ಸೋಮವಾರ, ಡಿಸೆಂಬರ್ 31, 2012

ಕಾಯಿಸು.. ಕಾಯಿಸದಿರು !!


ಗತಸಂವತ್ಸರವೇ....
ನಿನ್ನೊಲವಲಿ ಕಡೆದು
ಬೆಣ್ಣೆಯಾಗಿರುವೆ..
ಕಾಯಿಸಿನ್ನು ಎನ್ನನು.

ಕಾಯಿಸದಿರು ಇನ್ನು...
ನವಸಂವತ್ಸರದೊಲವಿನ
ಔತಣದ
ಹೋಳಿಗೆಗೆ
ತುಪ್ಪವಾಗಿಸಲು.



ಶನಿವಾರ, ಡಿಸೆಂಬರ್ 29, 2012

ಕನ್ನಡ ದೇವಿಗೆ ನುಡಿನಮನ


ಕನ್ನಡ ದೇವಿಯೆ ನಿನ್ನಡಿಗೆರಗಿ
ನುಡಿಗಳ ಕಲಿವೆವು ನಾವು
ಅಡಿಗಳ ಹುಡಿಯನು ಶಿರದಲಿ ಧರಿಸಿ
ಜಡತೆಯ ಕಳೆವೆವು ನಾವು

ಪಂಪನು ನುಡಿದಾ ಇಂಪಿನ ಪದಗಳು
ನಮಗೆಂದೆಂದೂ ಹೃದ್ಯ.
ಕವಿವರ ಕುವೆಂಪು ಕಡೆದಾ ಕೃತಿಯು
ಸಂಸ್ಕೃತಿ ಕಲಿಸುವ ಪದ್ಯ.

ಬೇಂದ್ರೆ ಕಾರಂತ ಕಾವ್ಯಾನಂದ
ನಮ್ಮಯ ಹೃದಯದ  ಪ್ರಾಣ.
ಶರಣರ ವಚನದ ಸಮತೆಯ ಸಾರ
ನಮ್ಮಯ ಉಸಿರಿಗೆ ತ್ರಾಣ.

ಸಾವಿರ ಜನುಮವೆ ಕಳೆಯಲಿ ಇಲ್ಲಿ
ಬೇಸರವಿಲ್ಲ ನಮಗೆಂದು.
ನಿನ್ನಯ ಬಸಿರಲೆ ಉಸಿರನು ತಳೆದು
ಕನ್ನಡ ನುಡಿವೆವು ಎಂದೆಂದು.

ನಿನ್ನಯ ಕನಸಿನ ಕುಸುಮದ ಜೇನನು
ಸವಿಯುತ ನಲಿವೆವು ನಾವಿಂದು.
ನಮ್ಮಯ ಕನಸಿನ ಕುಸುಮದ ಜೇನಿಗೆ
ಸಿಹಿ ತುಂಬುವ ಅಮ್ಮನು ನೀನಿಂದು.

ಬುಧವಾರ, ಡಿಸೆಂಬರ್ 26, 2012

ನೀನೆನ್ನ ಹೃದಯಕವನ


ಬಾರೆ ನೀ ಬೇಗ ಬಾ ಚಲುವೆ ನಾನಿರುವ ಕೋಣೆಯೊಳಗೆ.
ಯಾರಿರದ ವೇಳೆಯಿದು ಬಲಗಾಲ ಒಳಗಿಟ್ಟು ಬಾರೆ.

ನಾಚಿಕೆಯೆ ಒಳಬರಲು!
ಬೆವರುತಿಹೆ! ಹೆದರಿಕೆಯೆ ಒಡಲಿನೊಳಗೆ!?
ಪ್ರೀತಿಯಲಿ ಉಲಿಯವಳು
ನನ್ನವಳು ಬಂದು ನೀನೆನ್ನ ಸವತಿಯಾಗೆ!

ನಡುಹಿಡಿದು ಮೈದಡವಿ ಮುದ್ದಿಸುವೆ ನಿನ್ನನ್ನು
ನೀಡೆನಗೆ ರಸನಿಮಿಷವ.
ಹಿಡಿದುಸಿರು ಹೊರಬಿಟ್ಟು ಓಡಿಸುವೆ ಬೇಗ
ನನ್ನುರದ ನೋವ.

