ಸೋಮವಾರ, ಡಿಸೆಂಬರ್ 30, 2013

ಹೊಸತನವು ಬಸಿರಾಗಲಿ!



ಹೊಸವರುಷವು ಹರುಷದೆದೆಯ
ಹೊಸಿಲಿನೊಳಗೆ ದಾಟಲಿ.
ಹೊಸತನವನು ಬಸಿರಾಗಿಸಿ
ಉಸಿರುಸಿರಲಿ ಚಲಿಸಲಿ.

ಮೈಮನಗಳು ನಲಿದಾಡುತ
ಸಮರಸದಲಿ ಕುಣಿಯಲಿ.
ಮಾಮರದಲಿ ಕೋಗಿಲೆಗಳ
ಹಿಮ್ಮೇಳವು ಮೊಳಗಲಿ.

ತೊದಲ ನುಡಿಗೆ ಹೃದಯದಲ್ಲಿ
ಮುದದ ಹೊನಲು ಉಕ್ಕಲಿ.
ಮುದಿಜೀವವು ಹಿತವಾಡಲು
ಹದವರಿಯುತ ಹರಿಯಲಿ.

ಹಳತಿನೊಳಗ ಹೂಳ ತೆಗೆದು
ಒಳಿತುಗಳನು ಹೆರಕಲಿ.
ನಾಳೆಯೊಳಗೆ ನಿನ್ನೆ ಸೇರಿ
ಬೆಳಕ ಹೊತ್ತು ಮೆರೆಯಲಿ.

ಹೊಸತಾಗಲಿ ಪ್ರತಿನಿಮಿಷವು
ಹೊಸಗವಿತೆಯ ಹಾಡಲಿ.
ಹೊಸದೊಸಗೆಯು ತಾ ವಿಸರಿಸಿ
ಹೊಸ ಕಂಪನು ಸೂಸಲಿ.

ಡಿ.ನಂಜುಂಡ
30/12/2013



ಸೋಮವಾರ, ಡಿಸೆಂಬರ್ 23, 2013

ಭಾವಗಳ ಸಿರಿಯಿರಲು ಬಡತನದ ಮಾತೇಕೆ?



ಭಾವಗಳ ಸಿರಿಯಿರಲು ಬಡತನದ ಮಾತೇಕೆ?
ಕಾವ್ಯಶರಧಿಯ ತೆರೆಗೆ ಮೌನವಿನ್ನೇಕೆ?
ನೋವು ನಲಿವಿನ ರಸವು ಚಿಮ್ಮುತಿರೆ ಸಮತೆಯಲಿ
ಕಾವುದೇತಕೆ ನಲ್ಲೆ!; ಹೃದಯಮಂಥನಕೆ

ಮಣ್ಣ ಕುಡಿಕೆಯ ಒಳಗೆ ಬೆಂದಿರುವ ಕಾಳುಗಳು
ಪ್ರಾಣಾಗ್ನಿಜ್ವಾಲೆಗಳ ಸಂತೈಸುತಿಹುದು
ಕಣ್ಣ ಕುಕ್ಕುವ ಹೊನ್ನು ಕಿಡಿಯನುಲ್ಬಣಗೊಳಿಸಿ
ಕ್ಷಣದಿ ಕರಗಿಸಿ ಸುಖವ ಬದುಕ ಸುಡಬಹುದು

ಗುಣಗಳನು ಸಂಕಲಿಸಿ ಮನದೊಳಗೆ ಸಂಸ್ಕರಿಸಿ
ಮಾನಾಪಮಾನಗಳ ಸಮತೂಕಗೊಳಿಸಿ
ಅನ್ನರಸದಾನಂದವೊಲವಾಗಿ ಒಸರಿಸಲಿ    
ಜನುಮಜನುಮದ ಋಣವ ಬಂಧದಲಿ ಇರಿಸಿ

ಬಾಳಿನೊಡತಿಯೆ! ನಿನ್ನ, ಕರೆಯುತಲಿ "ನನ ಚಿನ್ನ!"
ಓಲೆಯಲಿ ಮುತ್ತೊಂದ ಇರಿಸುವೆನು ಬೇಗ
ಚೆಲುವು ಮೂಡಲು ಮೊಗದಿ ನಗೆಹೂವ ಕುಡಿಯುವೆನು
ಬಲ್ಲಿದರು ಯಾರಿಲ್ಲಿ? ಹೇಳು ನೀ ಆಗ

ಡಿ.ನಂಜುಂಡ
24/12/2013

ಸುಂದರ ಉದ್ಯಾನ!



ಪಶ್ಚಿಮಘಟ್ಟವಿಶಾಲೋದ್ಯಾನದಿ
ನಿಶ್ಚಿತ ತನುಮನ ಸಂಭ್ರಮವು
ರೋಚಕ ದೃಶ್ಯಾವಳಿಸಂಕರ್ಷಿತ
ವಾಚನ ಪ್ರವಚನ ಗಾಯನವು

ಸಿಂಧೂರಾರುಣ ಪರ್ಣಸುಶೋಭಿತ
ಚಂದನಚರ್ಚಿತ ಮಂದಿರವು
ಮಂದಸ್ಮಿತಸುಮ ವರ್ಣವಿಭೂಷಿತ
ಸುಂದರ ವನಶುಭಸನ್ನಿಧಿಯು

ಗಿರಿಶೃಂಗಾನನ ಸಿಂಚಿತ ನಿರ್ಮಲ
ವರತುಂಗಾಜಲಮಾರ್ಜನವು
ಜರ್ಜರ ತರುಮೂಲೌಷಧಮಿಶ್ರಿತ
ತೀರ್ಥೋದಕಸಂಪ್ರಾಶನವು

