ಶುಕ್ರವಾರ, ಜೂನ್ 6, 2014

ಶೂನ್ಯಸಂಕಲನ!

ನಾನು ನನ್ನದು ಎಂಬ ಮನದ ನಂಬಿಕೆಯೆಲ್ಲ
ಚಣದೊಳೊಡೆಯುವ ನೀರ ಗುಳ್ಳೆಯಂತೆ
ಮೌನಜಲಧಿಯ ಮೇಲೆ ಗಾನದಲೆಯಲಿ ತೇಲಿ
ಕಾಣೆಯಾಗುವ ಎದೆಯ ಭಾವದಂತೆ

ಮತಿಯು ಮಥಿಸಿದ ಮಾತ ಬೆಣ್ಣೆಯದು ಘೃತವಾಗಿ
ಹುತಹವಿಯ ಘಮವಾಗೆ ತತ್ತ್ವದಂತೆ
ನತಮನದ ಗತಿಯಲ್ಲಿ ಚಲಿಸುತಿಹ ಭಾವಗಳು
ಹಿತಮಿತಾಕ್ಷರವಾಗೆ ವೇದದಂತೆ 

ಅಂಗಾಂಗಸಂಘಟಿತ ತನುಮನಕೆ ಅಂಟಿರುವ
ಸಂಗಮೋಹಗಳೆಲ್ಲ ಕರ್ಮದಂತೆ
ಶೃಂಗಾರರಸಭಾರಕಲ್ಪನೆಯ ಕನಸುಗಳು
ರಂಗಮಂಚದಿ ಕುಣಿವ ಪಾತ್ರದಂತೆ

ಶೂನ್ಯಗಳ ಸಂಕಲಿಸೆ ಶೂನ್ಯವೇ ಉಳಿಯುವುದು
ಅನ್ಯವೆಲ್ಲವು ಅಳಿವ ಘಳಿಗೆಯಂತೆ
ಗಣ್ಯವೆಲ್ಲವು ಜಗದ ಗುಣರಹಿತಚೇತನದ
ಶೂನ್ಯದರ್ಪಣದೊಳಗ ಬಿಂಬದಂತೆ

ಡಿ.ನಂಜುಂಡ
06/06/2014


2 ಕಾಮೆಂಟ್‌ಗಳು: