿಸಿ


ಡಿ.ನಂಜುಂಡ
14/01/2014


ಶನಿವಾರ, ಜನವರಿ 11, 2014

ಶ್ರೀಶಿವಶಂಕರಿ ವನಶಾಕಂಬರಿ!



ಶ್ರೀಶಿವಶಂಕರಿ ವನಶಾಕಂಬರಿ
ಗಿರಿಮಾಲಾತೀರವಿಹಾರಿ
ಮಂಗಲರವ ಖಗಮಂತ್ರಸುಪೂಜಿತ
ನವಪರ್ಣಾಲಂಕೃತನಾರಿ

ಭೂರಮೆಯುದ್ಯಾನದಿ ವಿಹರಿಪ ಸುರ-
ನಾರೀಸಮ ಸುಮನೋಹಾರಿ
ನಾನಾವಿಧತರುಸೌರಭಕರ್ಷಿತ
ಘ್ರಾಣೇಂದ್ರಿಯಚೇತೋಹಾರಿ

ಭಾವವಿಲಾಸಾವರಣಾವೃತಪದ-
ಚಿತ್ರಿತ ವಸ್ತುಸುಸಂಸ್ಕಾರಿ
ಸುಂದರದೃಶ್ಯಾವಳಿವೀಕ್ಷಿತ ಮನ-
ಧಾರಾಸಂತತ ಹಿತಕಾರಿ

ಅನಿಮಿಷ ನಯನಪ್ರಜ್ವಲದೀಪದಿ
ನೀಲಾಂಜನೋದ್ಭವಕಾರಿ
ಅಕ್ಷರಚಾಲಿತ ಮತಿಸಂಕಲ್ಪಿತ
ವಾಕ್ ಕೃತಿಕಾನನಸಂಚಾರಿ

ಶಿವಲೋಕವಶಂಕರಿ ಹೇ ಶಾರ್ವರಿ
ಆನಂದಾಮೃತರಸಧಾರಿ
ಶರಣಾಗತಜನಭವಭಯವಿದೂರಿ
ಪಾಲಯ ಮಾಂ ತ್ರಿಜಗದೀಶ್ವರಿ

ಡಿ.ನಂಜುಂಡ
11/01/2014

ಭಾನುವಾರ, ಜನವರಿ 5, 2014

ಅಕ್ಷರಪಥಸಂಚಲನ



ಅತಿಶಯ ಸುಂದರ ಸರಸ್ವತಿಚರಣ
ಚಿತ್ತದಿ ಶತಪಥಸಂಚಲನ
ಗತಿವಿಶ್ಲೇಷಣ ಮತಿಸಂಕರ್ಷಣ
ಹಿತರವ ನುತಸ್ವರದಾಭರಣ

ಪದಾರ್ಥಮಿಲನದ ಮಧುರಸಪೂರಣ
ಹೃದಂiÀiಸರೋಜದಿ ಸಂಕಲನ
ನಾದೋಪಾಸನದುದ್ಯಾಪನದಿನ-
ಮಧ್ಯದಿ ವಚನಪ್ರತಿವಚನ

ಪದ್ಯಾಮೃತಜಲಧಾರಾಸಿಂಚನ
ವದನವಿಕಾಸದ ಸಂಕ್ರಮಣ
ಗದ್ಯನಿಬಂಧಾವರಣಾವರ್ತನ
ಮೋದಾಮೋದಪ್ರತಿಫಲನ

ಛಂದೋ ನಿಯತದ ಸೃಷ್ಟಿವಿಕಂಪನ
ಬಂಧನ ಕಾರಣ ಶಬ್ದಗುಣ
ಸಂಧ್ಯಾರಾಗಾಲೇಪಿತ ತನುಮನ
ಬಂಧುರದಕ್ಷರಸಂಸದನ

ಡಿ.ನಂಜುಂಡ
05/01/2014