ಭಾನುವಾರ, ಸೆಪ್ಟೆಂಬರ್ 13, 2015

ಕನ್ನಡತನ

ಕನ್ನಡತನವೆನ್ನೆದೆಯೊಳು
ಸನ್ನಡತೆಯ ಸರಿಗಮ
ಚೆನ್ನುಡಿಗಳನೊಳಗಿಂಗಿಸಿ
ಮುನ್ನಡೆಸುವ ಜಂಗಮ

ಕಣಕಣದೊಳಗನುರಣಿಸುವ
ಜನಪದಗಳ ಸಂಕ್ರಮ
ಬನಬನಗಳ ಹೊನಲಿನಂತೆ
ಹನಿಹನಿಗಳ ಸಂಗಮ

ಬಾನುಲಿಯಿಂದವತರಿಸಿಹ
ಕಾನುಲಿಗಳ ವಿಕ್ರಮ
ನಾನಾನನತಾನವಾಗಿ
ಬಾನೇರುವ ಸಂಭ್ರಮ

ಡಿ.ನಂಜುಂಡ
13/09/2015


ಶನಿವಾರ, ಸೆಪ್ಟೆಂಬರ್ 12, 2015

ಬೇಲಿಯೇ! ಮಾತಾಡು

ಹಿತ್ತಲಲಿ ಹಿಗ್ಗುತಿಹ ಹೂವು ಹೂವಿನ ಕಂಪು
ಹೊರ ಹಾರುತಿಹುದೇಕೆ ಎಲೆ ಬೇಲಿಯೆ!
ಹಾದಿಯಲಿ ಹೋಗುವವರೋರೆ ಕಂಗಳ ನೋಟ-
ಗಳನೇತಕೊಳಬಿಡುವೆ ಸೋಮಾರಿಯೆ!

ನನ್ನದೆಂಬುದನೆಲ್ಲವೊಳಗೊಳಗೆ ಬೆಳೆಸಿಟ್ಟು
ನಿನ್ನ ಕಾವಲಿಗಿರಿಸಿ ನಾ ಸುಮ್ಮನಿದ್ದೆ
ನೀನೆನ್ನ ನಂಬಿಕೆಯ ನುಚ್ಚು ನೂರಾಗಿಸುತ
ನಿದ್ದೆಯಲಿ ನೀನೇಕೆ ಎಲ್ಲ ಮರೆತಿದ್ದೆ?

ಬಳ್ಳಿಗಳ ಬಳುಕಂದ ಮತ್ತದರ ಹೂ ಗಂಧ
ಮಕರಂದಗಳ ಒಡೆಯ ನಾನಲ್ಲವೆ?
ಬಣ್ಣ ಬಣ್ಣಗಳೆಲ್ಲ ನನ್ನದೆಂಬುದ ಮರೆತು
ಎಲ್ಲ ಹೊರಗೆಸೆದದ್ದು ತಪ್ಪಲ್ಲವೆ?

ನೀ ಕಾಯುತಿಹೆಯೆಂಬ ಹುಸಿನಂಬುಗೆಯ ಬಿಟ್ಟು
ನಿನ್ನನೀಗಲೆ ಕಿತ್ತು ಹೊರ ಹಾಕಲೇ?
ನನ್ನದೆಲ್ಲವನೆಸೆದು ಜಗದೆಲ್ಲೆಯನು ಹೊಸೆದು
ಹೂಗಂಪಿನೊಳು ತೂರಿ ಹಾರಾಡಲೇ?

