ಸೋಮವಾರ, ಡಿಸೆಂಬರ್ 15, 2014

ಪದ

ಪದಕೋಶದಿಂದ ಪ್ರತಿಯೊಂದು ಪದವೂ
ಜಿಗಿದೆದ್ದು ಬರಲಿ ಬೇಗ
ಉಸಿರಿನೊಳು ಚಲಿಸಿ ಉಲ್ಲಾಸವಿರಿಸಿ
ತರಲಿ ಬಾನ್ತುಂಬ ರಾಗ

ಕನ್ನಡದ ಮಣ್ಣ ಸಾರವನು ಸೆಳೆದು
ತೆನೆಯಾದ ಪದಗಳೆಲ್ಲ
ಅನ್ನದೊಳು ಬಂದು ಗುನುಗುನಿಸಿ ನಿಂದು
ಹಾಡಾಗಿ ತೇಲಲೆಲ್ಲ

ಆ ಬಾನ ನೀಲ ಈ ಬನದ ನವಿಲ
ಚಿತ್ತಾರಗಳನು ತಂದು
ಸುರಿಯುತಿಹ ಮಳೆಯ ಹರಿಯುತಿಹ ಹೊನಲ
ಒಲವಿನೊಳು ಮುಳುಗಿ ಬಂದು

ಭಾವದೊಳ ಬಣ್ಣ ಒಳಗಣ್ಣ ತುಂಬಿ
ಶಿವಬಿಂಬವಾಗಿ ನಿಲಲಿ
ಸಾವಿಲ್ಲದಂಥ ಪದವಾಗಿ ನಿಂತು
ಸಮರಸವ ಸುರಿಸುತಿರಲಿ

ಡಿ.ನಂಜುಂಡ

15/12/2014

1 ಕಾಮೆಂಟ್‌: