ಇಡ್ಲಿಗಾದರೆ ಚಟ್ನಿ, ಸಾಂಬಾರು, ಸಾಗುಗಳು,
ಬಗೆಬಗೆಯ ಪಲ್ಯಗಳ ರುಚಿರುಚಿಯು ಏಕೆ?
‘ಉಪ್ಪಿಟ್ಟು’ ನಾನಾಗಿ ಬಹು ಉದರ ಸೇರಿದರೂ
ಒಂದಿನಿತು ಗೌರವವೂ ನನಗಿಲ್ಲವೇಕೆ?
“ಉಪ್ಪಿಟ್ಟು!” ಥೂ! ಎಂದು ಹೀಗಳೆಯುವವರೆಲ್ಲ
ಮರೆತಿಹರು ‘ಮಾನ’ವನು ಉಳಿಸಿದಾ ದಿನವ
ಎಂಟು ಜನ ದಂಡಾಗಿ ಬಂದಾಗ ಮಾಡುವರೆ
ಅವರ ನೆಚ್ಚಿನ ಇಡ್ಲಿ ಮತ್ತು ವ್ಯಂಜನವ?
ಬಡವಬಲ್ಲಿದರೆಂಬ ಭೇದವಿಹುದೇ ನನಗೆ
ಖಾಲಿಯಾಗದು ಎಂದೂ ರವೆಯ ಹಳೆ ಡಬ್ಬ
ಹೊತ್ತಿನರಿವಿಲ್ಲದಾ ಹತ್ತು ನೆಂಟರು ಬಂದು
ತಿಂದುಂಡು ತೇಗುತಿರೆ ಅಂದೆನಗೆ ಹಬ್ಬ
ಮದುವೆಯಾಗದ ಮಂದಿ ನೆಚ್ಚಿಹರು ನನ್ನನ್ನೇ
ತಿಳಿದುಕೋ ಮಾನವನೆ! ಉಪ್ಪಿಟ್ಟ ಮಹಿಮೆ
ಹೆಂಡತಿಯು ತವರಿನಲಿ ತಳವೂರಿ ಕುಳಿತಿರಲು
ಕಾಪಿಟ್ಟೆನಲ್ಲವೇ ಗಂಡನಾ ತಾಳ್ಮೆ
ಡಿ.ನಂಜುಂಡ
11/01/2015
ಅಸಲಿಗೆ ಉಪ್ಪಿಟ್ಟು ತುಸು ದುಬಾರಿ ನಾಸ್ಟಾ.
ಪ್ರತ್ಯುತ್ತರಅಳಿಸಿಹೇಗಂತಿರೋ, ತುಪ್ಪ, ಉಪ್ಪಿನ ಕಾಯಿ ಮತ್ತು ಸೌತೇಕಾಯಿ ನೆಂಜಿಕೊಳ್ಳಲು ಬೇಕಲ್ಲ!