ಭಾನುವಾರ, ಏಪ್ರಿಲ್ 10, 2016

ದಿವ್ಯತೆ

ಕವಿತೆಯೋ ವನಿತೆಯೋ ಲತೆಯೋ ಶಿವಲಲಿತೆಯೋ?
ತಳುಕು ಬಳುಕಿನ ಬೆಳಗ ಬೆಡಗಿನುಡುಗೆಯೋ?
ಹಸಿರು ತುಂಬಿದ ವನಕೆ ಹೊಂಬಣ್ಣವೂಡಿರಲು
ಬಾಗುತಿಹ ಮುಂಬೆಳಕಿನಲ್ಲಿ ನಾಚಿದೆಯೋ?

ಕರಿಮೋಡಗಳು ಗಿರಿಗಳೆಡೆಗೆ ನೋಡುತಿರೆ
ಹೊನಲುಗಳು ತಗ್ಗಿದೆಡೆಗೋಡಿ ಹರಿಯುತಿರೆ
ಬಾಳೆಗೊನೆಗಳು ಬಾಗಿ ನೆಲಕೆ ತಾಕುತಿರೆ
ದಿವ್ಯಸಂತಾನಗಳು ಇಳೆಗೆ ಇಳಿಯುತಿರೆ

ವಿಶ್ವವನಿತೆಯ ಭವ್ಯಸೌಂದರ್ಯವಲ್ಲಿಹುದು
ವಿಶ್ವಲಯಬದ್ಧತೆಯ ಕಾವ್ಯವಾಗಿಹುದು
ವಿಶ್ವಲತೆಯೇ ಬಾಗಿ ವಿಶ್ವವೃಕ್ಷವನೇರೆ
ವಿಶ್ವಲಾಲಿತ್ಯಪದಸುಮಗಳಲ್ಲಿಹುದು

ಸೃಷ್ಟಿಯೊಲವಿನ ಕಿರಣ ದೃಷ್ಟಿಯಾಳದೊಳಿಳಿಯೆ
ಎದೆಹೂವು ತಾನರಳಿ ಜೇನ ತುಂಬಿರಲು
ದೃಷ್ಟಿಯಿಂದಲಿ ಸೃಷ್ಟಿಯನ್ನರ್ಚಿಸಲಣಿಯಾಗಿ
ಹೂವನರ್ಪಿಸಲೇ ಹಗುರವಾಗಿರಲು

ಡಿ.ನಂಜುಂಡ
10/04/2016

ಶನಿವಾರ, ಏಪ್ರಿಲ್ 9, 2016

ಬಾ ಮಳೆಯೆ

ಬಾ ಮಳೆಯೆ ಬಾರೆ ಇಳೆಗಿಳಿಯೆ ನೀರೆ
ಉಡು ಬೇಗ ಕರಿಯ ಸೀರೆ
ನಿನ ಸೆರಗ ತುದಿಯು ಅತ್ತಿತ್ತ ಹಾರಿ
ಗಿರಿಯ ತಲೆಸವರಿ ಜಾರೆ

ಜರಿತಾರಿಯಂಚ ಮಿಂಚಿನಲಿ ನಿನ್ನ
ಯೌವನವ ಕಂಡ ಗಿರಿಯ
ಮೈಬಿಸಿಯ ಸೋಕಿ ನೀನವಗೆ ತಾಕೆ
ಪುಳಕಗೊಂಡೀತೆ ಹರಯ?

ನೀ ಗಂಗೆಯಾಗಿ ಗಿರಿಶಿವನ ತಬ್ಬಿ
ಅವನೊಡನೆ ಕ್ಷಣವ ಕಳೆದು
ತರುರೋಮದಂಚುಗಳು ನೇರಗೊಳಲು
ಸುರಿ ನಿನ್ನ ಬೆಡಗ ಬಸಿದು

ನಿನ ಚೆಲುವು ಚೆಲ್ಲಿದಲ್ಲೆಲ್ಲ ಜಲವು
ಬನಬನದಿ ಹೊನಲ ನಗುವು
ಕೆರೆಬಾವಿಮೈಗಳುಬ್ಬುಬ್ಬಿ ನಿಲಲು
ಅದುವೆ ನಿನ್ನೊಲವ ಬಲವು

