ಮಂಗಳವಾರ, ಜನವರಿ 27, 2015

ಕಾಫಿ

ಬಿಸಿಬಿಸಿ ಕಾಫಿಯ ಹಬೆಯನು ಸ್ಪರ್ಶಿಸೆ
ತಲೆಬಿಸಿಯಾ ಕಾವಳಿಯುವುದು
ಮೇಲಧಿಕಾರಿಯ ದರ್ಪದ ಬಿರುಮೊಗ
ಕ್ಷಣಮಾತ್ರದಿ ಮರೆಯಾಗುವುದು

ಒತ್ತಡಗಳು ಬದಿ ಸರಿಯುವುವು
ಬತ್ತಿದ ಕಂಗಳು ಅರಳುವುವು
ತಲೆಗೂದಲುಗಳು ಒಗ್ಗೂಡುವುವು
ಇಂದ್ರಿಯಗಳು ಸಭೆ ಸೇರುವುವು

ಸಿಹಿಗೂಡಿದ ಕಹಿ ಕಾಫಿಯ ಹೀರುತ
ಬುರುಬುರಿಗಳ ತಾ ಕಡಿಯುತಿರೆ
ಸರಸರ ಪದಗಳು ಸರತಿಯ ಸಾಲಲಿ
ನಾಲಗೆ ಮೇಲ್ ಕುಣಿಕುಣಿಯುತಿರೆ

ನಾಳೆಯ ಚಿಂತೆಗಳೆಲ್ಲವು ಕೂಡಲೆ
ನೇಣಿನ ಕುಣಿಕೆಗೆ ಬೀಳುವುವು
ಸುಮ್ಮನೆ ಮನಸನು ಸುಟ್ಟಾ ತಪ್ಪಿಗೆ
ಆತ್ಮಾರ್ಪಣೆಯಲಿ ಕೊನೆಯಾಗುವುವು

ಕಾರ್ಗತ್ತಲ ತೆರ ಕೆಳಗಿಳಿದಿಹ ಗಸಿ
ಲೋಟದ ಬುಡದಲಿ ಒಗ್ಗೂಡೆ
ಹರಿ ಕುಳಿತಿಹ ಹೃತ್ಪದ್ಮದ ದಳಗಳು
ಕಾಫಿಯ ಪರಿಮಳದೊಡಗೂಡೆ

ಇಂದಿನ ಕೆಲಸವ ಇಂದೇ ಮಾಡುವೆ
ಎಂಬಾ ಶಪಥವು ಚಿಮ್ಮುವುದು
ಹೆಂಡತಿ ಮಕ್ಕಳು ಮಿತ್ರರು ಮುದುಕರು
ಎಲ್ಲರ ಮೇಲ್ ದಯೆಮೂಡುವುದು

ದೂರದ ದೃಷ್ಟಿಯು ಹೊಳೆಯುವುದು
ಮಾರ್ಗವು ಗೋಚರವಾಗುವುದು
ತುಸು ಸುಲಭದ ಹೊಸ ಪಥದಲಿ ಚಲಿಸಲು
ನಿರ್ಮಲ ಮನಸಣಿಯಾಗುವುದು
ಶುಭಮಂಗಳಕರವಾಗುವುದು.

ಡಿ.ನಂಜುಂಡ
27/01/2015




ಧ್ವನಿ

ಯಾವುದೋ ಕಲ್ಪನೆಗೆ ಕವಿಮನವು ಸಂಚಲಿಸಿ
ಉಲ್ಲಾಸಭಾವದಲಿ ಉಯ್ಯಾಲೆಯಾಡಿ
ವ್ಯೋಮಾದಿ ಮಧ್ಯಾಂತರಾಹಿತ್ಯ ಪರಿಪೂರ್ಣ-
ಪದಬಂಧಸಾಹಿತ್ಯದಾನಂದವೂಡಿ

