ಶುಕ್ರವಾರ, ಫೆಬ್ರವರಿ 22, 2013

ಶಂಕರಿಯ ಬನವು ಸುಂದರ!


ಏನು   ಸುಂದರ!..ಆಹಾ! ಅದೆಂಥ ಮಂದಿರ…!
ಶಂಕರಿಯ ಬನವಿದುವೆ.. ಭುವನಸುಂದರ!
ಹಸಿರೆಲೆಗಳ ಸೀರೆಯ ಸೊಬಗು ಸುಂದರ.
ತೊರೆತೊರೆಗಳ ಹರಿವಿನ ಆ ರವದ ಇಂಚರ.
ಸುಮಗಳ ಪರಿಮಳ… ಬಳ್ಳಿಗಳಾ ಹಂದರ..
ಎಲೆಗಳಾ ಮೆದು ಹಾಸಿರಲು
ಬಾಗಿದೆ ಬಾನಲಿ ಬೆಳದಿಂಗಳ ಚಂದಿರ
ಶಂಕರನ ಸೆಳೆದಿರಲು..
ಬನಶಂಕರಿಯು ಬಂಧುರ…ಬಲು ಸುಂದರ
ಬನಬನವೂ ಸೊಬಗ ಮಂದಿರ.

ಬುಧವಾರ, ಫೆಬ್ರವರಿ 20, 2013

ಅರ್ಥತತ್ತ್ವ-ತತ್ತ್ವಾರ್ಥ!


ಅರ್ಥತತ್ತ್ವ-ತತ್ತ್ವಾರ್ಥ!
*****************
ಬಯಕೆಗಾಗಿ ದುಡಿಮೆ ಮಾಡಿ,
ತೃಪ್ತಿಯನ್ನು ಹೊಂದಬೇಕು,
ಭೋಗದಿಂದ ಬದುಕು- ಇದುವೆ
ಅರ್ಥಶಾಸ್ತ್ರದ ತತ್ತ್ವವು.

ಬಯಕೆಗಳಿಗೆ ಮಿತಿಯುಬೇಕು,
ಸರಳ ಬಾಳು ಬಾಳಬೇಕು,
ಮಿತವೆ ಹಿತದ ಬದುಕು-ಇದುವೆ
ತತ್ತ್ವಶಾಸ್ತ್ರದ ಅರ್ಥವು.

ಷೇರುಗಳನು ಕೊಳ್ಳಬೇಕು,
ಲಾಭವನ್ನು ಮಾಡಬೇಕು,
ಕೊಳ್ಳುಬಾಕನಾಗು-ಇದುವೆ
ಅರ್ಥಶಾಸ್ತ್ರದ ತತ್ತ್ವವು.

ಮೋಸವಿರದ ಗಳಿಕೆ ಬೇಕು
ದಾನಧರ್ಮ ಮಾಡಬೇಕು
ಸಮತೆಯಿಂದ ಬಾಳು-ಇದುವೆ
ತತ್ತ್ವಶಾಸ್ತ್ರದ ಅರ್ಥವು.

ತತ್ತ್ವಶಾಸ್ತ್ರದರ್ಥವನ್ನು
ಅರ್ಥಶಾಸ್ತ್ರ ಕಾಣಬೇಕು.
ಅರ್ಥಶಾಸ್ತ್ರ-ತತ್ತ್ವಗಳಿಗೆ
ತತ್ತ್ವಶಾಸ್ತ್ರದ ನೆರಳು ಬೇಕು.



ಭಾವವಸಂತ



ಭಾವವಸಂತ
************
ಭಾವವಸಂತದ ನಾದೋತ್ಸವಕೆ
ಮೊಳಗಿದೆ ಹೃದಯದಿ ಓಂಕಾರ.
ರಾಗಾಲಾಪದ ಲಾಸ್ಯವಿಲಾಸಕೆ
ಮೊಳೆತಿದೆ ಮನಸಲಿ ಸಂಸ್ಕಾರ.

ಒಲವಿನ ಹಸಿರೆಲೆ ಕುಡಿಕುಡಿಯಲ್ಲೂ
ನಾದತರಂಗದ ಸಂಚಾರ.
ಸ್ವರದೇರಿಳಿತದ ಅಲೆ ಅಲೆಯಲ್ಲೂ
ನವವಿಧರಸಗಳ ಸಂಭಾರ.