ಆ ದಿನದಿ ನೀ ಬರಲು ನಾ ಕರೆಯಲಿಲ್ಲ.
ನನ್ನವಳ ಪ್ರೀತಿಯಲಿ ಮರೆತಿದ್ದೆ ನಿನ್ನಂದ ಕ್ಷಮಿಸು ಎಲ್ಲ.
ನೀನಿಂದು ನುಡಿವ ಮಾತುಗಳನಾಲಿಸಲು
ಕಾದಿರಲು ಮಂದಿ ಎಲ್ಲ.... ಹಿಡಿದಿರುವೆ ನಾ ನಿನ್ನ ಗಲ್ಲ.

ಬಾ ಚಲುವೆ ಬಳಿ ಬಾರೆ ಬೇಗ ನೀನೆನ್ನ ಭಾವವದನ!
ನನ್ನವಳ ಸವತಿ! ನನಗಿಂದು ಗೆಳತಿ! ನೀನೆನ್ನ ಹೃದಯಕವನ!

ಕಲೆಯ ಅರಿವು ಅರಳಲಿ


ಕವಿಯ ಭಾವದ ಅರಿವ ಪಡೆಯಲು
ಬಾಲಭಾವದಿ ಹೊರಟೆನು.
ಚರಣಕಮಲಕೆ ಶಿರವ ಬಾಗುತ
ಭಾವನಿವೇದನೆಗೈದೆನು

ಕಲೆಯ ಕಲಿಸುವ ಹೃದಯದೊಲವಿಗೆ
ಒಲವ ತೋರುವ ಭಾವದಿ
ಹೃದ್ಯತಾಳದ ಪದ್ಯದೊಲವಿಗೆ
ತಂತಿ ಮೀಟುವ ಭಾವದಿ.

ಕಲ್ಲುಬಂಡೆಗು ಕವಿತೆ ಬರೆಯುವ
ಬೆಣ್ಣೆಯಂತಹ ಭಾವದಿ.
ಎಲ್ಲ ಕಾಲಕು ಸಲ್ಲುವಂತಹ
ಚಿಣ್ಣಚಿಣ್ಣರ ಭಾವದಿ.

ಕವಿಯು ಅನುಭವದರಿವು ನೀಡಲಿ
ಬಾಲ ಹೃದಯವು ಅರಳಲಿ.
ಕವಿಯ ಕಲ್ಪನೆ ಜೀವ ತಳೆಯಲಿ
ಕಾವ್ಯಕಾವ್ಯದಿ ಹೊಮ್ಮಲಿ


ಮಂಗಳವಾರ, ಡಿಸೆಂಬರ್ 25, 2012

ಬೆಳೆಯೋಣ ಕಾವ್ಯಸಂತತಿಯ


ಚಿತ್ತಭೂಮಿಯನುತ್ತು ಶಬ್ದಬೀಜವ ಬಿತ್ತಿ
ಬತ್ತದಾ ಭಾವಜಲಯೆರೆದು
ಬೆಳೆಯೋಣ ಕಾವ್ಯಸಂತತಿಯ ||
ಸಾರಜನಕದಾ ಶ್ರುತಿಸಾರವುಣಿಸುತಲಿ
ಹಿತಮಿತದಿ ರಂಜಕವ ಬೆರೆಸುತಲಿ
ಕ್ಷಾರವಿಷಗಳನು ದೂರವಿರಿಸುತಲಿ
ಸಾವಯವದಾ ಕೃಷಿಯ ನಮಿಸುತಲಿ ||
ಸುಭಾವಜಲದಲಿ ಸಂಸ್ಕರಿಸುತಲಿ
ಶಬ್ದ ಸಂತಾನವಾ ಗುಣಿಸುತಲಿ
ವ್ಯವಕಲಿಸಿ ಮತ್ತೆ ಸಂಕಲಿಸುತಲಿ
ರಸಿಕರಿಗೆ ಮಧುರ ರಸವುಣಿಸುತಲಿ ||

ಭಾನುವಾರ, ಡಿಸೆಂಬರ್ 23, 2012

ಛಂದೋಮಯಂ ಜಗತ್


ಕಾಗೆಯ ಕೂಗು,
ಕೋಗಿಲೆಯ ಕೂಗು,
ಕೋಳಿಯ ಕೂಗು,
ಜಲಪಾತದ ಭೋರ್ಗರೆತ
ಸಮುದ್ರದ ಅಲೆಗಳಬ್ಬರ..
ಆಹಾ!!!
ಜಗದೆಲ್ಲಾ ಚರಾಚರಗಳ
ಮಾತುಗಳೆಲ್ಲ
ನಿಯತ ಛಂದೋಗತಿಯಿರುವ
ಕವಿತೆಗಳಾಗಿ ಅಸ್ತಿತ್ವದಲ್ಲಿರುವಾಗ
ನನ್ನೆಲ್ಲ ಮಾತುಗಳಿಗೇಕೆ
ಛಂದದ ಗತಿಯಿಲ್ಲ!?
ಚಂದದ ಮಿತಿಯಿಲ್ಲ!?
ಅಥವಾ ನನ್ನ ಪ್ರತಿ
ಭಾವವಿಕಾರವೂ
ಒಂದೊಂದು ಛಂದವೇ!
ಹಾಗಿದ್ದರೆ.......
ನನ್ನೆಲ್ಲಾ ಮಾತುಗಳೂ
ಚಂದದ ಕವಿತೆಗಳಾಗಿ
ಅಸ್ತಿತ್ವ ಪಡೆಯುವುದಿಲ್ಲವೇಕೆ!?

ಶುಕ್ರವಾರ, ಡಿಸೆಂಬರ್ 21, 2012

ನನ್ನ ಕವನ‌


ಕುಸುಮಿಸದೆ ಪ್ರಸವಿಸಿದ ಕುಂತಿಯ
ಕೂಸು-ನನ್ನ ಕವನ.
ಗಂಗೆಯಲಿ ತೇಲಿಬಿಟ್ಟಿದ್ದೇನೆ... ಕರ್ಣನ ವೀರತ್ವ ಬರಲಿಲ್ಲ.
ವಿಶ್ವಾಮಿತ್ರ ಮೇನಕೆಯ ಸಂಗಮಫಲ
ಪುತ್ರಿ-ನನ್ನ ಕವನ.
ತಪೋವನದಲ್ಲಿ ಕಾಪಿಟ್ಟಿದ್ದೇನೆ.. ಶಕುಂತಲೆಯ ರೂಪವಿಲ್ಲ.
ಹರಿಹರರ ಮೋಹಸಂಜಾತ
ಅಯ್ಯಪ್ಪ- ನನ್ನ ಕವನ.
ಗುಡಿಕಟ್ಟಿದ್ದೇನೆ.. ಭಕ್ತರಿಲ್ಲ.
ಪಾರ್ವತಿಯ ಬೆವರಿನಲಿ ಜನಿಸಿದ
ವಿನಾಯಕ-ನನ್ನ ಕವನ.
ಅರ್ಚಿಸಿ ಕೆರೆಯಲ್ಲಿ ಮುಳುಗಿಸಿದ್ದೇನೆ...ವರವಿಲ್ಲ.
ಪದಪ್ರಕೃತಿಗೆ ಅರ್ಥರಸ ರುಚಿಸಲಿಲ್ಲ.
ರುಚಿಹೀನರಸಧರಿಸಿ ಮಾಸ ತುಂಬದೆ
ಸ್ರವಿಸಿದಾ ಕಸವಿದು ನನ್ನ ಕವನ.

ಹಾರೈಕೆ


ಭಾವ-ಭಾವದಿ ಭಾವ ಬೆಸೆಯುತ
ಕಾವ್ಯ ಕಟ್ಟಲಿ ಕವಿಗಳು.
ಕವಿತೆಯೋದುತ ಕಷ್ಟ ಮರೆವೆವು,
ಜೀವನದ ಸವಿಯರಿವೆವು.

ಕವಿತೆ ಮೊಳೆಯಲಿ, ಕವಿತೆ ಬೆಳೆಯಲಿ
ಸಾವಯವದಾ ಕೃಷಿಯಲಿ.
ನೋವುನಲಿವಿಗೆ ಜೀವ ತುಂಬಲಿ
ಸಾವನರಿಯದ ಸ್ವನದಲಿ.

ಕವಿಯ ಕನಸಿನ ಹೂವ ಜೇನನು
ಸವಿದು ಸಾಗುವ ಬನ್ನಿರಿ.
ಕವನದುಂಬಿಯ ಕನಸಹೂವನು
ಭಾವ-ಭಾವದಿ ಬೆಳೆಯಿರಿ.

