ಶನಿವಾರ, ಜೂನ್ 3, 2017

ಭವಬಂಧಿಯೇಕೆ?

ಭಾವವೇ! ನೀನೇಕೆ ಭವಬಂಧಿಯಾದೆ?
ಕಾಮಾದಿವೈರಿಗಳ ಸಂಬಂಧಿಯಾದೆ

ಜಗದೊಲವು ಸಮರಸದಲೆಲ್ಲಲ್ಲೂ ಪಸರಿಸಿದೆ
ಇದು ಮೇಲು ಅದು ಕೀಳು ಎಂಬುದಿಲ್ಲ
ನಿತ್ಯಮುಕ್ತಾನುಭವದಾನಂದಸೃಷ್ಟಿಯಲಿ
ಸುಖದುಃಖದೇರಿಳಿತದಲೆಗಳಿಲ್ಲ

ಮರ ಚಿಗುರಿ ಕಾಯ್ಕಚ್ಚಿ Àಕ್ವವಾದೊಡೆ ಕಳಚಿ
ನೆಲಕುದುರಿ ಮೊಳೆತು ಮರವಾಗುವಾಗ
ಪ್ರಕೃತಿಯಾ ತಾನನದಿ ತನ್ನತನವನು ಬೆಸೆದು
ಬಾಳುವಾ ಕಲೆಯು ಕಣ್ತುಂಬುವಾಗ

ನೋಡಿ ತಾ ಕಲಿಯದೆಯೆ ಬಾನ್ದನಿಯನರಿಯದೆಯೆ
ತಾಳ ತಪ್ಪುತ ಕುಣಿಯಲಾಸೆಯೇಕೆ?
ಜಗದೇಕ ಮಾಧುರ್ಯವರ್ಣಮೇಳಕೆ ಕುಣಿದು
ಬಂಧಿಯಾಗದೆ ಬಾಗಲಿಲ್ಲವೇಕೆ?
ಮೌನದೊಳ ಮಾತಾಗಬಾರದೇಕೆ?

ಡಿ.ನಂಜುಂಡ

03/06/2017

ಶನಿವಾರ, ಮೇ 6, 2017

ಹುಡುಕಾಟ

ಚುಕ್ಕಿಸಾಲಿನೊಲು ಬರುತಿದೆ
ಅಕ್ಕರಗಳ ಸಾಲು
ಇಕ್ಕುತಿಹುದು ಚಿತ್ತಾರಗಳ-
ನುಕ್ಕುತಿರುವ ಒಡಲು

ಹುಡುಗಾಟದ ಹುಡುಕಾಟದಿ
ಹಿಡಿದಾಡಿದ ನಡೆಯ
ಉಡುಗದಿರದ ನೆನಪುಗಳನು
ಕಡೆದು ಬಂದ ನುಡಿಯ
ಸಡಗರದಲಿ ತಡೆದು ತಡೆದು
ತಡಕಾಡಿರೆ ಹೃದಯ

ಗೋಲಿಯಾಡಿ ಕಳೆದು ಗೆದ್ದ
ಬಾಲ್ಯವನ್ನು ನೆನೆಯೆ
ಬೇಲಿ ಹಾರಿ ಸೀಬೆ ಕದ್ದ
ಕಾಲಗತಿಯನಳೆಯೆ
ಬಾಳಗಾಲಿಯರೆಗಳೆಲ್ಲ
ಮೇಲೇರುತಲಿಳಿಯೆ

ನೂರು ಗುನ್ನಗಳನು ತಿಂದು
ಹಾರಿ ಕುಣಿಯದಿರುವುದು
ಚೂರಾದರೂ ಬುಗುರಿಯಾರು
ಚೂರೂ ನೋಯದಿರುವುದು
ಆರರಿಗಳು ಕಾಡದಂತೆ
ಯಾರೊ ಕಾಯ್ದಿರುವುದು