ಡಿ.ನಂಜುಂಡ
12/09/2015


ಮಂಗಳವಾರ, ಸೆಪ್ಟೆಂಬರ್ 8, 2015

ಅವ್ಯಕ್ತ

ಅಂತರಂಗದಲ್ಲಿದೆಂಥ-
ದೋಂತನನನದಂತಿದೆ
ಅನಂತವರ್ಣತಂತುವಿಂತು
ಸಂತತವಾದಂತಿದೆ

ಮುಂಜಾನೆಯ ಮಂಜಿನಲ್ಲಿ
ಸಂಜೆಗೆಂಪು ಪಂಜಿನಲ್ಲಿ
ಹಿಂಜಿ ರಾಗರಂಜನೆಗಳ
ಕೆಂಜೆಡೆಯವಗರ್ಪಿಸುತಿರೆ

ಶೃಂಗಾರದಿ ರಂಗೇರಿದ
ಅಂಗಾಂಗಗಳಂಚಿನಲ್ಲಿ
ಸಂಘಟಿಸಿದ ಭಂಗಿಗಳನು
ಕೆಂಗಣ್ಣವಗರ್ಪಿಸುತಿರೆ

ಸುಂದರವನಮಂದಿರತರು
ಚಂದನಗಳ ಚರ್ಚೆಯನ್ನು
ಮಂದಗಂಧವಾಹದಿಂದ-
ಲಿಂಧುಧರನಿಗರ್ಪಿಸುತಿರೆ.

ಡಿ.ನಂಜುಂಡ
08/09/2015


ಬುಧವಾರ, ಸೆಪ್ಟೆಂಬರ್ 2, 2015

ಪಕ್ಷಪಾತ!?

ವಿದ್ಯುದವಲಂಬನೆಗೆ ಮಾನವನು ನಲುಗೆ
ವಿದ್ಯುದಾಲಿಂಗನದಿ ಸತ್ತಂತೆ ಕಾಗೆ
ಕಾಗೆ ಸತ್ತರೆ ಜಗಕೆ ಇನಿತಿಲ್ಲ ಕೊರತೆ
ಮನುಜ ಸತ್ತರೆ ಏಕೋ ಕಣ್ಣೀರಿನೊರತೆ

ಕಾಗೆಗಳ ಸಂಕುಲಕೆ ಶಾಂತಿಯನು ನೀಡಿ
ನರಜನ್ಮವನು ಮಾತ್ರ ಕತ್ತಲೆಗೆ ದೂಡಿ
ಪಕ್ಷಪಾತವನೆಣಿಪ ಆ ದೇವನಾರು?
ಎಲ್ಲಿಹುದು ಈ ಜಗದ ಮಲತಾಯಿಬೇರು?

ಕತ್ತಲೆಯು ಕವಿದಾಗ ಸೊಡರಿನೊಳು ಬಂದು
ಹೇಳುತಿಹನೀ ಬೆಳಕು ನಿನಗೆ ಸಾಕೆಂದು
ಮಾನವನ ನೈವೇದ್ಯದನ್ನವನು ತಿಂದು
ಆ ದೇವ ಹೀಗೇಕೆ ಮಾಡುತಿಹನಿಂದು

ಮನುಜಗಿಲ್ಲದ ಸುಖವು ಕಾಗೆಗಳಿಗೇಕೆ?
ಆ ರವಿಯ ಬೆಳಕೊಂದೇ ಮಾನವಗೆ ಸಾಕೆ?

ಡಿ.ನಂಜುಂಡ
02/09/2015


ಶುಕ್ರವಾರ, ಆಗಸ್ಟ್ 28, 2015

ವರಮಹಾಲಕ್ಷ್ಮೀ

ವರಮಹಾಲಕ್ಷ್ಮಿ ತವ ಚರಣಮಾಲಂಬೇ
ಸರಸಿಜಾನನೇ ಸರೋಜನಯನೇ ಅಂಬೇ
ವರಮಹಾಲಕ್ಷ್ಮಿ ತವ ಚರಣಮಾಲಂಬೇ

ಹರಿಮನೋಲ್ಲಾಸಿನಿ ಹರಿಹೃದಯವಾಸಿನಿ
ಹರಿನಾಮಸಂಕೀರ್ತನಾಲಿಂಗಿನಿ
ಹರಿಪದ್ಮಮಧುಸ್ವಾದಸಂವೇದಿನಿ
ಹರಿತತ್ತ್ವವಿಸ್ತಾರಸಂಚಾರಿಣಿ
ವರಮಹಾಲಕ್ಷ್ಮಿ ತವ ಚರಣಮಾಲಂಬೇ

