ಶನಿವಾರ, ಜನವರಿ 3, 2015

ಭಾಷಣ

ಕಾರ್ಯಕ್ರಮಾಧ್ಯಕ್ಷಪೀಠದೊಳಗಾರೂಢ
ಆತ್ಮೀಯ ಸನ್ಮಿತ್ರ ಮಾನ್ಯ ಶಾಸಕರೆ!
ವೇದಿಕೆಯ ಮೇಲಿರುವ ಅತಿಥಿ ಅಭ್ಯಾಗತರೆ!
ನನ್ನ ನೆಚ್ಚಿನಾ ಬಂಧುಭಗಿನಿಯರೆ

ಒಂದೆರಡು ಮಾತುಗಳ ಆಡಿ ಮುಗಿಸುವೆನೀಗ
ಭಾಷಣದ ರೀತಿಯದು ತಿಳಿದಿಲ್ಲ ಎನಗೆ
ತಪ್ಪು ಒಪ್ಪುಗಳಿಗೆಲ್ಲ ಚಪ್ಪಾಳೆ ಹೊಡೆಯುವಾ
ನಿಮ್ಮಂಥ ಕೇಳುಗರು ವರದಂತೆ ನನಗೆ

ಅಮೆರಿಕಾ ದೇಶಕ್ಕೆ ಮೊನ್ನೆ ನಾ ಹೋಗಿದ್ದೆ
ಅಲ್ಲಿನಧ್ಯಕ್ಷರನು ಭೇಟಿಯಾಗಿದ್ದೆ
ಬಹುರಾಷ್ಟ್ರ ವ್ಯಾಪಾರದೊಪ್ಪಂದವೊಂದರಲಿ
ಶತಕೋಟಿ ಹೂಡಿಕೆಯನೊಳಗೆ ತಂದಿದ್ದೆ

ಅಭಿವೃದ್ಧಿ ಪರವಾದ ಮಂತ್ರಗಳನುಚ್ಚರಿಸಿ
ಪ್ರತಿಪಕ್ಷತಂತ್ರಗಳ ಮೆಟ್ಟಿ ನಿಂತಿರುವೆ
ಸಾಮಾನ್ಯ ಪ್ರಜೆಯೊಬ್ಬನಾ ಬವಣೆಗಳನರಿತು
ಹಗಲಿರುಳು ಎಡಬಿಡದೆ ಹೋರಾಡುತಿರುವೆ

ಶುದ್ಧ ಕುಡಿಯವ ನೀರ ಹಳ್ಳಿ ಹಳ್ಳಿಗೆ ಹರಿಸಿ
ಜನರ ಮೊಗದಲಿ ನಿತ್ಯ ನಗುವ ತಂದಿರುವೆ
ಮೂಟೆಮೂಟೆಗಳಷ್ಟು ಕಾಳುಗಳ ಕೊಟ್ಟಿರುವೆ
ಪ್ರತಿಯೊಬ್ಬ ಬಡವನಿಗೂ ಸೂರನಿತ್ತಿರುವೆ

ಇದುವರೆಗೆ ತಾಳ್ಮೆಯಲಿ ಕುಳಿತು ಕೇಳಿದ ನಿಮಗೆ
ನೂರೊಂದು ನಮನಗಳ ಮೊದಲು ಅರ್ಪಿಸುವೆ
ಮತ್ತೊಮ್ಮೆ ಎಲ್ಲರಿಗೂ ನಮನಗಳ ಸಲ್ಲಿಸುತ
ಮಾತುಗಳ ಮುಗಿಸುತಲಿ ಕೈಮುಗಿಯುತಿರುವೆ

ಡಿ.ನಂಜುಂಡ
03/01/2015
 


3 ಕಾಮೆಂಟ್‌ಗಳು:

  1. ಅರೆರೆ, ಇಂತಹ ಪದಾರ್ಥಗಳನ್ನೂ ಮಡಗಿಕೊಂಡು ಮಸಾಲೆ ರುಬ್ಬಬಹುದಂತ ಒಪ್ಪ ಮಾಡಿದರಲ್ಲ ಕವಿವರ್ಯ!

    ಪ್ರತ್ಯುತ್ತರಅಳಿಸಿ
  2. ಬಹಳ ಚೆನ್ನಾಗಿ ಕಟ್ಟಿದ್ದೀರಿ ಕವನವನ್ನು ,

    ಪ್ರತ್ಯುತ್ತರಅಳಿಸಿ
  3. ಸುಮ್ಮನೆ ತಮಾಷೆಗೆಂದು ಇಂತಹ ವಸ್ತುಗಳನ್ನು ಆಗಾಗ್ಗೆ ಆಯ್ಕೆ ಮಾಡಿಕೊಳ್ಳುತ್ತೇನೆ. ಇದರಲ್ಲಿ ಲಯಬದ್ಧತೆಯೇ ಹೊರತು ಕವಿತ್ವವೇನೂ ಇರುವುದಿಲ್ಲ. ನಿಮ್ಮ ಪ್ರೋತ್ಸಾಹಕರ ನುಡಿಗಳಿಗೆ ಧನ್ಯವಾದಗಳು. Badarinath Palavalli and mugdasinchana

    ಪ್ರತ್ಯುತ್ತರಅಳಿಸಿ