ಮಂಗಳವಾರ, ಸೆಪ್ಟೆಂಬರ್ 29, 2015

ರಾವಣನ ನೆನೆ ನರನೆ!

ಅನುದಿನವು ನೂರು ಸಲ ರಾವಣನ ನೆನೆ ನರನೆ!
ಬಂದಾನು ಶ್ರೀರಾಮ ನಿನ್ನ ಬಳಿಗೆ
ದುಷ್ಟಮನವದೇ ಲಂಕೆ ಎಂದವನು ತಿಳಿದಾನು
ಅದ ಸುಡಲು ಸಾಕವಗೆ ಅರ್ಧ ಘಳಿಗೆ

ನೂರಾರು ಸ್ತ್ರೀಯರನು ಚಿತ್ತದೊಳು ಛಾಪಿಸುತ
ಹೊತ್ತೊಯ್ದು ಬಚ್ಚಿಟ್ಟ ಪಾಪಿಷ್ಠ ನೀನು
ಭಾವಬಿಂಬದೊಳಿಟ್ಟು ಮೋಹಿಸಿದ ಮಾಯಾವಿ
ಹತ್ತು ತಲೆ ರಾವಣನ ತದ್ರೂಪಿ ನೀನು

ರಾವಣನ ನೆನೆನೆನೆದು ರಾವಣನೆ ನೀನಾಗು
ಸಾಕ್ಷಿಯಲಿ ಶ್ರೀರಾಮನೆಚ್ಚೆತ್ತು ಬರಲಿ
ರಾಮನೊಡ ಕಾದಾಡೆ ರಾವಣಾಂಶವು ಮಡಿದು
ಕಾಮಾದಿ ರಾಕ್ಷಸರ ಹುಟ್ಟಡಗುತಿರಲಿ

ಡಿ.ನಂಜುಂಡ
29/09/2015


ಮಂಗಳವಾರ, ಸೆಪ್ಟೆಂಬರ್ 22, 2015

ಪ್ರಕೃತಿಪದಗಳು

ಸ್ಥವಿರಗಿರಿಯ ಭಾವಗಳೇ
ಹರಿವ ಹೊನಲ ಹಾಸವು
ಜಲಪಾತದೊಳಿಳಿದು ಬಸಿಯೆ
ಜಲಧಿತಳದ ಮೌನವು

ತರುಲತೆಗಳ ಮನದಲೆಗಳೇ
ತಂಬೆಲರಿನ ಸ್ವರಗಳು
ಚಿಗುರಿನೊಗರಿನಕ್ಷರಗಳೇ
ಖಗಚರಗಳ ಉಲಿಗಳು

ಕಡಲ ಮಾತಿನಬ್ಬರಗಳೇ
ಮುಗಿಲೆಳೆದಾರ್ಭಟಗಳು
ಮಿಂಚಂಚಿನ ಸಿಡಿಗೋಪಕೆ
ಇಳೆಗಿಳಿದಿಹ ಮಳೆಗಳು

ಅಚಲ ತತ್ತ್ವಭಾವಗಳೇ
ನಿತ್ಯ ಚಲಿಪ ಬಲಗಳು
ನಿಯತವಾಗಿ ಹಾಡಿ ನಲಿವ
ಪ್ರಕೃತಿಲೀನಪದಗಳು
  
ಡಿ.ನಂಜುಂಡ

22/09/2015

ಶುಕ್ರವಾರ, ಸೆಪ್ಟೆಂಬರ್ 18, 2015

ಇಪ್ಪೆ ಮರ

ಬಾಲ್ಯದಲಿ ಎಷ್ಟು ಸಲ ನಿನ್ನೇರಿ ಆಡಿದರೂ
ಒಮ್ಮೆಯೂ ನೀ ಮುನಿಸ ತೋರಲಿಲ್ಲ
ಹೂವೊಲವ ಸಿಹಿಯುಣಿಸಿ ಮನ ತಣಿಸಿದಾ ಇಪ್ಪೆ
ಮರವೇ! ನೀ ಹೀಗೆ ಕೆಳ ಬಿದ್ದೆಯಲ್ಲ!

