ಗುರುವಾರ, ಜೂನ್ 12, 2014

ಚಿತ್ರಾನ್ನ! ಚಿತ್ರಾನ್ನ!

ಬೇಯಿಸಿರನ್ನವನುದುರುದುರಾಗಿ
ತಟ್ಟೆಯೊಳದ ಸುರಿದಾರಿಸಿರಿ
ಉಳ್ಳಾಗೆಡ್ಡೆಯ ಸಣ್ಣಗೆ ಹೆಚ್ಚಿರಿ
ಹಸಿಮೆಣಸೆರಡನು ಕತ್ತರಿಸಿ

ಬಾಣಲೆಯಲ್ಲಿ ಎಣ್ಣೆಯ ಕಾಯಿಸಿ
ಸಾಸಿವೆ ಕಾಳನು ಚಟಪಟಿಸಿ
ಕಡಲೇಬೇಳೆಗಳನದರಲಿ ಹುರಿಯಿರಿ
ಸೀಳಿದ ಮೆಣಸನು ಹೊಟ್ಟಿಸಿರಿ

ಉಳ್ಳಾಗಡ್ಡಿಯ ಕೂಡಲೆ ಸುರಿಯಿರಿ
ಅರಿಶಿನ ಪುಡಿಯನು ಉದುರಿಸಿರಿ
ನೆರೆಹೊರೆಯವರಾ ಮೂಗಿನ ಹೊಳ್ಳೆಯು
ಅರಳುವವರೆಗೂ ಹುರಿಯುತಿರಿ

ಉಪ್ಪಿಗೆ ಬೆರೆಸಿದ ಲಿಂಬೆಯ ರಸವನು
ಬೆಲ್ಲದ ಜೊತೆಯಲಿ ಸೇರಿಸಿರಿ
ತೆಂಗಿನಕಾಯಿಯ ತುರಿಯನು ಬೆರೆಸಿರಿ
ಬೇವಿನ ಎಸಳನು ಮರೆಯದಿರಿ

ಆರಿದ ಅನ್ನವ ಬಾಣಲೆಯೊಳಗಡೆ
ಸುರಿಯುತ ಸೌಟಲಿ ತಿರುಗಿಸಿರಿ
ಮೇಲಕೆ ತನ್ನಿರಿ, ಕೆಳಕ್ಕೆ ತಳ್ಳಿರಿ
ಅನ್ನವನೆಲ್ಲವ ಮಗುಚುತಿರಿ

ಎಲ್ಲಾ ಅಗುಳೂ ಅರಿಶಿನವಾಗಲು
ಕರೆಯುವರದನು ಚಿತ್ರಾನ್ನ
ಬಿಸಿಬಿಸಿ ಶುಚಿರುಚಿಯುಪಹಾರವದು
ಆಗಲಿ ಎಲ್ಲರ ನಿತ್ಯಾನ್ನ

ಡಿ.ನಂಜುಂಡ
12/06/2014





2 ಕಾಮೆಂಟ್‌ಗಳು: