ಗುರುವಾರ, ಜೂನ್ 7, 2018

ಸಂತೆಗೆ ಬಾರೋ


ಸಂತೆಯ ಬೀದಿಗೆ ಬಾರೋ ಸಂತನೆ!
ಸಂತತ ಸಮತೆಯ ಚಿಂತನೆಗೆ
ಮೆಂತ್ಯದ ಸೊಪ್ಪಿನ ಕಂತೆಗಳೆಣಿಸುತ
ನಿಂತಿಹ ಜನಗಳನರಿಯಲಿಕೆ

ಮಾರಲು ಕೂಗಿದ ಬೆಲೆಯೇ ಒಂದು
ಕೊಳ್ಳಲು ಕೇಳಿದರಿನ್ನೊಂದು
ತೆಳ್ಳಗೆ ಬಳುಕುತ ಬಂದಿಹ ಚೆಲ್ವಿಯ
ಬೆಳ್ಳಿಯ ನಗುವಿಗೆ ಮೊಗದೊಂದು

ಬೇಕುಗಳಾಟದ ನಾಗಾಲೋಟಕೆ
ಬೆಲೆಗಳು ಮೇಲ್ಮೇಲ್ ಜೀಕುತಿರೆ
ಸಾಕುಗಳೆದೆಯೊಳಗಡಿಯಿಟ್ಟೊಡನೆಯೆ
ಕೆಳ ಕುಸಿಯುತ ನೆಲ ತಾಕುತಿರೆ

ಬೆಳೆಗಳ ಮೌಲ್ಯವನಳೆಯುವ ಬಗೆಗಳ
ನೆಳೆಯೆಳೆಯಾಗೆಳೆದಾಡಲಿಕೆ
ಕಡೆದೂ ಕಡೆದೂ ಪಡೆದಿಹ ತಿಳಿವಿನ
ತಡೆಯಿಲ್ಲದ ಹರಿವಾಗಲಿಕೆ

ಇಂತಿರಲೆಮ್ಮೊಳ ಮಾತುಗಳಲೆಗಳ  
ನಂತಿಮ ಸತ್ಯದ ಮಂತ್ರಗಳ-
ನಾಗಿಸಿ ಬದುಕಿನ ಬಟ್ಟೆಯೊಳಿಳಿಸಲು
ಸಂತೆಗೆ ತಾರೋ ತಂತ್ರಗಳ

ಡಿ.ನಂಜುಂಡ
07/06/2018




ಶುಕ್ರವಾರ, ಜನವರಿ 19, 2018

ಮಂಥನ

ಅಸ್ತಿನಾಸ್ತಿಗಳೆಂಬ ದ್ವಂದ್ವಗಳನೊಡೆದೊಡೆದು
ಅಸ್ತಿತ್ವಪರಮಾಣುಕಣವೊಂದನುಳಿಸಿ
ತತ್ತ್ವಭಾವಪರಿಪೂರ್ಣವಿಸ್ತಾರದಲಿ
ನಿರಪೇಕ್ಷವಾಗುಳಿಯೆ ಸಾಪೇಕ್ಷವಳಿಸಿ

ಕಣ್ಣೆರಡು ಕಂಡದ್ದು ಕಿವಿಯೆರಡು ಕೇಳಿದ್ದು
ಮೂಗು ತಾನಾಘ್ರಾಣಿಸುದುದೆಲ್ಲವನ್ನು
ಅಸ್ತಿತ್ತ್ವದಾ ಸ್ಪರ್ಶದನುಭಾವವೆಂದರಿತು
ನಾಲಗೆಯು ಹೇಳಿದುದು ದ್ವಂದ್ವವನ್ನು

ಅದು ಸತ್ಯವಿದು ಮಿಥ್ಯವೆಂಬ ತೀರ್ಮಾನಗಳು
ಭಾವದಲ್ಲಿರುವರೆಗು ಅದು ಜ್ಞಾನವಲ್ಲ
ತೀರ್ಮಾನರಾಹಿತ್ಯ ಸ್ಥಿತಿಯ ತಲುಪಿದ ಕ್ಷಣದಿ
ಭೂತಭವ್ಯಗಳೆಂಬ ಕಾಲಗಳೆ ಇಲ್ಲ

ಭೂತಭವ್ಯಗಳಿರದೆ ಸಾಪೇಕ್ಷವೇ ಇಲ್ಲ
ಕಾಲವುರುಳದೆ ಭಾವಕಸ್ತಿತ್ವವಿಲ್ಲ
ಭಾವವಿರದಾ ಕಾಲ ತಾ ದೀರ್ಘವಾಗುಳಿದು
ತನ್ನೊಳಗೆ ಸ್ಥಿರವಾಗೆ ನಿರಪೇಕ್ಷವೆಲ್ಲ

ಯಾವುದನು ತಿಳಿದಾಗ ತಿಳಿದವನು ತಿಳುವಳಿಕೆ-
ಯಲ್ಲಿಯೇ ಸೇರಿದಂತಾಗಲದು ನಿತ್ಯ
ವರ್ತಮಾನವೇ ಜಗದಗಲ ವ್ಯಾಪಿಸಿಹ
ಮತಿಗೆ ನಿಲುಕದ ಗಹನದಸ್ತಿತ್ವತತ್ತ್ವ

ಡಿ.ನಂಜುಂಡ
19/01/2018






ಬುಧವಾರ, ಜನವರಿ 17, 2018

ಬೀಗವೇತಕೆ ಗುಡಿಗೆ?

ಬೀಗವೊಂದೇತಕ್ಕೆ ಬಾಗಿಲಿಲ್ಲದ ಗುಡಿಗೆ?
ಬಾಗಿಲೇತಕ್ಕೆ ಚಾವಣಿಯೆ ಇಲ್ಲದಿರೆ?
ಚಾವಣಿಯ ಹೊಚ್ಚಲಿಕೆ ಗೋಡೆಗಳೆ ಇಲ್ಲದಿರೆ
ಅಭಿಷೇಕಗೈಯಲಿಕೆ ಮೂರ್ತಿಯಿಲ್ಲದಿರೆ

ಇರುವವನು ತಾನಿಲ್ಲದಂತಿರಲು ಅಲ್ಲಿಹನು
ಇಲ್ಲಿಹನು ಎಂದು ಸಂಕುಚಿಸುತ್ತಲಿಹನ
ಒಳಗರಿವು ಹೊರಬಾರದೊಲು ನಾನು ನಾನೆಂಬ
ಕುಣಿಕೆಯೊಳು ಬಂಧಿಸುತ ವಂದಿಸುತಲವನ

ನೀ ತಂದೆ ಜಗಕೆಲ್ಲವೆಂದು ಹೊಗಳುತ ನಿಂದು
ಜಗದಿಂದ ತಾ ಬೇರೆಯಾದೆಂತೆ ಬಗೆವ
ಅರಿವೊಂದು ಬೀಗುತಲಿ ಬೀಗವನು ಜಡಿಯಲಿಕೆ
ಬಾಗಿಲೆಲ್ಲಿದೆ ಗುಡಿಗೆ; ಹೇಳು ಗುರುದೇವ?

ಡಿ.ನಂಜುಂಡ

17/01/2018

ಭಾನುವಾರ, ಜನವರಿ 14, 2018

ಅರ್ಥದೊಳಗೊಂದಾಗು

ಬಣ್ಣ ಬಣ್ಣದ ಭಾವಮೃಗವ ಬೆಂಬತ್ತದಿರು
ಬಂಗಾರದೊಲು ಹೊಳೆವ ಹಾಗಿದ್ದರೂ
ಅರ್ಥರಾಮನ ಬಿಟ್ಟು ಅನ್ಯಗತಿ ನಿನಗಿಲ್ಲ
ಮಾತೆ! ನಿನ ಗಮನ ಸೆಳೆವಂತಿದ್ದರೂ
ಕಲ್ಪನೆಯ ಚಿತ್ರದೊಳು ಮಾರೀಚನವತರಿಸಿ
ನಿನ್ನ ನೋಟವ ತನ್ನ ಮೈಮಾಟಕಿಳಿಸಿ
ಅತ್ತಿತ್ತಲೋಡಾಡಿ ಹೊತ್ತೊಯ್ದು ಹತ್ತರ್ಥ-
ದಡಿಹಾವ ಹುತ್ತದೊಳು ನಿನ್ನನಿಳಿಸಿ
ಅಳಿಸಿ ನೋವುಣಿಸುವಾ ಮುನ್ನವೊಳನೋಟದೊಳು
ಬಾಗಿ ಹಾಡಾಗಿ ಹರಿಯುತ್ತ ಸಾಗಿ
ಒಂದರ್ಥದೊಳಗೆ ನೀನೊಂದಾಗಿ ಹರಹಾಗು
ಹಲವಾಗಿ ತೋರುವಂತರ್ಥವಾಗಿ
ಡಿ.ನಂಜುಂಡ
14/01/2018