ಮೊಗದಾ ನಗುವಿನ ಕುಸುಮದ ಬಣ್ಣಕೆ
ನಯನವೆ ಚೆಲುವಿನ ಚಿತ್ತಾರ.
ಕುಸುಮದ ಅಧರದ ಮಧುವನು ಸವಿಯಲು
ಚಿತ್ತಭ್ರಮರದ ಝೇಂಕಾರ.

ಕೊರಳಲಿ ಕೋಗಿಲೆ ಹಾಡಿದೆ ರಾಗದಿ
ಬೆರೆತಾ ರಸವೇ ಶೃಂಗಾರ.
ಒಲವಿನ ಕಾವಿನ ಉಸಿರಾ ಬಿಸಿಯಲಿ
ಮೊಗದಾ ಬಣ್ಣವು ಅಂಗಾರ.

ಕಾವ್ಯೋತ್ಸವದ ನವ ಉಲ್ಲಾಸಕೆ
ಕಣಕಣದಲ್ಲೂ  ಹೂಂಕಾರ.
ವಿಧವಿಧ ರಸಗಳ ಕವಿತೆಯ ಉದಯಕೆ
ಬೀಜಾಕ್ಷರವೇ  ಶ್ರೀಕಾರ.


ಮಂಗಳವಾರ, ಫೆಬ್ರವರಿ 19, 2013

ದೇವರ ಪೂಜೆ



ಮನಸಿನ ಅಲೆಯಲಿ ತೇಲುತ ದೋಣಿಯು
ಚಂಚಲವಿಲ್ಲದೆ ಚಲಿಸುತಿದೆ.
ದೇವರ ಇರವನು ಅರಿಯಲು ಹೊರಟಿಹ
ದೋಣಿಯು ತೀರವ ಸೇರುತಿದೆ.

ಅರಿವೇ ಸಾಗರ ಅರಿವೇ ತೀರವು
ಹೃದಯವೆ ದೇವನ ಆಸನವು.
ಮಂದಸ್ಮಿತದಾ ಚಲುವಿನ ದೇವಗೆ
ನಮಿಸಲು ನನಗಿದೆ ಕಾತರವು.

ಹೃದಯದ ಮಧ್ಯದಿ ಕುಳಿತಿಹ ದೇವನು
ಕರುಣದಿ ದರುಶನ ನೀಡಿಹನು.
ಅಂತರ್ಮೌನದಿ ಪ್ರಾರ್ಥನೆ ಸಲ್ಲಿಸಿ
ಹರುಷದಿ ಪೂಜೆಯ ಮಾಡಿಹೆನು.

ಶ್ರದ್ಧಾನದಿಯಲೆ ಪುಣ್ಯದ ಸ್ನಾನವು
ನಿರ್ಮಲ ಚಿತ್ತವೆ ಶುಭಜಲವು.
ಶ್ರಮದಾ ಬೆವರೇ ಧೂಪದ ಪರಿಮಳ
ದೇವನ ಪೂಜೆಯ ಪರಿಕರವು.

ಕಂಗಳ ಕಾಂತಿಯೆ ಮಂಗಳದಾರತಿ
ತಿಂದಾ ಅನ್ನವೆ ಅರ್ಪಿತವು.
ತಿಂಗಳ ಹುಣ್ಣಿಮೆ ಮಾನಸ ಪೂಜೆಗೆ
ಅಂತಃಕರಣದ  ಅತಿರಸವು.

ಅನುದಿನ ಮೊಗದಲಿ ಅರಳುವ ನಗುವೇ
ಸವಿನಯ ಸುಮಗಳ ಅಂಜಲಿಯು.
ದೇವನ ನಗುವೇ ಮೊಗದಾ ನಗುವದು
ಕನ್ನಡಿಯೊಳಗಿನ ಕನ್ನಡಿಯು.

ಆಡಿದ ನುಡಿಗಳೆ ಪೂಜಾಮಂತ್ರವು
ಶಾಂತಿಯ ಕ್ರಾಂತಿಗೆ ಕಾರಣವು.
ಆಡಿದ ಆಟವೆ ಪೂಜಾತಂತ್ರವು
ಜೀವನ ಪಾವನನಂದನವು.

ಸೋಮವಾರ, ಫೆಬ್ರವರಿ 18, 2013

ಗೋಪುರ ಕಟ್ಟಿ ಗುಡಿಸಲ ಕೆಡವುವರು!




ಗೋಪುರ ಕಟ್ಟಿ ಗುಡಿಸಲ ಕೆಡವುವರು!
************************
ಇಲ್ಲದ ದೇವರ ಕಲ್ಲಿನ ಪೂಜೆಗೆ
ಬಗೆಬಗೆ ರಸಗಳ ಅಡುಗೆಯಿದೆ.
ಗುಡಿಸಲ ಜೀವಿಯ ತೀರದ ಹಸಿವಿಗೆ
ನಿನ್ನೆಯ ಹಳಸಿದ ತಂಗಳಿದೆ.

ಕಲ್ಲಿನ ಪೂಜೆಯ ಸ್ನಾನದ ನೀರಿಗೆ
ಪರಿಮಳ ದ್ರವ್ಯವ ಬೆರೆಸುವರು.
ಬಡವನ ದೇಹವ ಶುಚಿಯನು ಮಾಡಲು
ನೀರಿಗೆ ಸಗಣಿಯ ಬೆರೆಸುವರು.

ದೇವರ ಹುಂಡಿಗೆ ಹಾಕಿದ ಧನವದು
ದಕ್ಷಿಣೆ ಹೆಸರನು ಗಳಿಸುವುದು.
ಬಡವನ ಮಡಿಲಿಗೆ ಎಸೆದಾ ಕಾಸದು
ಭಿಕ್ಷೆಯ ರೂಪವ ಪಡೆಯುವುದು.

ದೇವರ ಬೆಳಗಲು ಬೆಳ್ಳಿಯ ಆರತಿ,
ತುಪ್ಪದಿ ಬತ್ತಿಯ ಹೊಸೆಯುವರು.
ಗುಡಿಸಲ ಕತ್ತಲೆ ಕಳೆಯುವ ಎಣ್ಣೆಗೆ
ಪಡಿತರ ಚೀಟಿಯ ಕೇಳುವರು.

ಕಲ್ಲಿನ ದೇವಗೆ ಪೀತಾಂಬರವಿದೆ,
ಚಿನ್ನದ ಮಕುಟವು ಹೊಳೆಯುತಿದೆ.
ಬಡವನ ದೇಹದ ಮಾನವ ಮುಚ್ಚಲು
ಹರಕಲು ಬಟ್ಟೆಗು ಕೊರತೆಯಿದೆ.

ಬಡವನ ಆಶ್ರಯ ಅಕ್ರಮವೆನ್ನುತ
ಕೂಡಲೆ ಗುಡಿಸಲ ಕೆಡವುವರು.
ಬಡವನ  ಶ್ರಮದಾ ಬೆವರಿನ ಹಣದಲಿ
ದೇವಗೆ ಗೋಪುರ ಕಟ್ಟುವರು.

ಶನಿವಾರ, ಫೆಬ್ರವರಿ 16, 2013

ಭಾವಕೋಕಿಲಗಾನ



ವೇದನಾದದ ರಾಗದೊಲವಿದೆ
ಭಾವಕೋಕಿಲಗಾನಕೆ.
ಮಾವುಬೇವಿನ ರಸದ ಒಲವಿದೆ
ಕಾವುದೇತಕೆ ತಾನಕೆ?

ಮಂದ ಉಸಿರಿಗೆ ಗಂಧ ತೀಡಿದೆ
ಹೃದಯಕಮಲದ ಕೇಸರ.
ಭೃಂಗವೃಂದವು ದಿಕ್ಕು ತಪ್ಪಿದೆ
ಪ್ರಾಣಗಂಧದ ಹತ್ತಿರ.

ಹೃದಯ ಗವಿಯಲಿ ಬೆಳಕು ಚೆಲ್ಲಿದೆ
ನಯನದೊಳಗಿನ ನೇಸರ.
ವಿಮಲಚಿತ್ತವು ಸುಧೆಯನುಣಿಸಿದೆ
ಅಮರವಾಗಿದೆ ಈ ಸ್ವರ.


ದೇಹವೀಣೆಯ ನಾಡಿ ಮಿಡಿದಿದೆ
ತಾನತಾನದ ದನಿಯಿದೆ
ಮನವು ಸ್ವರದಲಿ ಲೀನವಾಗಿದೆ
ತನ್ನ ಇರವನೆ ಮರೆತಿದೆ.

ಗುರುವಾರ, ಫೆಬ್ರವರಿ 14, 2013

ವಸಂತಗೀತೆ


ಭಾವಚೈತ್ರದ  ಆದಿಪರ್ವಕೆ
ಕವಿತೆ ತಳಿರಿನ ತೋರಣ.
ಮತ್ತ ಕುಕಿಲದ ಕೊರಳ ಇಂಪಿಗೆ
ನವ್ಯ ಪಲ್ಲವಪೂರಣ.

ಹೃದಯ ಕುಸುಮದ ಮಧುರ ಜೇನಿಗೆ
ಚಿತ್ತಭ್ರಮರದ ಚಾರಣ.
ರಸನದೊಳಗಿನ ಸಿಹಿಯ ಚಪಲಕೆ
ಭವ್ಯ ಕರಣವೆ ಹೂರಣ.


ಕರ್ಣಮೋಹನರಾಗತಾನಕೆ
ಚರಣ ಮಾರ್ದನಿ ಕಾರಣ.
ಅಂತರಂಗದ ಗಾನಲಾಸ್ಯಕೆ
ಪ್ರಣವನಾದವೆ ಪ್ರೇರಣ.

ಚೈತ್ರರಥದಲಿ ಮದನಚುಂಬನ
ಬಾಹುಬಂಧನ ಸ್ವೇದನ.
ಭಾವಗಾನದ ದನಿಯ ಸ್ಪಂದನ
ಕಾವ್ಯರತಿಯಾ ಬಂಧನ.

ಮಂಗಳವಾರ, ಫೆಬ್ರವರಿ 12, 2013

ಕರುಳಿನ ಕರೆ


ತಾಯಿಬೇರಿನ ಸಾರ ಸೆಳೆಯುತ
ಮರವು ಭರದಲಿ ಚಿಗುರಿದೆ.
ತಾಯಿ ಕರುಳಿನ ಕರೆಯನಾಲಿಸಿ
ಬಲಿತ ಎಲೆಯದು ಉದುರಿದೆ.

ಎಲೆಯು ಮಣ್ಣಲಿ ಬೆರೆತು ಕೊಳೆಯುತ
ತಾಯಿಬೇರನು ಸೇರಿದೆ.
ಮಮತೆಯೆರೆದಾ ತಾಯಿಯುದರಕೆ
ತಾನೆ ಸಾರವನುಣಿಸಿದೆ.

ಮರವು ಬೇರಿಗೆ ನೀರನುಣಿಸಲು
ಕರಿಯ ಮುಗಿಲನು ಸೆಳೆದಿದೆ.
ಮರದ ಮಮತೆಯ ಕರೆಯನಾಲಿಸಿ
ಮುಗಿಲು ಮಳೆಯನು ಸುರಿಸಿದೆ.

ಮುಗಿಲ ಮಳೆಯಲಿ ಮರವು ಅರಳಿದೆ
ಚಿಗುರು ಚಿಗುರಲಿ ನಗುವಿದೆ.
ಮಳೆಯ ಗಾಳಿಗೆ ಎಲೆಯು ಉದುರಿದೆ
ತಾಯಿಮಡಿಲಲಿ ಮಲಗಿದೆ.


ಮರದ ಮಮತೆಯ ಮನುಜ ತಳೆಯಲಿ
ಕಣ್ಣ ಪೊರೆಯನು ಕಳಚಲಿ.
ತಾಯಿಬೇರಿಗೆ ಸಾರವುಣಿಸಲಿ
ಜೀವದಾ ಋಣ ಅರಿಯಲಿ.


ಸೋಮವಾರ, ಫೆಬ್ರವರಿ 11, 2013

ಕಾವ್ಯದ ಹಬ್ಬವ ಮಾಡೋಣ


ಮಾವಿನ ತೋರಣ ಮನದ ಬಾಗಿಲಿಗಿರಿಸಿ
ಭಾವದೋಕುಳಿಯನಾಡೋಣ.  
ಬೇವಿನ ಚಿಗುರಿಗೆ  ಬೆಲ್ಲವನು ಬೆರೆಸುತ್ತ
ಕಾವ್ಯದ ಹಬ್ಬವ ಮಾಡೋಣ.

ಭಾವಚೈತ್ರದ ಕವಿತೆಯ ಚಿಗುರಲ್ಲಿ
ಕವಿಗಳ ಅನುಭವದ ನೆರಳಲ್ಲಿ
ಸವಿಯಾದ ರಸವನ್ನು ಬೆರೆಸುತ್ತ ನಾವು
ಕಾವ್ಯದ ಹಬ್ಬವ ಮಾಡೋಣ.

ಕಾವ್ಯವನದಾ ಚಿಗುರಿನ ಒಗರಲ್ಲಿ
ಭಾವಗೀತೆಯಾ ರಸದಲ್ಲಿ
ಸಾವನರಿಯದ ಸ್ವನದಲ್ಲಿ ಹಾಡುತ್ತ
ಕಾವ್ಯದ ಹಬ್ಬವ ಮಾಡೋಣ.

ನೋವ ಮರೆಯಲು ನಲಿವನ್ನು ಮೆರೆಯಲು
ಭಾವದೋಕುಳಿಯನಾಡೋಣ.
ಕಾವ್ಯದಾ ಸವಿಯೂಟ ಸವಿಯುತ್ತ ನಾವು  
ಜೀವನ ಯಾತ್ರೆಯ ಮಾಡೋಣ.

ಭಾನುವಾರ, ಫೆಬ್ರವರಿ 10, 2013

ಹೊಸಹರುಷದಲಿ ಬರೆವೆ ನಾನು


ಹೊಸಚಿಗುರ ಶರದೊಸಗೆಯ ಹರುಷದಲಿ ಬರೆವೆ ನಾನು.
ಹೊಸವಿವರ ವಿಚಾರಪರ ಪದಗಳನು ಸುರಿಸಿ ನಾನು.

ಸತ್ತ್ವಯುತ ರಸದಲುದಿತ ಕವಿತೆಗಳ
ನಿತ್ಯಮರೆವ ಸತ್ಯಕತೆ ವಿವರಗಳ
ಮನಮನದಿ ಮಿಡಿಯುತಿರುವ ಕನಸುಗಳ
ಕಣಕಣದಿ ಹೊಳೆವ ಸುರಿಮಳೆಹನಿಗಳ

ಕುಸುಮಿಸದೆ ಬೆಸಲಾದ ಮಿಡಿಗವಿತೆಗಳ
ಕಸದಲ್ಲಿ ರಸವಾದ ಕಿರುಗತೆಗಳ
ಉಸಿರುಸಿರಿನಾ ಬಿರುಬೆಸುಗೆಯ ನಶೆಗೆ
ಹೊಸೆದ ನವರಾಗ ಸ್ವರಗೀತೆಗಳ

ಶನಿವಾರ, ಫೆಬ್ರವರಿ 9, 2013

ಪದಬಿರಿದು ಬಾ ಸರಸತಿಯೆ (ಹೊಸ ಆವೃತ್ತಿ)


ಬಾ ಬೇಗ ಸರಸತಿಯೆ  ಸರಸಿಜಾತನ ಮತಿಯೆ
ಮತಿಯಲ್ಲಿ ಪದವಿರಿಸಿ  ಸರಸರನೆ ಬಾ.
ಲಯಗತಿಯ ನಡಿಗೆಯಲಿ ಮೃದುವಾದ ಪದವಿರಿಸಿ
ಹದವಾಗಿ ಕುಣಿಕುಣಿದು ಮನತಣಿಸು ಬಾ.

ಪದದುಡುಗೆ ಪದದೊಡವೆ ಕರದಲ್ಲಿ ಪದಮಾಲೆ
ವಧುವಂತೆ ಪದವರವ ನೀ ವರಿಸು ಬಾ.
ಹದವಾದ ಪದಗಳಲಿ ಸರಿಗಮದ ದನಿಯಿರಿಸಿ
ಕದತೆರದು ಪದಬಿರಿದು ಮುದದೋರು ಬಾ.

ಪದರತಿಯ ಸರಸದಲಮರಪದದ ಕೃಪೆಯಿರಿಸಿ
ಮಧುರರಸವನು  ಕೃತಿಕೃತಿಯಲಿರಿಸು ಬಾ.
ಮದಭರಿತ ಮತಿಯನವಿರತವು ನತಗೊಳಿಸಿ ಮೃದು-
ಪದಜಲದ ನದಿಯಾಗಿ  ನೀ ಹರಿದು ಬಾ.

