ಭಾನುವಾರ, ಮಾರ್ಚ್ 30, 2014

ಗತಿಯ ತೋರೊ ಮಾಧವ!

ಮಾತಿಗೊಂದು ಮಿತಿಯನಿರಿಸಿ
ಗತಿಯ ತೋರೊ ಮಾಧವ!
ಪ್ರೀತಿಯುಸಿರನೆದೆಯಲಿರಿಸಿ
ಮತಿಗೆ ಬಾರೊ ಕೇಶವ!
 
ಜಗದ ತುಂಬ ಪಾದ ಬೆಳೆಸಿ
ಸೊಗವನಿತ್ತ ದೇವನೆ!
ನಗುವಿನೊಳಗೆ ಮೆಲ್ಲ ಬಿರಿದು
ಮೊಗದ ಮಾತ ಕಾಯ್ವನೆ!
 
ಎಲ್ಲ ದಿಕ್ಕಿನೆಡೆಗೆ ಹರಹಿ
ಸೊಲ್ಲಿನರಿವ ಹಿಗ್ಗಿಸಿ
ಕಲ್ಲು, ಮಣ್ಣು, ಗಾಳಿಯಲ್ಲು
ನಿಲ್ಲುವಂತೆ ಬಾಗಿಸಿ
 
ಮೇಲಕೇರಿ ಹಾರದಂತೆ
ತಳದ ಅರಿವನುಬ್ಬಿಸಿ
ಕೆಳಕೆ ಬಾಗಿ ಬೀಳದಂತೆ
ಮೇಲಕೆನ್ನನೆಬ್ಬಿಸಿ
 
ನಿನ್ನ ಚರಣಕಮಲದಲ್ಲಿ
ಮನದ ಹರಿವ ನಿಲ್ಲಿಸಿ
ನನ್ನದೆಂಬುದೆಲ್ಲ ಮರೆಸಿ
ಜ್ಞಾನದೀಪ ಬೆಳಗಿಸಿ
 
ಡಿ.ನಂಜುಂಡ
30/03/2014
 
 

ಶುಕ್ರವಾರ, ಮಾರ್ಚ್ 28, 2014

ಹೂವಿದೆನ್ನಯ ನಲ್ಲೆಗೆ!

ನವವಸಂತದಲರಳಿ ನಿಂತಿಹು-
ದಾವುದೀ ನಗೆ ಮಲ್ಲಿಗೆ?
ಆವ ತಾರೆಯ ಛವಿಯ ತಂದಿದೆ?
ಭಾವಲತೆಗಳ ಗೆಲ್ಲಿಗೆ

ಮತ್ತಕೋಕಿಲರವದ ಕಲವದು
ಸುತ್ತಲೂ ಹರಿವಾಗಿರೆ;
ಬತ್ತದಿರುವಾ ಒಲವಿನೊರತೆಯು
ಸತತವೂ ಎದೆಯಲ್ಲಿರೆ;

ಮತ್ತೆ ಬಂದಿಹ ಯುಗಾದಿಗೆ
ಚಿತ್ತವಾರÀಮೆಯಾಗಿರೆ;
ನಿತ್ಯಸಂತಸವೀವ ಚೆಲುವಿನ
ನತ್ತಿನೈಸಿರಿಯಂತಿರೆ;

ಬೇವು ಬೆಲ್ಲವನರೆದ ಬದುಕಿನ
ಸವಿಯಲರಳಿಹ ಮಲ್ಲಿಗೆ!
ಕವಿಯ ಚೇತನಬಿಂಬದಂತಿಹ
ಹೂವಿದೆನ್ನಯ ನಲ್ಲೆಗೆ.

ಡಿ.ನಂಜುಂಡ

28/03/2014

ಶುಕ್ರವಾರ, ಮಾರ್ಚ್ 14, 2014

ಪದಸಂಚಲನದ ದನಿ ಕೇಳಿ!

ಚಂಚಲ ಮಮ ಮನದಂತರತಮಶಿವ-
ಪದಸಂಚಲನದ ದನಿ ಕೇಳಿ
ಚಿತ್ತಾರಣ್ಯದಿ ಕುಸುಮಿತ ವರ್ಣಕೆ
ಅರ್ಥಾರ್ಪಣ ಶುಭಸಮಯದಲಿ

ಭಾವನದೀಜಲಪಾತದಲಿ;
ಮಿಂದಿರೆ ಮತಿಸಂತುಷ್ಟಿಯಲಿ
ಪಂಚೇಂದ್ರಿಯತರುಪಲ್ಲವಶರಧರ-
ಕಾಮವಿಚೇಷ್ಟಿತ ಚೈತ್ರದಲಿ

ಸುಮಸೌರಭಹಿತ ಹೃದಯಾಂತರ್ಯದಿ
ಪ್ರಣವದ ಅನುಸಂಧಾನದಲಿ
ಅರ್ಥಾಲಿಂಗನದಾನಂದೋತ್ಸವ
ಪದಲಾಸ್ಯದ ಸಂಚರಣದಲಿ

ಶ್ರುತಿಸಂಮೋಹನನಾದವಿರೆ;
ನವವಸಂತದಗೀತವಿರೆ
ಅಕ್ಷರತಾಂಡವದುಪಸಂಹಾರಕೆ
ಲಯವಿನ್ಯಾಸದ ಮೋದವಿರೆ.

ಡಿ.ನಂಜುಂಡ
14/03/2014



ಭಾನುವಾರ, ಮಾರ್ಚ್ 9, 2014

ಬಾರೋ ಮದನನೆ!

ಹೃದಯೋದ್ಯಾನದಿ ಪದವಿಡು ಬಾರೋ
ಮದನನೆ! ಸುಮಮಧುವರ್ಧನನೆ!
ವದನವನರಳಿಸಿ ಮೋದವ ತಾರೋ
ಮಾಧವಸಮ ಸಂಮೋಹನನೆ!

ಭವ್ಯವಸಂತದ ಮನಸಂಕಾಶಕೆ
ಭಾವಾವರಣವನಣಿಗೊಳಿಸಿ
ಕವಿತಾಪದಸಂಚಾರಣಪಥವನು
ನವಸುಮಶರದಲಿ ಶೃಂಗರಿಸಿ

ಛಂದೋವೃಂದದಿ ಬಂಧಿತ 'ಜೀವ'
ಮಂದಿರಮೌನದೊಳನುರಣಿಸಿ
ಸುಂದರ ವೈಖರಿವಲ್ಲರಿಯಂದಕೆ
ಚಂದ್ರವಿಕಾಸದ ಗತಿಯಿರಿಸಿ

ಸಂತತಧಾರಾಚಿತ್ತದಿ ಬಾರೋ
ಚಿಂತಿತ ಮನಸಿನ ರಥವೇರಿ
ಆಂತರ್ಯದಿ ನೀ ಚೈತ್ರವ ತಾರೋ
ಅಂತರತಮಮೃದುಪದವೇರಿ

ಡಿ.ನಂಜುಂಡ

09/03/2014