ಸಂತೆಯ ಬೀದಿಗೆ ಬಾರೋ ಸಂತನೆ!
ಸಂತತ ಸಮತೆಯ ಚಿಂತನೆಗೆ
ಮೆಂತ್ಯದ ಸೊಪ್ಪಿನ ಕಂತೆಗಳೆಣಿಸುತ
ನಿಂತಿಹ ಜನಗಳನರಿಯಲಿಕೆ
ಮಾರಲು ಕೂಗಿದ ಬೆಲೆಯೇ ಒಂದು
ಕೊಳ್ಳಲು ಕೇಳಿದರಿನ್ನೊಂದು
ತೆಳ್ಳಗೆ ಬಳುಕುತ ಬಂದಿಹ ಚೆಲ್ವಿಯ
ಬೆಳ್ಳಿಯ ನಗುವಿಗೆ ಮೊಗದೊಂದು
ಬೇಕುಗಳಾಟದ ನಾಗಾಲೋಟಕೆ
ಬೆಲೆಗಳು ಮೇಲ್ಮೇಲ್ ಜೀಕುತಿರೆ
ಸಾಕುಗಳೆದೆಯೊಳಗಡಿಯಿಟ್ಟೊಡನೆಯೆ
ಕೆಳ ಕುಸಿಯುತ ನೆಲ ತಾಕುತಿರೆ
ಬೆಳೆಗಳ ಮೌಲ್ಯವನಳೆಯುವ ಬಗೆಗಳ
ನೆಳೆಯೆಳೆಯಾಗೆಳೆದಾಡಲಿಕೆ
ಕಡೆದೂ ಕಡೆದೂ ಪಡೆದಿಹ ತಿಳಿವಿನ
ತಡೆಯಿಲ್ಲದ ಹರಿವಾಗಲಿಕೆ
ಇಂತಿರಲೆಮ್ಮೊಳ ಮಾತುಗಳಲೆಗಳ
ನಂತಿಮ ಸತ್ಯದ ಮಂತ್ರಗಳ-
ನಾಗಿಸಿ ಬದುಕಿನ ಬಟ್ಟೆಯೊಳಿಳಿಸಲು
ಸಂತೆಗೆ ತಾರೋ ತಂತ್ರಗಳ
ಡಿ.ನಂಜುಂಡ
07/06/2018