ಉಡುಗದಿರದ ನೆನಪುಗಳನು
ಕಡೆದು ಬಂದ ನುಡಿಯ
ಸಡಗರದಲಿ ತಡೆದು ತಡೆದು
ತಡಕಾಡಿರೆ ಹೃದಯ

ಡಿ.ನಂಜುಂಡ
06/05/2017ತೇರನೆಳೆವ ಬಾರೊ ತಮ್ಮ

ತೇರನೆಳೆವ ಬಾರೊ ತಮ್ಮ
ತೇರನೆಳೆಯೆ ಬಾರೊ
ತೇರಮಿಣಿಯ ಪಿಡಿದು ಮನವ
ನೇರವಿರಿಸ ಬಾರೊ
ತೇರನೆಳೆವ ಬಾರೊ ತಮ್ಮ
ತೇರನೆಳೆಯೆ ಬಾರೊ
ಊರ ಕಾಯ್ವ ಎಲ್ಲರಮ್ಮ
ಕೇರಿಗಿಳಿದು ನಲಿಯುವಾಗ
ಸೂರುಸೂರಿನೋರೆಗಳಲಿ
ತೂರುತಿರಲು ಕರುಣರಾಗ
ತೇರನೆಳೆವ ಬಾರೊ ತಮ್ಮ
ತೇರನೆಳೆಯೆ ಬಾರೊ
ಅಡಿಕೆ, ಅಕ್ಕಿ, ತೆಂಗನೈದು
ಮಡಿಲ ತುಂಬು ಬಾ
ಒಡಲ ತಣಿಪ ಅನ್ನವುಣಲು
ಸಡಗರದಲಿ ಬಾ
ತೇರನೆಳೆವ ಬಾರೊ ತಮ್ಮ
ತೇರನೆಳೆಯೆ ಬಾರೊ
ಮರಗಿಡಗಳ ಹಸಿರುಗಳಲಿ
ವರವೀಯುತಲಿರಲು
ಹರಿವ ನದಿಯಲವಳ ಮೊಗವು
ನೊರೆಯೊಲು ಬಿರಿದಿರಲು
ತೇರನೆಳೆವ ಬಾರೊ ತಮ್ಮ
ತೇರನೆಳೆಯ ಬಾರೊ
ಊರ ಮಣ್ಣಲಾಡ ಬಾರೊ
ತೇರನೆಳೆದು ಹಾಡ ಬಾರೊ
ತೇರನೆಳೆವ ಬಾರೊ ತಮ್ಮ
ತೇರನೆಳೆಯ ಬಾರೊ
ಡಿ.ನಂಜುಂಡ
05/04/2017

ಭಾನುವಾರ, ಏಪ್ರಿಲ್ 30, 2017

ಸೊಳ್ಳೆಗಳು ನಾವು

ಸೊಳ್ಳೆಗಳು ನಾವು
ಸೊಳ್ಳೆಗಳು ನಾವು
ದೇಶವನೆ ಕೊಳ್ಳೆ ಹೊಡೆವರಿಗಿಂತ
ಒಳ್ಳೆಯವರು ನಾವು

ಸೊಳ್ಳೆಗಳಿಲ್ಲದ ಊರೆಲ್ಲಿದೆಯೋ?
ಇದ್ದರದೂರಲ್ಲವೆ ಅಲ್ಲ 
ಬಚ್ಚಲ ರೊಚ್ಚೇ ಇಲ್ಲದೆ ಇದ್ದರೆ
ಸ್ನಾನವ ಮಾಡುವರಲ್ಲಿಲ್ಲ

ಕೊಳಚೆಗಳಿರುವೆಡೆ ನಮ್ಮಾವಾಸವು
ಅಲ್ಲೇ ನಮ್ಮಯ ಸಂಸಾರ
ಸ್ವಚ್ಛತೆಯಿಲ್ಲದ ಬೀದಿಗಳಿದ್ದರೆ
ಅಲ್ಲಿಹುದೆಮ್ಮಯ ಪರಿವಾರ

ರಕ್ತವ ಹೀರುವ ಜೀವಿಗಳೆಂದು
ನಮ್ಮನು ನೀವ್ ಕಡೆಗಣಿಸದಿರಿ
ಸತ್ತಂತಿಹರನು ಕಚ್ಚೆಚ್ಚರಿಸುವ
ನಮ್ಮುಪಕಾರವ ಮರೆಯದಿರಿ

ಏಳಿರಿ! ಎಚ್ಚರಗೊಳ್ಳಿರಿ! ಎಂದರೂ
ಏಳದ ಮಂದಿಯ ಹುಡುಕುವೆವು
ಜಗವೇ ನಿದ್ರೆಯ ಗೊರಕೆಯೊಳಿದ್ದರೂ
ಹಾಡುತ ಜಾಗ್ರತಗೊಳಿಸುವೆವು

ಜನಸಂಖ್ಯೆಯು ಮಿತಿಮೀರದ ಹಾಗೆ
ರೋಗಾಣುಗಳನು ಹರಡುವೆವು
ಅತಿಸಂತಾನದ ತಾನನವಳಿಸುತ
ಮಿತದಾ ಹಿತದರಿವೆರೆಯುವೆವು

ಬಾಳಿನ ಅವಧಿಯು ಅರೆದಿನವಾದರೂ
ಸಾರ್ಥಕ ಜೀವನ ನಡೆಸುವೆವು
ಸಾವಿಗೆ ಹೆದರದ ಕೆಚ್ಚೆದೆ ಕಲಿಗಳು
ರಕುತದಿ ಬರೆವೆವು ಇದ ನಾವು

ಡಿ.ನಂಜುಂಡ
30/04/2017


ಶನಿವಾರ, ಏಪ್ರಿಲ್ 29, 2017

ಕಾಯಕ

ದುಡ್ಡು ಗಳಿಸಬೇಕೋ? ಅದನು
ಗುಡ್ಡೆ ಹಾಕಬೇಕೋ?
ದುಡಿಮೆ ಮಾಡಿ ತಿಂದುಣ್ಣುವ
ತೃಪ್ತಿಯೊಂದೆ ಸಾಕೋ

ಕೆಲಸಗೈವ ವೇಳೆಯಲ್ಲಿ
ಗೊಣಗುಟ್ಟುವುದೇಕೋ?
ಹಣವೆಣಿಸುವ ಕ್ಷಣಕೆ ಮಾತ್ರ
ಮನವಟ್ಟದೊಳೇಕೋ?

ತ್ಯಾಗದ ತಳಪಾಯವಿರದ
ಭೋಗಸೌಧವೇತಕೊ?
ಕರ್ಮದ ಕೊಳೆಯಂಟದಂತೆ
ಕಾಯಕವಿರೆ ಸಾಕೊ

ಪ್ರತಿನಿಮಿಷದಿ ಸಂತೃಪ್ತಿಯ
ಪ್ರತಿಫಲಗಳು ಮಾಗಿ
ಮೊಗಮೊಗದಲಿ ಸಂತುಷ್ಟಿಯ
ಕೈಲಾಸವು ಬಾಗಿ
ಸಂತತಸುಖನದಿಯುಕ್ಕಲಿ
ಶಿವಮೊಗದೆಡೆ ಸಾಗಿ

ಡಿ.ನಂಜುಂಡ

29/04/2017

ಶನಿವಾರ, ಏಪ್ರಿಲ್ 22, 2017

ಹೇಳು ಮಾತೆ!

ಮತ್ತೇತಕೆ ವನವಾಸವು?
ಹೇಳು ಮಾತೆ! ಸೀತೆ!
ಮಾತಿನಾತ್ಮದರ್ಥವಿಂದು
ದೇಹಭಾವ ತ್ಯಜಿಸಿತೆ?

ಅಂತರಾರ್ಥಶಕ್ತಿಯಂದು
ವ್ಯೋಮಯಾನವೇರಿತೆ?
ಅಗಸನೀಗ ಕುಹಕವಾಡೆ
ಅರ್ಥಾಂತರವಾಯಿತೆ?

ಮಾತಿಗೆ ಹತ್ತರ್ಥಗಳನು
ಹೊಂದಿಸೆ ನೀನಪಹೃತೆ!
ಮೋಹಾರ್ಥಕೋಟಿಗಳನು
ತಾಪಾಗ್ನಿಯು ದಹಿಸಿತೆ?

ಮೌನಗರ್ಭದೊಳಗೆ ಮಲಗಿ
ಮಾತು ನಿದ್ದೆಗೈವುದೆ?
ಹೇಳೆ ಮಾತೆ! ರಾಮಗೀತೆ!
ಮತ್ತೆ ಅರ್ಥವಳುವುದೆ? 

ಡಿ.ನಂಜುಂಡ
22/04/2017


ಶುಕ್ರವಾರ, ಏಪ್ರಿಲ್ 21, 2017

ದರ್ಶನವ ನೀಡೈ ಜಗನ್ಮಾತೃಕೆ!

ಸುಕುಮಾರಿ ಸುರನಾರಿ ಪೂರ್ಣೇಂದುರೂಪಸಿರಿ
ಕನಕಾಂಗಿ ಜಗದೇಕಘನಸುಂದರಿ
ಅಪರೆ ಅಪ್ಸರೆ ಅಮರೆ ಅಜರೆ ಅಗಣಿತತಾರೆ
ಅರ್ಥಧರೆ ಆದ್ಯಂತಶೂನ್ಯಾಂಬರೆ

ಹೇ ತ್ರ್ಯಕ್ಷರಾಗರ್ಭತತ್ತ್ವಾರ್ಥಪೂರೆ
ಬಂಧರಾಹಿತ್ಯ ಪ್ರೇಮಾವತಾರೆ
ಪರಿಪೂರ್ಣಪದವರ್ಣಪೂರ್ಣದಿಂ ಪ್ರತಿಫಲಿತ
ಭಾವಕಲ್ಪೋಕ್ತಸಾಹಿತ್ಯಧಾರೆ

ಉಕ್ತಾಕ್ಷರಾವರ್ತನೋಚ್ಚಾರಶಕ್ತಿಧರೆ
ಲಲಿತವಾಕ್ಯಾಂಗಸೌಂದರ್ಯಭಾರೆ
ಹೇ ವಾಣಿ ಗೀರ್ವಾಣಿ ಕಲ್ಯಾಣಿ ಕಲ್ಪಮಣಿ 
ಜಿಹ್ವಾಗ್ನಿಕುಂಡದೊಳಗೆದ್ದು ಬಾರೆ 

ಉದಾತ್ತಾನುದತ್ತಾದಿ ಸ್ವರಸಂಭ್ರಮೋತ್ಸವದಿ
ಉತ್ಕಂಠಿತಾಮಂತ್ರಣೋದ್ಗಾರಕೆ
ಉತ್ಥಾನಮಾರ್ಗದೊಳಗುತ್ತುಂಗರಥವೇರಿ
ಶಬ್ದಮಣಿನೂಪುರವನಾಲಿಸಲಿಕೆ
ದರ್ಶನವ ನೀಡೈ ಜಗನ್ಮಾತೃಕೆ

ಡಿ.ನಂಜುಂಡ

21/04/2017