ಸಂಚಿತಾಗಾಮಿಪ್ರಾರಬ್ದನಾಶಿನಿ
ವಾಂಚಿತಾರ್ಥಫಲದಾಯಿನಿ
ಪಂಚಾನನವಿರಿಂಚ್ಯಾದಿ ದೇವ ಪ್ರ-
ಪಂಚಧಾರಿಣಿ ತವ ಚರಣಮಾಲಂಬೇ

ಡಿ.ನಂಜುಂಡ

28/08/2015

ಬುಧವಾರ, ಆಗಸ್ಟ್ 26, 2015

ಮಳೆ ಸುರಿಯಲಿ

ಮಳೆ ಸುರಿಯಲಿ, ಹೊಳೆಕೆರೆಗಳು ನೆರೆಯಲಿ
ಮಕ್ಕಳು-ಮರಿಗಳು ಮನೆಯೊಳಗುಳಿಯಲಿ
ಹಾಗೂ ಹೀಗೂ ಶಾಲೆಗೆ ಹೊರಟರೆ
ಕೊಡೆಗಳ ಗಡಿಯಿಂದಾಚೆಗೆ ಹಾರಿಸಿ
ಪಾಟೀ ಚೀಲವ ತೋಯಿಸಲಿ
ತಲೆಮೇಲ್ ಗಂಗೆಯನಾಡಿಸಲಿ

ಭೋರ್ಗರೆಯುವ ನೀರ್ಗರೆತ ಸದ್ದಿಗೆ
ಅಪ್ಪಳಿಸುವ ಬಿರುಗಾಳಿಯ ಹೊಡೆತಕೆ
ಆಡಿದ ಮಾತುಗಳಾರಿಗೂ ಕೇಳದೆ
ಗುರುಗಳು ಪಾಠವನಲ್ಲೇ ನಿಲ್ಲಿಸಿ
ಶಾಲೆಗೆ ರಜೆಯನು ಘೋಷಿಸಲಿ
ಗದ್ದೆಯೊಳಗೆಯನು ಹಾಕಿಸಲಿ

ನದಿಗಳ ಅಣೆಗಳು ತುಂಬಲಿ ತುಳುಕಲಿ
ಕತ್ತಲೆಯಳಿಯಲಿ ದೀಪಗಳುರಿಯಲಿ
ಬರ ಪರಿಹಾರದ ಹಣ ಹಿಂತಿರುಗಲಿ
ಸರ್ಕಾರದ ತಲೆನೋವಳಿಯಲಿ 
ಸುಗ್ಗಿಯ ಪದಗಳನೊಕ್ಕಿಸಲಿ
ನಾಡಿನ ಬೊಕ್ಕಸವುಕ್ಕಿಸಲಿ

ಡಿ.ನಂಜುಂಡ

26/08/2015

ಸೋಮವಾರ, ಆಗಸ್ಟ್ 24, 2015

ಬರ!

ಕಾರ್ಗಲ್ಲಿನ ಮೇಲಿಲ್ಲದೆ
ನೀರ್ಗರೆತದ ನೋಟ
ಕರುನಾಡಿನ ಗುಡಿಗುಡಿಯಲಿ
ಕಾರ್ಗತ್ತಲಿನಾಟ

ಕಾರ್ಮೋಡಗಳಾವರಿಸದೆ
ನೀರ್ಕೋಡಿಗಳಿಲ್ಲ
ನೀರಾಡದೆ ಬಿರುಬಿಟ್ಟಿವೆ
ಕಾರ್ಗದ್ದೆಗಳೆಲ್ಲ

ಮಲೆನಾಡಿನ ಪಡೆನುಡಿಗಳ
ಸಡಗರವಡಗಿಂತು
ಮಳೆಹಾಡಿನ ಲಯಗೆಟ್ಟಿರೆ
ಬೆಳೆ ಹಾಡುಗಳೆಂತು?

ಡಿ.ನಂಜುಂಡ
24/08/2015