ಬುಧವಾರ, ಜೂನ್ 11, 2014

ಹೇ ದೇವ! ಜಗದಾತ್ಮ!

ಹೇ ದೇವ! ಜಗದಾತ್ಮ! ಚಿದಾನಂದರೂಪ!
ಹೃತ್ಕಮಲದಲವಾಸ! ದಿವ್ಯಸ್ವÀರೂಪ!
ಭಾವನಾಗಮ್ಯ! ಹೇ ಸುಜ್ಞಾನಸಂದೀಪ!
ವೇದಾಂತಸಂಗೋಪ! ವಿರಾಡ್ರೂಪ!

ಅವತರಿಸು, ಷಡ್ವರ್ಗಶತ್ರುಗಳ ಸಂಹರಿಸು,
ನಾಮರೂಪದಿ ಮೆರೆವ ತನುಭಾವವಳಿಸು
ಭೂವ್ಯೋಮರವಿಚಂದ್ರತಾರಾಸಮೂಹಗಳ
ಶಕ್ತಿಗಳನೈತಂದು ಮನವ ಸಂಘಟಿಸು

ಬಹುಜನ್ಮಸಂಸಿದ್ಧಯೋಗಬೀಜಾಂಕುರವ
ನಿರ್ಲಿಪ್ತಭಾವಜಲಸಿಂಚನದಿ ಬೆಳೆಸು
ಅನುಭಾವಫಲದೊಳಗೆ ಆನಂದರಸವಿರಿಸಿ
ಕಾಲಾನುಗತಿಯಲ್ಲಿ ಪರಿಪಕ್ವಗೊಳಿಸು

ಸಂಸಾರಬಂಧದೊಳು ಸಂಸ್ಕಾರಗಳನಿರಿಸು
ನಿತ್ಯವೂ ಕರಣಗಳ ಕಾಷಾಯಗೊಳಿಸು
ಸತ್ಸಂಗಹೋಮಾಗ್ನಿವೇದಿಯನು ಸಂರಚಿಸಿ
ಕರ್ಮಫಲದಾಹುತಿಯ ಸಂಪೂರ್ಣಗೊಳಿಸು.

ಡಿ.ನಂಜುಂಡ
11/06/2014



2 ಕಾಮೆಂಟ್‌ಗಳು: