ಭಾನುವಾರ, ಜೂನ್ 29, 2014

ಆಟ-ಪಾಠ

ಅಂಗಳಕಿಳಿದು ಆಡುತಲಿದ್ದರು
ಬಾಲಕರೆಲ್ಲರು ಒಂದಾಗಿ
ನೋಡುವ ಮನಗಳು ಆಗಸವೇರಿ
ತೇಲುತಲಿದ್ದವು ಹಗುರಾಗಿ

ಗೋಣಿಯ ದಾರವ ಬುಗುರಿಗೆ ಸುತ್ತಿ
ತಿರುಗಿಸಿ ಬಿಡುತಿರೆ ಜೋರಾಗಿ
ಎದೆಯೊಳಗವಿತಿಹ ನೋವುಗಳೆಲ್ಲವು
ಹೊರಕ್ಕೆ ಬಂದವು ಸುಖವಾಗಿ

ಐದಾರುಂಡಾ.. ಅರಪತಿಗಾಜ...
ಏಳಂಬೇಳೆ... ಎಂಟ್ ಮನೆ ಶುಂಠಿ...
ಒಂಬೈಗೋಲ... ತೇದಿಕು ತೇಲ..
ಎನ್ನುತ ಗೋಲಿಯನಾಡುತಿರೆ

ಲಾಭವ ಚಿಂತಿಪ ಲೋಭಿಗಳೆಲ್ಲರ
ಲೆಕ್ಕಗಳೆಲ್ಲವು ಮರೆಯಾಗಿ
ಆಟದ ಗೋಲಿಗಳೊಂದಿಗೆ ಬೆರೆತವು
ಓಟಕೆ ಸಹಪಾಠಿಗಳಾಗಿ

ಎಲ್ಲಾ ಮಕ್ಕಳು ನಲಿಯುತಲಾಡೆ
ಮನೆಯಂಗಳದಲಿ ಒಗ್ಗೂಡಿ
ದೊಡ್ಡವರೆಲ್ಲರು ಜಗಲಿಯನೇರಿ
ಕಲಿಯುತಲಿರಲಾಟವ ನೋಡಿ

ಹಾರುವ ಆಟ ಓಡುವ ಆಟ
ಪೇರಲೆ ಮರವನು ಏರುವ ಆಟ
ಕೂರುವ ಆಟ ನಿಲ್ಲುವ ಆಟ
ಸಾರಲಿ ಜೀವನ ಕಲೆಯಾಟ.

ಡಿ.ನಂಜುಂಡ
29/06/2014


ಸೋಮವಾರ, ಜೂನ್ 23, 2014

ಮಗುವಿನ ನಗುವೇ ಶಿವನಾ ನಗುವು!

ಮಗುವಿನ ನಗುವೇ ಶಿವನಾ ನಗುವು
ಜಗದೊಡೆಯನ ಎದೆಯಾ ಹೂವು
ನೆಗೆದಾಡುವ ತನು ನಲಿದಾಡುವ ಮನ
ಚಿಗರೆಯ ಕಣ್ಣೋಟದ ಚೆಲುವು

ಮಗುವಿನ ಅಳುವೇ ಪರಶಿವನಳುವು
ಜಗದುದಯದ ಹಬ್ಬದ ನಲವು
ಬಾಗಿದ ಬಣ್ಣಗಳೇಳರ ಹೊಳಹು
ಬಗೆಬಗೆ ಕಣ್ ಕುಣಿತದ ಸೆಳವು

ತೊದಲುಲಿಗಳು ಮೊದಲುದಿಸಿಹ ದೇವನ
ಮೋದಾಮೋದದ ಸರಿಗಮವು
ಮುದವೀಯುವ ಪದಗೂಡಿದ ಪದ್ಯವು
ಅದು ನಗೆಗಡಲಿನ ಉಬ್ಬರವು

ಭಾವಗಳರಳಿಹ ಮಗುವಿನ ಮನಸದು
ಸಾವಿರದೆಸಳುಗಳಾ ಹೂವು
ಭವದೊಳಗವತರಿಸಿಹ ಪರಮಾತ್ಮನು
ಪವಡಿಸುತಿಹ ಸುಖದಾಸನವು
ಡಿ.ನಂಜುಂಡ
23/06/2014


ಶನಿವಾರ, ಜೂನ್ 14, 2014

ಸಲಹಲೆಮ್ಮ ಬನಗಳು

ಉಸಿರುಸಿರಲಿ ನುಸುಳುತಿರಲಿ
ಹಸಿರೆಲೆಗಳ ಹೊಸತನ
ನಸುನಗುಗಳ ಸುಮವರಳಿಸಿ
ಬೆಸೆಯುತಿರಲಿ ಗೆಳೆತನ

ಬನಬನದಲಿ ಮಧುಕರಗಳು
ಪ್ರಣವನಾದಗೈಯಲಿ
ವನಕವಿಗಳು ಸಭೆಸೇರಲಿ
ಇನಿದನಿಯಲಿ ಹಾಡಲಿ

ಜಲಧಿಯೊಲವು ಮೇಲಕೇರಿ
ಸಾಲುಗಟ್ಟಿ ನಿಲ್ಲಲಿ
ನೀಲ ಬಾನಿನಂಗಳದಲಿ
ಕಲೆಯ ಬಣ್ಣವೂಡಲಿ

ಮಳೆಸುರಿಯಲಿ ಹೊಳೆ ಹರಿಯಲಿ
ಹೊಲಗಳು ತೆನೆಗೂಡಲಿ
ಇಳೆಯಾಳದಲಿಳಿದ ಜಲವು
ಬೆಳೆಯ ಬೇರಿಗೇರಲಿ

ಕಲೆಯರಳಿಸಿ ಕಣ್ತುಂಬಲಿ
ಸಲಹುತಿರಲಿ ಬನಗಳು
ನಲಿವರಳಲಿ ನೋವಡಗಲಿ
ಬಲತುಂಬಲಿ ಬಾಳೊಳು

ಡಿ.ನಂಜುಂಡ
15/06/2014



ಕತ್ತಲೆಯ ಕಳೆವ ಕಾಗೆ!

ಎಲೆ ಕರಿಯ ಕಾಗೆ! ಕರಮುಗಿವೆ ನಿನಗೆ
ಅರಿವೊಂದ ನೀಡು ಬಾ ಎನಗೆ
ಕತ್ತಲೆಯ ಹೀರಿ ಬೆಳಕ ಬಳಿ ಕರೆದು
ಮಲಗಿದವನೆಬ್ಬಿಸುವ ಹಾಗೆ

ಎದೆಯೊಳಗೆ ಹಬ್ಬಿ ತನುಮನವ ತಬ್ಬಿ
ಮೆರೆಯುತಿರೆ ನಿದಿರೆಯಾ ತಮವು
‘ಕಾ’ಯೆಂದು ಕೂಗಿ ಎಚ್ಚರಿಸಿ ನನ್ನ
ತೋರುತಿರೆ ಹಗಲ-ನೀನೆ ಗುರುವು

ಒಲೆಯ ಮೇಲೆಸರ ಗಡಿಗೆಯನು ಇರಿಸಿ
ಬಾಗುತಿರೆ ನನ್ನೊಳಗ ಬುದ್ಧಿ
ಮನೆಯ ಮೇಲೆರಗಿ ನೆಂಟರನು ಕರೆದು
ತಿಳಿಸುತಿಹೆ ಬರುವಿಕೆಯ ಸುದ್ದಿ

ನೀನಿರದ ಊರ ಹೆಸರೊಂದ ಹೇಳು
ಇದ್ದರದೆ ಬುವಿಗಿಳಿದ ನರಕ
ಪರಿಸರದ ಮಲಿನವೆಲ್ಲವನು ಕಳೆವ
ನೀನಿರಲು ಅದೆ ನಮಗೆ ನಾಕ


ನಿನ್ನೊಳಗ ಭಾವಪೂರ್ಣತೆಯ ದನಿಯು
ಎನ್ನದೆಯ ಸೋಕೆ ನಾ ಧನ್ಯ
ನೀನಿತ್ತ ವರಕೆ ವರ್ಣಗಳು ಚಲಿಸೆ
ನಾನೊಬ್ಬ ಸರ್ವಸಾಮಾನ್ಯ

ಡಿ.ನಂಜುಂಡ
14/06/2014


ಗುರುವಾರ, ಜೂನ್ 12, 2014

ಚಿತ್ರಾನ್ನ! ಚಿತ್ರಾನ್ನ!

ಬೇಯಿಸಿರನ್ನವನುದುರುದುರಾಗಿ
ತಟ್ಟೆಯೊಳದ ಸುರಿದಾರಿಸಿರಿ
ಉಳ್ಳಾಗೆಡ್ಡೆಯ ಸಣ್ಣಗೆ ಹೆಚ್ಚಿರಿ
ಹಸಿಮೆಣಸೆರಡನು ಕತ್ತರಿಸಿ

ಬಾಣಲೆಯಲ್ಲಿ ಎಣ್ಣೆಯ ಕಾಯಿಸಿ
ಸಾಸಿವೆ ಕಾಳನು ಚಟಪಟಿಸಿ
ಕಡಲೇಬೇಳೆಗಳನದರಲಿ ಹುರಿಯಿರಿ
ಸೀಳಿದ ಮೆಣಸನು ಹೊಟ್ಟಿಸಿರಿ

ಉಳ್ಳಾಗಡ್ಡಿಯ ಕೂಡಲೆ ಸುರಿಯಿರಿ
ಅರಿಶಿನ ಪುಡಿಯನು ಉದುರಿಸಿರಿ
ನೆರೆಹೊರೆಯವರಾ ಮೂಗಿನ ಹೊಳ್ಳೆಯು
ಅರಳುವವರೆಗೂ ಹುರಿಯುತಿರಿ

ಉಪ್ಪಿಗೆ ಬೆರೆಸಿದ ಲಿಂಬೆಯ ರಸವನು
ಬೆಲ್ಲದ ಜೊತೆಯಲಿ ಸೇರಿಸಿರಿ
ತೆಂಗಿನಕಾಯಿಯ ತುರಿಯನು ಬೆರೆಸಿರಿ
ಬೇವಿನ ಎಸಳನು ಮರೆಯದಿರಿ

ಆರಿದ ಅನ್ನವ ಬಾಣಲೆಯೊಳಗಡೆ
ಸುರಿಯುತ ಸೌಟಲಿ ತಿರುಗಿಸಿರಿ
ಮೇಲಕೆ ತನ್ನಿರಿ, ಕೆಳಕ್ಕೆ ತಳ್ಳಿರಿ
ಅನ್ನವನೆಲ್ಲವ ಮಗುಚುತಿರಿ

ಎಲ್ಲಾ ಅಗುಳೂ ಅರಿಶಿನವಾಗಲು
ಕರೆಯುವರದನು ಚಿತ್ರಾನ್ನ
ಬಿಸಿಬಿಸಿ ಶುಚಿರುಚಿಯುಪಹಾರವದು
ಆಗಲಿ ಎಲ್ಲರ ನಿತ್ಯಾನ್ನ

ಡಿ.ನಂಜುಂಡ
12/06/2014