ಭಾನುವಾರ, ಆಗಸ್ಟ್ 25, 2013

ಪುಟವಾಗಿ ನಾ ಬೆಳೆದೆ ಪ್ರೀತಿಕಣವ



ಬಡತನದ ಮಣ್ಣಿನಲಿ ಕಣ್ಣೀರ ಮಳೆಗರೆದು
ಪುಟವಾಗಿ ನಾ ಬೆಳೆದೆ ಪ್ರೀತಿಕಣವ.
ಸಡಗರದ ಸುಗ್ಗಿಯಲಿ ನನ್ನವಳು ಬೆರೆತಿರಲು
ಹಾಡುವೆನು ಕುಣಿಯುವೆನು ತುಂಬಿ ಭಾವ.

ಬಾಳ ಹೊಲದಲಿ ಬೆಳೆದ ಕಾಳುತೆನೆಗಳನೆಲ್ಲ
ಎದೆಯ ಅಂಗಳದಲ್ಲಿ ಸುರಿದು ಒಕ್ಕಿ.
ಕಷ್ಟಗಳ ಜೊಳ್ಳನ್ನು ತೂರುತ್ತ ಗಾಳಿಯಲಿ
ಇಷ್ಟಗಳ  ಕಣಗಳನು ಹೆಕ್ಕಿ ಹೆಕ್ಕಿ.

ಒಲವಿನಾ ಒರತೆಯಿರೆ ಬರವಿರದು ಬದುಕಿನಲಿ
ಚೆಲ್ಲಿರಲು ಮೊಗತುಂಬ ನಗೆಯ ಜೇನು.
ಮಧುರ ಕ್ಷಣಗಳ ಮದ್ಯ ಸವಿಯುತ್ತ ಸುಗ್ಗಿಯಲಿ
ಪದವೊಂದ ತಡವರಿಸಿ ಉಲಿವೆ ನಾನು.


ಶುಕ್ರವಾರ, ಆಗಸ್ಟ್ 16, 2013

ಒಲವು !



ಒಲವೆ! ನೀನು ಜಗದ ಮಾತೆ
ಜಲಧಿಯಂತೆ ವ್ಯಾಪಕ.
ಅಲೆಯ ಮೇಲೆ ಚಲಿಪ ನಾನು
ತೇಲುತಿರುವ ನಾವಿಕ.

ಮನದ ಹೊನಲ ಹರಿವು ಮುಗಿದು
ಕಾಣದಿರಲು ಅದರ ಕುರುಹು
ಕಳೆವೆ ‘ನಾನು’ ಎಂಬ ಸುಳಿವ
ಒಳಗೆ ಸೇರಿ ನಿನ್ನ ಮಡಿಲ.

ತೀರವಿರದ ಪ್ರೀತಿಕಡಲ
ದೂರದಳತೆ ನಿಲುಕದಿರಲು
ಆಳಕಿಳಿದು ತಳವು ಸಿಗದೆ
ತೇಲುತಿಹುದು ಹಗುರ ಭಾವ.


ಶನಿವಾರ, ಆಗಸ್ಟ್ 10, 2013

ಬೆವರಿಳಿಸು ಬಾ ಬೇಗ ಬಿಸಿಲ ಸುರಿಸಿ



ಯಾವ ಕಡಲೊಳು ಮುಳುಗಿ ಕುಳಿತಿರುವೆ ಬಿಸಿಲರಸ!
ಬುವಿಯೊಡಲ ಬೆದೆಗೊಳಿಸಿ ಬಸಿರ ಒಡೆಸು.
ಕವಿಯೆದೆಯ ಕುಣಿಸುತಲಿ ನಿಲ್ಲದಿರು ಗಿರಿಯಲ್ಲಿ
ಬೆವರಿಳಿಸು ಬಾ ಬೇಗ ಬಿಸಿಲ ಸುರಿಸಿ.

ಮೇಲಮೇಲಕೆ ಸಾಗಿ ಕಿರಿದಾಗು ಬಾನಿನಲಿ
ತಲೆಯೆತ್ತಿ ನೋಡುವೆನು ನಿನ್ನ ನಡೆಯ.
ಮೇಲೇರಿ ಗಗನದಲಿ ನೋಡು ಬಾ ಎನ್ನೆದೆಯ
ಬಲ ತುಂಬಿ ನೆಲೆಗೊಳಿಸು ನನ್ನ ಉಸಿರ.

ಮೇಲಕೇರಿದ ಒಡೆಯ ನೋಡಲಾರನು ಏಕೊ
ಕೆಳಗೆ ಬಾಗಿದ ಬೆನ್ನ ಹುರಿಯ ಕಡೆಗೆ.
ಇಳೆಯ ಮಣ್ಣೊಳು ಇಣುಕಿ ನೋಡು ಬಾ ಬಿಸಿಲೊಡೆಯ!
ಕೆಳಗೆ ಬಾಗೆನು ಆಗ ನೆಲದ ಕಡೆಗೆ.

ಬಿಸಿಲಿನಾ ಕಾವೇರಿ ಹಸಿರೊಡೆದು ಟಿಸಿಲಾಗಿ
ಹೊಸತಳಿರ ಹೊಂಬಣ್ಣ ಚಿಮ್ಮಿ ಬರಲಿ.
ಪಸೆಯ ಹೀರಿದ ಬೇರ ಸಾರವನು ಸೆಳೆಯುತಲಿ
ಕಸುವಿನಲಿ ಹೊಸತೆನೆಯು ಪುಟಿದು ನಿಲಲಿ.

ಭಾನುವಾರ, ಆಗಸ್ಟ್ 4, 2013

ಸೋಂಕಿಸಿದೆ ಪ್ರೇಮಜ್ವರವ



ಕಣ್ಣ ಹುಬ್ಬಿನ ಮೇಲೆ ವರ್ಣಮಾಲೆಯನಿರಿಸಿ
ಕುಣಿಸುತಿರೆ ಪದಗಳನು ಬರೆದೆ ಕವನ.
ಮಣ್ಣ ಒಳಗಿನ ಸಾರ ಹಣ್ಣೊಳಗೆ ಬೆರೆತಾಗ
ಬಣ್ಣನೆಯ ಸುಳಿವೆನಗೆ ನಿನ್ನ ವರ್ಣ

ಕಣ್ಣ ಮಿಟುಕಿಸಿ ಒಮ್ಮೆ ಸೋಂಕಿಸಿರೆ ಪ್ರೇಮಜ್ವರ
ನನ್ನೆದೆಯು ಕಾವೇರಿ ಕೆಂಪು ಕೆಂಡ.
ಬಿಸಿಯುಸಿರ ಜ್ವಾಲೆಯಲಿ ಬೆಂದಿರುವ ಭಾವದಲಿ
ಹಸಿಯ ಕಾಮನಬಿಲ್ಲ ಸಪ್ತವರ್ಣ.

ಒಲವೊಳಗೆ ಕನಸಿಟ್ಟು ಕರಗಿಸುತ ಹದಗೊಳಿಸೆ
ಕುಲುಮೆಯಲಿ ಪುಟವಿಟ್ಟ ಕನಕರತ್ನ.
ಗಲ್ಲದಲಿ ಬೆರಳಿಟ್ಟು ದೃಷ್ಟಿಸಲು ನೀನೆನ್ನ
ಬೆಲ್ಲವೇ ಬಂದಂತೆ ಇರುವೆಯತ್ತ.

ಜನುಮ ಜನುಮದ ಪ್ರೇಮ ಅಮರಪದರಸದಂತೆ
ಅನವರತ ಹೃದಯದೊಳು ಸುರಿವ ಹನಿಯು.
ಮನಸುಮವ ಅರ್ಪಿಸಿರೆ ಒಲವ ಅಂಜಲಿಯಲ್ಲಿ
ಕಣಕಣದ ಅನುಭಾವ ನಿನ್ನ ವರವು.