ಬುಧವಾರ, ಫೆಬ್ರವರಿ 6, 2013

ನಂಜನ್ನು ಹಿಂಜು ಬಾ ನಂಜುಂಡ...!


ಬಾರಯ್ಯ ನಂಜುಂಡ ಹಿಂಜು ಬಾ ನಂಜನ್ನು
ಪಸರಿಸಿದೆ ದ್ವೇಷದತಿಘೋರ ನಂಜು.
ಸಾಕಯ್ಯ ಜನಸಂಗ ಬೇಕಯ್ಯ ನಿನಸಂಗ
ಎಲ್ಲೆಲ್ಲು ಕವಿದಿರಲು ಮೋಹ ಮಂಜು.

ಜಗದೊಳಗೆ ತುಂಬಿರುವ ಮನುಜನಾ ಮತ್ಸರವ
ನುಂಗುತ್ತ ಕಲಿಸು ಬಾ ನಗೆಯ ಗುಂಗು.
ಮುಗುಳುನಗೆ ಸಾಧನದಿ ನಂಜನ್ನು ಹಿಂಜುವಾ
ವರವಿರಲು ಬಾಳೆಲ್ಲ ರಂಗು ರಂಗು.

ಕಡಲಲುದಿಸಿದಾ ನಂಜನುಂಡ ನಂಜುಂಡ!
ಬಿಡದೆ ಸುತ್ತಲ ನಂಜ ನೀನು ನುಂಗು.
ನನ್ನೆದೆಯ ಸಿಂಧುವಿನ ಹನಿಹನಿಯಲಿಂಗಿರುವ
ನಾನೆಂಬ ನಂಜನ್ನು ಮೊದಲು ನುಂಗು.

ಮಂಗಳವಾರ, ಫೆಬ್ರವರಿ 5, 2013

ಚಂದಿರನ ಮೊಗವ ಹೊತ್ತು ಬಾ


ಬಾ ಗೆಳತಿ ಬಳಿ ಬಾರೆ ನೀ ಬಾಳಿನಾ ಒಡತಿ
ಹುಣ್ಣಿಮೆಯ ಚಂದಿರನ ಮೊಗವ ಹೊತ್ತು.
ಭಾವನೆಯ ಬಾಂದಳದಿ ಹೊಂಬೆಳಕ ಚೆಲ್ಲುತ್ತ
ಸೊಗ ತಾರೆ ಜಗದಗಲ ನಗುವ ಹೊತ್ತು

ನಗುಮೊಗದ ಚಂದಿರನ ಬಿಳಿಹಾಲ ನೊರೆಯಲ್ಲಿ
ನನ್ನೆದೆಯ ಹುಳಿಯೊಲವ ಹೆಪ್ಪುಬೆರೆಸಿ.
ಕಡೆದಿರುವೆ ಸಿಹಿಯೊಲವ ತೇಲುತಿಹ ಬೆಣ್ಣೆಯನು
ಕಾಯಿಸುವ ಬಾ ತುಟಿಗೆ ತುಟಿಯನಿರಿಸಿ.

ಬಾನಿನಾ ಚಂದಿರನು ಮೊಗದಲ್ಲೆ ಇರುವಾಗ
ಬಾಳಲ್ಲಿ ಬೆಳದಿಂಗಳಿನಾ ಹರಹು.
ನಗುವಿರಲು ಸೊಗವಿರಲು ಕಾಲದಾ ಮರೆವಿರಲು
ನಮಗಿಲ್ಲ ಸುತ್ತಲಿನ ಜಗದ ಅರಿವು.

ಸುಧಾಸಾಗರದಿ ಹುಟ್ಟಿದಾ ಚಂದಿರನ ತಾ
ಹೊತ್ತು ತಂಪಾಯಿತಾ ಶಿವನ ಬದುಕು.
ಸುಧಾಧಾರಾ ಸಿಂಚನದ ಮೊಗದ ಹೊಳಪಲ್ಲಿ
ಶಿವವಾಗುತಿದೆಯೆನ್ನ  ಭಾವ- ಬದುಕು.