ಸ್ವರಚಿತ ಸಂಸ್ಕೃತ ಪದ್ಯಗಳು



ತುಂಗಾತೀರವಿಹಾರಿಣೀಂ ಭಗವತೀಂ ಬ್ರಹ್ಮಾಪುರಪ್ರಾಕೃತೀಂ
ಭವ್ಯಾಂ ಭಾಂ ಭವತಾರಿಣೀಂ ಸುರನುತಾಂ ಸದ್ಭಾವಗಮ್ಯಾಂ ಶುಭಾಮ್ |
ಮಾರೀಚಾದಿಮುನಿಪ್ರಪೂಜಿತಪದಾಂ ಪದ್ಮಸ್ಥಿತಾಂ ಹೃತ್ಸ್ಥಿತಾಂ
ಆಲಂಬೇ ತ್ರಿಪುರಾಂತಕೀಂ ಪ್ರತಿದಿನಂ ದುರ್ಗಾಂ ಮದಂಬಾಮಹಂ || ಶಾರ್ದೂಲವಿಕ್ರೀಡಿತವೃತ್ತ ||


(ಬ್ರಹ್ಮಾಪುರ=ಬೊಮ್ಲಾಪುರ)

ನಾನಾ ಜನ್ಮಜಪಾಪಪುಣ್ಯಹರಣಂ ಶ್ರೀ ಸಾಂಬಸತ್ಸೇವನಂ
ಜನ್ಮವ್ಯಾಧಿಜರಾಪಮೃತ್ಯುಹನನಂ ಕಾರುಣ್ಯಸಿದ್ಧಿಪ್ರದಮ್|
ನಿತ್ಯಂ ಸಂಸ್ಕೃತಭಾವಪೂರಿತಜಪಂ ಶ್ರೀಶಂಕರಾತ್ಪ್ರೇರಿತಂ
ತಸ್ಮಾತ್ ಸತ್ಯಪದಂ ಭಜಾಮಿ ಸತತಂ ಸತ್ಯಂ ಶಿವಂ ಸುಂದರಮ್||  ಶಾರ್ದೂಲವಿಕ್ರೀಡಿತವೃತ್ತ ||

ಶಿವಪದಮಧುಧಾತ್ರೀಂ ಸರ್ವಸಂಪತ್ಪ್ರದಾತ್ರೀಂ
ಮದನರಿಪುಸುರಾಗೀಂ ಧ್ಯಾನಮಗ್ನಾಂ ವಿರಾಗೀಮ್|
ಅಮೃತವನಸುಚೈತ್ರೀಂ ಪುಷ್ಪಬಾಣಾನ್ ಪ್ರಪನ್ನಾಂ
ಅನವರತಮಹಂ ತಾಂ ಸುಂದರೀಂ ಭಾವಯಾಮಿ||   ಮಾಲಿನೀವೃತ್ತ ||

ನಿತ್ಯಂ ಶಿವಂ ಸಂತತ ಸತ್ಯಮೂರ್ತಿಂ
ಹೃದಂಧಕಾರಕ್ಷಯಕಾರಕಂ ತಮ್|
ಸರ್ವೇಷ್ಟಸಿದ್ಧಿಪ್ರದಪಾದಯುಗ್ಮಂ
ಭಜಾಮಿ ಭಕ್ತ್ಯಾsಮಲಚಿತ್ತವೃತ್ಯಾ||    ಉಪಜಾತಿವೃತ್ತ ||

ಸರ್ವಭೂತಿಂ ಪ್ರದಾಸ್ಯಾಮಿ ನಾನಾ ಜನ್ಮನಿ ಸಂಚಿತಮ್|
ವಿಭೂತಿಂ ದೇಹಿ ಮೇ ಶಂಭೋ ಸ್ವಾನುಭೂತಿಪ್ರದಂ ಶುಭಮ್||  ಅನುಷ್ಟುಪ್ ||


ಶ್ರೀಚಕ್ರಸ್ಥಾಮನಂತಾಮಚಲಚಲಯುತಾಮಾದಿಶಕ್ತೀಮನಾದೀ-
ಮಕ್ಷಾದ್ಯಂತ್ಯೈಶ್ಚರಂತೀಮಮರಪದರತೀಂ ಮಧ್ಯಶೂನ್ಯಾಮನನ್ಯಾಮ್ |
ಕಾಲಾತೀತಾಂ ತ್ರಿಕಾಲಾಂ ತ್ರಿಭುವನಜನನೀಂ ತ್ರ್ಯಕ್ಷರಾದ್ಯಂತಗರ್ಭಾ-
ಮಾಲಂಬೇಹಂ ಮದಂಬಾಂ ತ್ರಿಪುರಹರಪದಾಂ ದಿವ್ಯಸೌಂದರ್ಯರೂಪಾಮ್ || ಸ್ರಗ್ಧರಾ ವೃತ್ತ ||

ನಮೋ ಭವಾನ್ಯೈ ನವಕನ್ಯಕಾಯೈ
ನಮಃತ್ರಿಕಾಲಾಗ್ನಿಸುದೀಪ್ತಿಕಾಯೈ|
ಸುಜ್ಞಾನರೂಪೈರ್ಮಮಕಾರಹಂತ್ರ್ಯೈ
ಮಾತ್ರೇ ಸದಾ ಸಂಪದಸನ್ನಿಧಾಯೈ || ಉಪಜಾತಿವೃತ್ತ||

ಕೆಸರು ತುಂಬಿದ ಮನದಲ್ಲೊಂದು ಕಮಲ


ಕೆಸರು ತುಂಬಿದಾ ನನ್ನಯ ಮನದಲಿ
ತಾವರೆ ಬಂದು ಕುಳಿತಿರಲು..
ಬಸಿರಲಿ ತನ್ನನು ಹೊತ್ತ ತಾಯಿಗೆ
ನಮಿಸಲು ಬಂದನು ಆ ಬೊಮ್ಮ ||

ತಾಯಿಯ ಕರುಳಿನ ಕೂಗನು ಆಲಿಸಿ
ಬೊಮ್ಮನ ಮನಸು ನೀರಾಗಿ..
ಮಾಯಾಪುರಿಗೆ ಈಜುತ ಬಂದನು
ತನ್ನಯ ಮಗನ ಜೊತೆಯಾಗಿ ||

ಕಾಮನು ಬಂದನು ರತಿಯೂ ಬಂದಳು
ಕೆಸರು ತುಂಬಿದಾ ನನ್ನಯ ಮತಿಗೆ..
ಸಾಮವೇದದಾ ಸ್ವರಗಳನುಲಿಯಿತ
ಋಷಿಗಳು ಬಂದರು ಆ ಪುರಿಗೆ ||

ಶಿವನ ತಪವನು ಕಾಮನು ಕೆಡಿಸಿ
ಗಿರಿಜೆಯ ಜೊತೆಯಲಿ ಕರೆತಂದ..
ಪುರದಲಿ ತಳಿರಿನ ತೋರಣ ಕಟ್ಟಿ
ಕರೆದೆನು ನಾನು ಶಿವನನ್ನು ||

ನಾನೇ ಶಿವನು ಶಿವನೇ ನಾನು
ಎನ್ನಲು ಮನವು ತಿಳಿಯಾಗಿ..
ಶಿವೆಯನು ಕರೆದು ಕಮಲವನಿತ್ತು
ಕವನವ ಬರೆದೆನು ನಾನಾಗ ||

ಮತಿಗೆ ಮಾತಿನ ಮಿತಿಯ ನೀಡು ದೇವ


ಮತಿಗೆ ಮಾತಿನ ಮಿತಿಯ ಮೀರದ
ಗತಿಯ ನೀಡೆನಗೆ ಮೊದಲದೇವ.
ಸತತ ಮಾತಿನ ಲಯದ ಗತಿಯನು
ಹಿತಗೊಳಿಸುತಲಿ ಮುನ್ನಡೆಸು ದೇವ.
ಅತಿರಸವು ಬೇಕೆಂಬ ರಸನದಾ
ಚಪಲವನು ಮಿತಗೊಳಿಸು ದೇವ.
ಮಾತು ಮಾತಿಗೆ ಸಹಜ ಸೊಬಗಿನ
ಗೀತೆ ನಡೆಯನು ಕಲಿಸು ದೇವ.
ಶ್ರುತಿಯ ಗತಿಯಲಿ  ಋತದ ಪಥದಲಿ
ಮನದ ರಥವನಣಿಗೊಳಿಸು ದೇವ.




ಸುಗ್ಗಿ ಮಾಡೋ ರೈತ ಹಿಗ್ಗು ಮಾಡೋ...


ಸುಗ್ಗಿ ಮಾಡೋ ರೈತ ಹಿಗ್ಗು ಮಾಡೋ...
ತಗ್ಗಿ ನಡೆವ ಜನರ ನೀನು ಹಿಗ್ಗು ಮಾಡೋ...
ಕೆಸರ ಮಾಡಿ.., ಹೊಲವ ಹಸಿರ ಮಾಡಿ..
ಹಸಿವೆಯಿಂದ ನೊಂದ ಜನರ ಮೊಗವ ನೋಡಿ ||

ನೀರ ಬಿಟ್ಟು..., ಹೊಲಕೆ ಸಾರ ಕೊಟ್ಟು...
ಊರ ಮಂದಿಗೆಲ್ಲ ಕೆಲಸ ಕೊಟ್ಟು |
ಪೂಜೆ ಮಾಡಿ..., ಭೂಮಿ ಪೂಜೆ ಮಾಡಿ...
ಪೂಜೆಯಿಂದ ಬಂದ ಫಲವ ದಾನ ಮಾಡಿ||

ದೀಪ ಹಚ್ಚಿ...,ಹೊಲಕೆ ದೀಪ ಹಚ್ಚಿ...
ಪಾಪ ಕಳೆಯೆ ಪುಣ್ಯಫಲವ ನೆಚ್ಚಿ ||
ಹೊಸತು ಮಾಡಿ..., ಮನವ ಕಸುವು ಮಾಡಿ...
ಹಸಿವೆಯಿಂದ ನೊಂದ ಜನಕೆ ದಾನ ಮಾಡಿ ||

ಮೋಡ ನೋಡಿ..., ಮಳೆಯ ಸುಳಿವು ನೋಡಿ...
ಕಾಡದಿರಲು ಚೌಡಿಗೊಂದು ಕಾಯಿ ನೀಡಿ ||
ವಾರ ಬಿಟ್ಟು..., ಹೊಲಕೆ ಜನರ ಬಿಟ್ಟು...
ಪೈರುಗಳನು ಕಣಕೆ ತರುವ ಕೆಲಸ ಕೊಟ್ಟು || ಸುಗ್ಗಿ ಮಾಡೋ ರೈತ....||

ಬಿನ್ನಾಣಗಿತ್ತಿಯ (ನದಿ) ಬೆಂಬತ್ತಿ


ಬಳುಕಿ ಬಳುಕಿ ಮೈಕುಲುಕಿ ನಡೆವಾ
ಬಿನ್ನಾಣಗಿತ್ತಿಯ ನೋಡಿದೆನು.
ಹಚ್ಚ ಹಸುರಿನ ಹೊಲದ ಬದಿಯಲಿ
ಅಂದಗಾತಿಯ ನೋಡಿದೆನು.
ನೋಡಿದೆನು, ನಾ ಹಿಂದೆ ಓಡಿದೆನು.

ಮುಳ್ಳ ಪೊದೆಯಲಿ ಮೈಯ ಬಗ್ಗಿಸಿ
ನುಸುಳಿ ಹೆಜ್ಜೆಯನಿಟ್ಟವಳ.
ಕಲ್ಲು ಬಂಡೆಯ ಸುತ್ತ ಸುತ್ತುತ
ಆಟವನಾಡಿ ನಕ್ಕವಳ.

ಮುಗಿಲು ಸುರಿಸಿದಾ ಜಡಿಮಳೆಯಲಿ
ಮೈಯನುಬ್ಬಿಸಿ ನಡೆದವಳ.
ಕಣ್ಣ ಸೆಳೆಯುವ ಕೆಮ್ಮಣ್ಣಿನ
ಬಣ್ಣದುಡುಗೆಯ ತೊಟ್ಟವಳ.

ಬಿಸಿಲ ಅರಸಗೆ ಮೈಯ ತೋರುವ
ಸೊಬಗ ಸೀರೆಯನುಟ್ಟವಳ.
ಒಣಗಿದ ತೊಗಲಿನ ಕಡುಬಡವಗೂ
ತನ್ನೊಡಲ ಬಳಸಲು ಬಿಟ್ಟವಳ.