ಡಿ.ನಂಜುಂಡ
09/04/2016

ಶುಕ್ರವಾರ, ಏಪ್ರಿಲ್ 8, 2016

ಬಾ ವರ್ಣ

ಬಾ ವರ್ಣ! ಪರಿಪೂರ್ಣಚಲಿತಶಕ್ತಿಯ ಚರಣ!
ಭವಕಿಳಿದ ಪರಶಿವನ ದೃಷ್ಟಿಕೋನ
ಭಾವಚೈತ್ರದ ಪರ್ವಭಾಷೆಯೊಳು ಚಿತ್ತೈಸಿ
ಜೀವಜಲದಂತೆನಗೆ ನೀಡು ಕರುಣ

ವರ್ಷಪೂರ್ಣತೆಗಿಂದು ಹರ್ಷಚೂರ್ಣಿಕೆಯಾಗಿ
ಕರ್ಷಿಸುತಲನುರಣಿಪ ಸೃಷ್ಟಿಯೆ ಬಾ
ಸ್ಪರ್ಶಸುಖಸಂತೃಪ್ತಪದದೊಳಗಿನರ್ಥದೊಲು
ಘರ್ಷಿಸುತಲಾನಂದವೃಷ್ಟಿಯೆ ಬಾ

ಸ್ವರಗಳಾ ಸ್ವಾತಂತ್ರ್ಯಸಂಭ್ರಮೋತ್ಸವದಲ್ಲಿ
ಭರದಿಂದ ಹಗುರಾಗೆ ಭಾರಮತಿಯು
ನೀರವದ ನೀರೊರತೆ ಹರಿವಿನಿರವಿನ ಕಲದಿ
ಬೆರತ ಬನದೊಲು ಬರಲಿ ಭಾವಸುಧೆಯು

ಎಲ್ಲಿ ನೋಡಿದರಲ್ಲಿ ಮಾಧುರ್ಯದಕ್ಷರವು
ಗೆಲ್ಲುಗಳನೊಡೆದೊಡೆಯೆ ಕನ್ನಡದೊಲು
ಸೊಲ್ಲೊಡತಿಯಡಿಗಡಿಗೆ ಪಲ್ಲವಿಸಿ ಚರಣವಿಡೆ
ನಿಲ್ಲಲೇ ನಾನಲ್ಲಿ ಮುನ್ನಡೆಯಲು?

ಡಿ.ನಂಜುಂಡ
09/04/2016

ಭಾವಧಾರೆ

ಸರ್ವಾರ್ಥಸಂಸಾರದಾಪಗದ ಹರಿವಿನಲಿ
ಸ್ವಾರ್ಥಗಳ ಕಳೆಗಳನು ದಡಗಳಿಗೆ ತಳ್ಳಿ  
ಸಾಗರವ ಸೇರಿ ತಾ ಹೆಸರನಳಿಸುವ ಭರದಿ
ಭೋರ್ಗರೆಯಲೆದೆಮಣ್ಣ ಹರಡುವುದು ನಳ್ಳಿ   

ಅಲ್ಲೊಮ್ಮೆ ಬಾಗುತಿರೆ ಮಳೆಬಿಲ್ಲ ಬಣ್ಣಗಳು
ಭಾವಗಳು ಬೆಡಗಿನಲಿ ಬಳುಕುವುದ ನೋಡಿ 
ಸೃಷ್ಟಿಯೇ ತಾನೆದ್ದು ತಾನನದಿ ಮೇಳೈಸಿ
ತಾಳಗಳ ಹಾಕುವುದು ತಂತಾನೆ ಹಾಡಿ

ಅರ್ಥಗಳನರೆದಿಲ್ಲ ಸ್ವಾರ್ಥಗಳ ಬೆಸೆದಿಲ್ಲ
ಆದರೂ ಪದಗಳಲಿ ಎಂಥದೋ ಕುಣಿತ
ಮುಂಬೆಳಗ ಸಂಭ್ರಮದಿ ಹಕ್ಕಿಗಳು ಹಾಡುವೊಲು
ಎದೆಬಾನನಾವರಿಸೆ ಸರಿಗಮವು  ಸತತ