ಹಿಮಮಣಿಮಾಲಾವೃತ ರಾಮಣ್ಯಕ
ನಿಮ್ನೋನ್ನತಪಥಚಾರಣವು
ಸುಮಮಧುಸಂಚಯನೋತ್ಸವ ವಿಲಸಿತ
ಭ್ರಮರಶ್ರುತಿಸಂಕೀರ್ತನವು

ಸೃಷ್ಟಿವಿಹಂಗಮ ಪರ್ವತಸಂಗಮ
ದೃಷ್ಟ್ಯಾಕರ್ಷಕ ದರ್ಶನವು
ವ್ಯಷ್ಟಿಸಮಷ್ಟಿಯ ಕೃತಿಸಂವೇಷ್ಟಿತ
ಇಷ್ಟಿಗೆ ಸಂತುಷ್ಟ್ಯಾಹುತಿಯು

ಡಿ.ನಂಜುಂಡ
23/12/2013


ಶನಿವಾರ, ಡಿಸೆಂಬರ್ 21, 2013

ಬಿಲ್ಲಾಗಿದೆ ತನುವು



ಚಳಿಯ ಗಾಳಿಗೆ ತನುವು ಬಾಗಿರೆ
ಹರನ ಬಿಲ್ಲಿನ ತೆರದಲಿ
ಹೊದ್ದು ಮಲಗುತ ನಿದ್ದೆ ಹೋದರು
ಮಂದಿಯೆಲ್ಲರು ಮನೆಯಲಿ

ಮೇಲಕೇಳುವ ಯತ್ನವೆಲ್ಲವು
ವಿಫಲವಾಗಲು ಮನದಲಿ
ಕಾಲ ಗಂಟನು ಎದೆಗೆ ಮುಟ್ಟಿಸಿ
ಯೋಗಿಯಾದರು ಕ್ಷಣದಲಿ

ಬಿಲ್ಲ ಹಗ್ಗವ ಪಿಡಿದು ಜಗ್ಗಲು
ಬಿಸಿಲಿನರಸನು ಬಾನಲಿ
ಹಲ್ಲ ಕಡಿಯುತ ಮೆಲ್ಲನೆದ್ದರು
ನಿಂತರೊಲೆಗಳ ಬದಿಯಲಿ

ಹರಿದು ಹಗ್ಗವು ಕೆಳಗೆ ಬೀಳಲು
ಸಂಜೆಗೆಂಪಿನ ಕಡಲಲಿ
ಹರಿಯ ಛಾಪಕೆ ಸಾಟಿಯಾಯಿತು
ಮತ್ತೆ ತನುವದು ಚಳಿಯಲಿ

ಡಿ.ನಂಜುಂಡ
22/12/2013

ಶನಿವಾರ, ಡಿಸೆಂಬರ್ 7, 2013

ಅಕ್ಷಿಯೊಳಗಣ ಸಾಕ್ಷಿಯಂಕುರ



ಇರುಳು ಕರಗುತಲೆದ್ದು ಕಸಗುಡಿಸಿ ಹಾಲ್ಕರೆದು
ಹೊರಟು ನಿಂತಳು ಬಡವಿ ಬನದಕಡೆಗೆ
ಬರಿಗಾಲ ನಡಿಗೆಯಲಿ ಹೊಕ್ಕಳಾ ಕಾಡೊಳಗೆ
ತರಗೆಲೆಯ ಗುಡಿಸಿ ತಾ ಹೊತ್ತುತರಲು

ಬಡತನದ ಬೇಗುದಿಗೆ ಒಡಲೆಲ್ಲ ಹದವಾಗಿ 
ನಡುವು ಬಳುಕಿದೆ ಬಾಗಿ ಮಣ್ಣಿನೆಡೆಗೆ
ಬಿಡದೆ ಬೆವರನು ಸುರಿಸಿ ದುಡಿಯುತಿರೆ ಅನುದಿನವು
ಗಡಿಗೆಯೊಳು ಬೇಯುತಿದೆ ಕಾಳುಕಡಿಯು

ಅಕ್ಷರದ ಸೋಂಕಿಲ್ಲ ಹೆಸರಿನಾ ಹಮ್ಮಿಲ್ಲ
ಕುಕ್ಷಿಯೊಳಗೆಚ್ಚರದ ಕಿಡಿಯು ಇರಲು
ಪಕ್ಷಿಯುದರದಿ ಬೆಂದ ಬೀಜಗಳ ತೆರದಲ್ಲಿ
ಅಕ್ಷಿಯೊಳಗಣ ಸಾಕ್ಷಿಯಂಕುರಿಪುದು

ಹುಟ್ಟಿನಿಂದಲೆ ಬಂದ ಕಷ್ಟಗಳ ಜ್ವಾಲೆಯದು
ಚಟ್ಟದೊಳು ಹೊಳೆಯುವುದು ಸುಖವನಿಟ್ಟು
ಇಷ್ಟಗಳ ಬೆನ್ನಟ್ಟಿ ಪಡೆದ ಮಮಕಾರಗಳು
ಸುಟ್ಟು ಬಿಡುವುವು ಸುಖವ ಕಟ್ಟಕಡೆಗೆ

ಇರುಳ ಕರಗಿಸಿ ರವಿಯು ಹೆರಲು ಹಗಲನು ನಿತ್ಯ
ಉರಿವ ಬೆಂಕಿಯು ಬೇಕು ಉದರದೊಳಗೆ
ಉರದೊಳಗೆ ತುಂಬಿರಲು ಇಲ್ಲಗಳ ಕಿಚ್ಚುಗಳು
ಇರುವುದೆಲ್ಲವು ಬೆಳಕು ಬಡವರೊಳಗೆ

ಡಿ.ನಂಜುಂಡ
7/12/2013