ಬುಧವಾರ, ಜನವರಿ 14, 2015

ಸಂಭ್ರಮಿಸು

ಬಿತ್ತರದ ಆಗಸದಿ ಕತ್ತಲೆಯ ತಾ ಕಳೆದು
ಬತ್ತದುತ್ಸಾಹದಲಿ ಸಂಚರಿಸೆ ರವಿಯು
ನಿತ್ಯ ಋತುಪರ್ವಗಳ ಉಲ್ಲಾಸರಸದಲ್ಲಿ
ಉತ್ತರಕೆ ಪದವಿರಿಸಿ ಹಾಡಿದನು ಕವಿಯು

ಎಳ್ಳು ಬೆಲ್ಲವ ತಿಂದು ಒಳ್ಳೆಯಾ ಮಾತಾಡು
ಬಲ್ಲವರ ಸೂಳ್ನುಡಿಗಳನು ಸಂಕಲಿಸು
ಹಲ್ಲುಗಳ ನಡುವಿರಿಸಿ ಕಬ್ಬ ಮೆಲ್ಲುತ ಸಾಗು
ಗೆಲ್ಲುಗಳ ಸಂಕ್ರಮಿಸಿ ಸಂಭ್ರಮಿಸಿ ಸುಖಿಸು

ಅಣುವಣುವು ಕ್ಷಣವೆಣಿಪ ತಾಳಕ್ಕೆ ಝಣಝಣಿಸೆ
ಮನಕೆ ಸಂತಸವೀವ ಭಾವವನು ಹರಿಸು
ಮೌನಘನಚೇತನದ ಕಣದಿ ನುಡಿಗಳನೊಕ್ಕಿ
ಅನವರತ ಕುಣಿಕುಣಿದು ಸುಗ್ಗಿಯಾಚರಿಸು

ಡಿ.ನಂಜುಂಡ

15/01/2015

4 ಕಾಮೆಂಟ್‌ಗಳು:

 1. ತಮಗೂ ಸಂಕ್ರಾಂತಿ ಶುಭಾಶಯಗಳು ಕವಿವರ್ಯ.
  ಅಲಾಲಾ ಏನೀ ನಿಮ್ಮ ಪದ ಕಟ್ಟುವ ಚಾತುರ್ಯ!
  'ಅಣುವಣುವು ಕ್ಷಣವೆಣಿಪ ತಾಳಕ್ಕೆ ಝಣಝಣಿಸೆ'

  ಪ್ರತ್ಯುತ್ತರಅಳಿಸಿ
 2. ನಮಸ್ಕಾರ ಗುರುಗಳಿಗೆ , ವಾಹ್ ಎಂಥಹ ಕವಿತೆ , ನಿಮಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು . ಸುಮಾರು ೧೦ ವರ್ಷಗಳ ನಂತರ ನಿಮ್ಮನ್ನ ಈ ಬ್ಲಾಗ್ ನಲ್ಲಿ ನೋಡಿ ಬಹಳ ಖುಷಿ ಆಯಿತು . ನಿಮ್ಮ ವಾಕ್ಚಾತುರ್ಯವನ್ನು , ಕವಿತೆಗಳ ಮೂಲಕ ಮತ್ತೊಮ್ಮೆ ಓದುವ ಅವಕಾಶ ಸಿಕ್ಕಿದ್ದಕ್ಕೆ ಬಹಳ ಸಂತಸವಾಗುತ್ತಿದೆ . ನನ್ನ ಹೆಸರು ಸವಿತಾ . ನಿಟ್ಟೂರಿನ ಕಾಲೇಜಿನಲ್ಲಿ ನಿಮ್ಮ ವಿದ್ಯಾರ್ಥಿಯಾಗಿದ್ದೆ. ಹೀಗೆ ಬರೆಯುತ್ತಿರಿ . ಓದಿ ಖುಷಿ ಪಡುವ ಭಾಗ್ಯ ನಮ್ಮದಾಗಲಿ .

  ಪ್ರತ್ಯುತ್ತರಅಳಿಸಿ
 3. ಸವಿತಾ. ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