ನಿನ್ನೊಡಲ ಕುಡಿಯೇಕೆ ಚಿಗುರೊಡೆಯಲಿಲ್ಲ?
ಬೇರೆಲ್ಲ ನೆಲದಿಂದ ಬೇರಾಯಿತಲ್ಲ
ರಸ್ತೆಯಗಲಿಸಿ ನಿನ್ನ ನೆಲಕೆ ದೂಡುವ ಕ್ಷಣದಿ
ನೀನೇಕೆ ಚೀರಿ ಕೂಗಾಡಲಿಲ್ಲ?

ಬಿದ್ದರೂ ಕೆಳಗೆ ನೀನೊದ್ದಾಡುತಿಲ್ಲ
ಮೈತುಂಬ ಪಾಚಿ ಹಸಿರುಡಿಸಿತಲ್ಲ
ತಾಯಿಬೇರೊಣಗೊಣಗಿ ಮಣ್ಣಾಗುತಿದ್ದರೂ
ಗೋಳಿನಲಿ ಒಮ್ಮೆಯೂ ಗೊಣಗುತಿಲ್ಲ

ನೋವುಗಳನೆಂದೆಂದೂ ತೋಡಿಕೊಳಲಿಲ್ಲ 
ತಾಳ್ಮೆಯಾ ಗುಟ್ಟೆನಗೆ ಹೇಳಲೇ ಇಲ್ಲ
ನಿನ್ನೆದುರು ನಾನಿಂದು ಬಂದು ನಿಂತಿಹ ಕ್ಷಣದಿ
ಭಾವಸುಮಗಳು ಹೀಗೆ ಚೆಲ್ಲಾಡಿತಲ್ಲ
ಇದಕಿಂತ ಬೇರೊಂದೂ ನನಗೆ ಗೊತ್ತಿಲ್ಲ.
ಡಿ.ನಂಜುಂಡ

21/09/2015

ಭಾನುವಾರ, ಸೆಪ್ಟೆಂಬರ್ 13, 2015

ಕನ್ನಡತನ

ಕನ್ನಡತನವೆನ್ನೆದೆಯೊಳು
ಸನ್ನಡತೆಯ ಸರಿಗಮ
ಚೆನ್ನುಡಿಗಳನೊಳಗಿಂಗಿಸಿ
ಮುನ್ನಡೆಸುವ ಜಂಗಮ

ಕಣಕಣದೊಳಗನುರಣಿಸುವ
ಜನಪದಗಳ ಸಂಕ್ರಮ
ಬನಬನಗಳ ಹೊನಲಿನಂತೆ
ಹನಿಹನಿಗಳ ಸಂಗಮ

ಬಾನುಲಿಯಿಂದವತರಿಸಿಹ
ಕಾನುಲಿಗಳ ವಿಕ್ರಮ
ನಾನಾನನತಾನವಾಗಿ
ಬಾನೇರುವ ಸಂಭ್ರಮ

ಡಿ.ನಂಜುಂಡ
13/09/2015


ಶನಿವಾರ, ಸೆಪ್ಟೆಂಬರ್ 12, 2015

ಬೇಲಿಯೇ! ಮಾತಾಡು

ಹಿತ್ತಲಲಿ ಹಿಗ್ಗುತಿಹ ಹೂವು ಹೂವಿನ ಕಂಪು
ಹೊರ ಹಾರುತಿಹುದೇಕೆ ಎಲೆ ಬೇಲಿಯೆ!
ಹಾದಿಯಲಿ ಹೋಗುವವರೋರೆ ಕಂಗಳ ನೋಟ-
ಗಳನೇತಕೊಳಬಿಡುವೆ ಸೋಮಾರಿಯೆ!

ನನ್ನದೆಂಬುದನೆಲ್ಲವೊಳಗೊಳಗೆ ಬೆಳೆಸಿಟ್ಟು
ನಿನ್ನ ಕಾವಲಿಗಿರಿಸಿ ನಾ ಸುಮ್ಮನಿದ್ದೆ
ನೀನೆನ್ನ ನಂಬಿಕೆಯ ನುಚ್ಚು ನೂರಾಗಿಸುತ
ನಿದ್ದೆಯಲಿ ನೀನೇಕೆ ಎಲ್ಲ ಮರೆತಿದ್ದೆ?