ಅದ್ವೈತ ವಾಗರ್ಥಬೀಜಗಳನುಪಚರಿಸಿ
ಚಿತ್ತಭೂಮಿಯನಗೆದು ಅಲ್ಲಲ್ಲಿ ಬಿತ್ತಿ
ಸತ್ಸಂಗ ಸಾವಯವ ಸಾರಗಳನೈತಂದು
ನೇತ್ರಾದಿ ಕರಣಗಳ ಸೊಲ್ಲುಗಳನೊತ್ತಿ

ಅಸ್ತಿ ನಾಸ್ತಿಗಳೆಂಬ ಕಳೆಗಳೆಲ್ಲವ ಕಿತ್ತು
ಸದಸದ್ವಿವೇಕವಿಜ್ಞಾನತಂತ್ರದಲಿ
ಆಂತರ್ಯದಾಕಾಶವಿಸ್ತಾರಚೈತನ್ಯ-
ಕಣಸ್ಪರ್ಶದಾ ಝಣದ ಕುಣಿದಾಟದಲ್ಲಿ

ಕಾಮನಾ ಬಿಲ್ಲಂತೆ ವರ್ಣವೆಲ್ಲವು ಬಾಗಿ
ಸೃಷ್ಟಿಸೌಂದರ್ಯಕ್ಕೆ ತಾಗಿ ಧ್ವನಿಯಾಗಿ
ರವಿಯ ಸಾರಥಿಯಾಗಿ ಅರುಣ ತಾ ಬರುವಾಗ
ಬಾನಾಡಿಗಳ ಕೊರಳ ಸ್ವರಮೇಳವಾಗಿ
ತಾನನವೇ ತಾನಾಗಿ ಬಂತು ಹಾಡಾಗಿ.

ಡಿ.ನಂಜುಂಡ
27/01/2015



ಶನಿವಾರ, ಜನವರಿ 24, 2015

ಕುಂತೀಪ್ರಲಾಪ

ಕಂದನಂದವು ಮೊಗದ ಚೆಂದವು
ತಂದೆಯಂತಿದೆ ಎಂದರೆ?
ಒಂದು ದಿನದಲಿ ಹೇಗೆ ಬಂದನು
ಎಂದರಾಗದೆ ತೊಂದರೆ?

ಹೂವನಿಡದೇ ಫಲವ ಬಿಡುವುದೆ?
ಯಾವ ಬಳ್ಳಿಯದೆಂದರೆ?
ಭಾವವಿರದೇ ಕವಿತೆಯಿರುವುದೆ?
ಯಾವುದೀ ಬಗೆಯೆಂದರೆ?

ಏನ ಮಾಡಲಿ ಎತ್ತ ಪೋಗಲಿ
ಕಾಣದಾಗಿದೆ ಕಂದನೆ!
ಕ್ಷಣದಿ ವರವನು ಒರೆಗೆ ಹಚ್ಚಲು
ಮಾನವನ್ನೇ ತೆತ್ತೆನೆ?

ನನ್ನ ತಾಯ್ತನಕೇಕೆ ನಿಂದೆಯು
ಇನನ ಹೆತ್ತವರಾರದು?
ಮೌನದುದರದಿ ಮಾತು ಮೊಳೆಯದೇ?
ತಾನದಮ್ಮನದಾರದು?

ಹರಿಯ ಚರಣದ ಸತತಧಾರೆಯೆ
ಹರನ ಜಟೆಯೊಳ ಬಂಧಿಯೆ!
ಹರಿಯಬಿಡುವೆನು ನಿನ್ನ ಹರಿವಲಿ
ಹರಸಲಾರೆಯ ಗಂಗೆಯೆ!

ಕರುಳ ಕುಡಿಯನು ಮಡಿಲಿಗಿಡುವೆನು
ಪೊರೆಯಲಾರೆಯ ಪಾಪವ?
ಕರ್ಮಭಾರವ ಮೇಲೆ ತೇಲಿಸಿ
ತಣಿಸಲಾರೆಯ ತಾಪವ?

ಡಿ.ನಂಜುಂಡ
25/01/2015