ಭಾವಧಾರೆಯ ಹರಿವು ಸಾವುನೋವ್ಗಳ ಮೀರಿ
ಸಂತತವು ಹೆಸರಿರಿವ ಮರೆಯುತಿರಲಲ್ಲಿ
ಯಾವುದೋ ದಿವ್ಯತೆಯ ಸೌಂದರ್ಯವವತರಿಸಿ
ಜಗದಗಲ ನಿಂತಂತೆ ಅರಿವಾಳದಲ್ಲಿ
ಡಿ.ನಂಜುಂಡ
08/04/2016

ಚೆಂಡಾಡು ಹೇ ಚಂಡಮುಂಡಾರ್ದಿನಿ

ಬಂಡೆದ್ದ ಕಾಮಾದಿವೈರಿಗಳ ಹೆಡೆಮುರಿದು
ಚೆಂಡಾಡು ಹೇ ಚಂಡಮುಂಡಾರ್ದಿನಿ
ಕಂಡಕಂಡದ್ದೆಲ್ಲ ಬೇಕೆಂಬ ಬಯಕೆಗಳ
ತುಂಡರಿಸು ಹೇ ದುಷ್ಟಸಂಹಾರಿಣಿ

ಸುಖದುಃಖಸಮಹಿತವÀ ಪಿಂಡಾಂಡಗಳಲಿರಿಸು
ಅಖಿಲಾಂಡ ಬ್ರಹ್ಮಾಂಡಮಾಹೇಶ್ವರಿ
ಸಕಲಸಂಸಾರಸಾಹಿತ್ಯಪರಿಪೂರ್ಣತೆಯ
ಮುಖಮುಖದಿ ತಂದಿರಿಸು ಹೇ ವೈಖರಿ

ಭವಭೋಗಭಾಗ್ಯಘೃತಹವ್ಯಾಗ್ನಿಜಿಹ್ವೆಯಲಿ
ಶಿವರೂಪವೊಂದಿರಿಸು ಯೋಗೀಶ್ವರಿ
ರವರವದಿ ಕಲವಿರಿಸಿ ಸಂಕಲಿಸಿ ಹೂಂಕರಿಸು
ನವಶಕ್ತಿರೂಪಿಣಿಯೆ ನಾದೇಶ್ವರಿ

ಭಾವಭಾವವ ಹಾವ ಗತಿಯೊಳಗೆ ತಂದಿರಿಸಿ
ಭಾವಗಮ್ಯವ ತೋರೆ ಚಕ್ರೇಶ್ವರಿ
ಜೀವಭಾವದ ಮೂಲಪದ್ಮಸೌರಭವಳಿಯೆ
ಸಾವಿರದ ಸುಮ ತೋರೆ ನಿತ್ಯೇಶ್ವರಿ

ಡಿ.ನಂಜುಂಡ
08/04/2016

ಬುಧವಾರ, ಏಪ್ರಿಲ್ 6, 2016

ಅಂಟ ಬಿಡಿಸು

ಅಂಟ ಬಿಡಿಸು ಬಾರೊ ನೆಂಟ
ಅಂಟ ಬಿಡಿಸು ಬಾರೊ
ಅಂಟ ಬಿಡಿಸೊ ರಾಮಭಂಟ
ಅಂಟ ಬಿಡಿಸು ಬಾರೊ

ಒಂಟಿಯಾಗಿ ಜಗಕೆ ಬಂದು
ಎಂಟು ದಿಕ್ಕಿನೆಡೆಗೆ ಸಾಗಿ
ಕಂಠಕಗಳ ಅಂಟು ಮೂಟೆ-
ಗಂಟ ಕಟ್ಟಿಕೊಂಡು

ಆರರಿಗಳನಂಟಿಕೊಂಡು
ಹೊರೆಯಾಗಿರಲೀಗ
ತಿರೆಮಣ್ಣಲಿ ತೀರಿಕೊಳಲು
ಬರಿದಾಗದೆ ಆಗ

ತಡವೇತಕೆ ಹೊರೆಯನಿಳಿಸು
ಬಿಡಿಸಿಕೊಳಲು ಸಹಕರಿಸು
ಕಾಡೊಂದರ ಗೂಡಿನಲ್ಲಿ
ಹಾಡಾಗುವ ಹಾಗಿರಿಸು

ಡಿ.ನಂಜುಂಡ
06/04/2016