ಬಳ್ಳಿಗಳ ಬಳುಕಂದ ಮತ್ತದರ ಹೂ ಗಂಧ
ಮಕರಂದಗಳ ಒಡೆಯ ನಾನಲ್ಲವೆ?
ಬಣ್ಣ ಬಣ್ಣಗಳೆಲ್ಲ ನನ್ನದೆಂಬುದ ಮರೆತು
ಎಲ್ಲ ಹೊರಗೆಸೆದದ್ದು ತಪ್ಪಲ್ಲವೆ?

ನೀ ಕಾಯುತಿಹೆಯೆಂಬ ಹುಸಿನಂಬುಗೆಯ ಬಿಟ್ಟು
ನಿನ್ನನೀಗಲೆ ಕಿತ್ತು ಹೊರ ಹಾಕಲೇ?
ನನ್ನದೆಲ್ಲವನೆಸೆದು ಜಗದೆಲ್ಲೆಯನು ಹೊಸೆದು
ಹೂಗಂಪಿನೊಳು ತೂರಿ ಹಾರಾಡಲೇ?

ಡಿ.ನಂಜುಂಡ
12/09/2015


ಮಂಗಳವಾರ, ಸೆಪ್ಟೆಂಬರ್ 8, 2015

ಅವ್ಯಕ್ತ

ಅಂತರಂಗದಲ್ಲಿದೆಂಥ-
ದೋಂತನನನದಂತಿದೆ
ಅನಂತವರ್ಣತಂತುವಿಂತು
ಸಂತತವಾದಂತಿದೆ

ಮುಂಜಾನೆಯ ಮಂಜಿನಲ್ಲಿ
ಸಂಜೆಗೆಂಪು ಪಂಜಿನಲ್ಲಿ
ಹಿಂಜಿ ರಾಗರಂಜನೆಗಳ
ಕೆಂಜೆಡೆಯವಗರ್ಪಿಸುತಿರೆ

ಶೃಂಗಾರದಿ ರಂಗೇರಿದ
ಅಂಗಾಂಗಗಳಂಚಿನಲ್ಲಿ
ಸಂಘಟಿಸಿದ ಭಂಗಿಗಳನು
ಕೆಂಗಣ್ಣವಗರ್ಪಿಸುತಿರೆ

ಸುಂದರವನಮಂದಿರತರು
ಚಂದನಗಳ ಚರ್ಚೆಯನ್ನು
ಮಂದಗಂಧವಾಹದಿಂದ-
ಲಿಂಧುಧರನಿಗರ್ಪಿಸುತಿರೆ.

ಡಿ.ನಂಜುಂಡ
08/09/2015


ಬುಧವಾರ, ಸೆಪ್ಟೆಂಬರ್ 2, 2015

ಪಕ್ಷಪಾತ!?

ವಿದ್ಯುದವಲಂಬನೆಗೆ ಮಾನವನು ನಲುಗೆ
ವಿದ್ಯುದಾಲಿಂಗನದಿ ಸತ್ತಂತೆ ಕಾಗೆ
ಕಾಗೆ ಸತ್ತರೆ ಜಗಕೆ ಇನಿತಿಲ್ಲ ಕೊರತೆ
ಮನುಜ ಸತ್ತರೆ ಏಕೋ ಕಣ್ಣೀರಿನೊರತೆ

ಕಾಗೆಗಳ ಸಂಕುಲಕೆ ಶಾಂತಿಯನು ನೀಡಿ
ನರಜನ್ಮವನು ಮಾತ್ರ ಕತ್ತಲೆಗೆ ದೂಡಿ
ಪಕ್ಷಪಾತವನೆಣಿಪ ದೇವನಾರು?
ಎಲ್ಲಿಹುದು ಜಗದ ಮಲತಾಯಿಬೇರು?

ಕತ್ತಲೆಯು ಕವಿದಾಗ ಸೊಡರಿನೊಳು ಬಂದು
ಹೇಳುತಿಹನೀ ಬೆಳಕು ನಿನಗೆ ಸಾಕೆಂದು
ಮಾನವನ ನೈವೇದ್ಯದನ್ನವನು ತಿಂದು
ದೇವ ಹೀಗೇಕೆ ಮಾಡುತಿಹನಿಂದು

ಮನುಜಗಿಲ್ಲದ ಸುಖವು ಕಾಗೆಗಳಿಗೇಕೆ?
ರವಿಯ ಬೆಳಕೊಂದೇ ಮಾನವಗೆ ಸಾಕೆ?

ಡಿ.ನಂಜುಂಡ
02/09/2015