ಹಸುವ ಕಾಯುವ ಕೂಸ ಪೊರೆಯಲು
ಒಡಲ ಸೀಳೇ ಬಿಟ್ಟವಳ.
ಕೂಸಿನ ತೆರದಲ್ಲೆಲ್ಲರ ಕಂಡು
ತನ್ನತ್ತವರನು ಕರೆದವಳ.

ಕಡಲ ನೀರಲಿ ಉಡುಗೆಯ ಕಳಚಿ
ಅಂದದೊಡಲೂ ತೊರೆದವಳ.
ತೊರೆದ ಒಡಲನು ಮತ್ತೆ ಪಡೆಯಲು
ಮುಗಿಲನೇರಿ ಕುಳಿತವಳ.

ಪ್ರೀತಿಕಣಗಳು


ಬಡತನದ ಮಣ್ಣಿನಲಿ ಕಣ್ಣೀರ ಮಳೆಗರೆದು
ಪುಟವಾಗಿ ನಾ ಬೆಳೆದೆ ಪ್ರೀತಿಕಣವ.
ಸಡಗರದ ಸುಗ್ಗಿಯಲಿ ನನ್ನವಳು ಬೆರೆತಿರಲು
ಹಾಡುವೆನು, ಕುಣಿಯುವೆನು, ತುಂಬಿ ಭಾವ.

ಬಡತನದ ಪಾತ್ರೆಯದು ಬಂಗಾರದದಿರಿನದು
ಸಡಗರದಿ ಬೇಯುವುದು  ಪ್ರೀತಿಯಡುಗೆ.
ಬಡಿಸಿಹಳು ನನ್ನವಳು ಬೆಂದಿರುವ ಹೃದಯವನು,
ಅಡುಗೆಯದು ಬಂಗಾರ, ಪ್ರೀತಿ ಕೊಡುಗೆ.  

ನಾನು ನಾನೆನೆ ಅದು ನಾನಲ್ಲ


ನಾನು ನಾನೆನೆ ಅದು ನಾನಲ್ಲ..
ನಾನು ತಾನನವೆನೆ ಅದು ನಾನು.
ತನ್ನಿರವ ಮರೆವ ತಾನನವೆ ನಾನು.
ತನುವಲ್ಲ ಮನವಲ್ಲ ನೋವು ನಲಿವಲ್ಲ ನಾನು.
ತನುಮನದಿರವ ಮರೆತರಿವು.. ತಾನನವೆ ನಾನು.
ಗುರುಪದದ ಸಂಚರವು
ಗುರುಪದದ ಇಂಚರವು ನಾನು.
ಚರದಿರವ ಮರೆವ
ಗುರುಪದದ ಅರಿವೆ ನಾನು.
ಅರಿವೆ ಗುರುಪದದಿಂಚರವ
ಮರೆವೆ ಚರದಿರವ ನಾನು.

ಬಾಲಭಾವ


ತೊದಲು ನುಡಿಗಳನುಲಿವ ಬಾಲರ
ಮನಸ ಸೆಳೆಯುವ ಭಾವವು.
ಮೊದಲು ಪೂಜಿಪ ಜಗದ ದೇವನ
ಹೃದಯದೊಳಗಿನ ಜೀವವು.

ಬಾಲಸೂರ್ಯನ ಮೊದಲ ಚರಣವು
ತಮವ ಕಳೆಯುವ ಕಿರಣವು.
ತಾಳಲಯದಲಿ ಭಜನೆಗೈಯುವ
ಸಾಮಮನಸಿನ ಧ್ಯೇಯವು.

ಮೊದಲ ನುಡಿಗಳ ಮಳೆಯು ಸುರಿಯಲಿ
ಹೃದಯ ಕೊಳೆಯನು ತೊಳೆಯಲಿ.
ಜೀವ ಕುಸುಮಕೆ ಜೇನ ತುಂಬಲಿ
ನಾವು ನಮ್ಮನು ಮರೆಯಲಿ.

ಪ್ರಕೃತಿ ಕಡೆದ ಕಾವ್ಯ


ನಮ್ಮೂರ ಕಾಡೊಳಗೆ ಕಡೆದಿರುವ ಶಿಲ್ಪಗಳ
ಅಂದವನು ನೋಡೋಣ ಬನ್ನಿ ನೀವು.
ಕಲ್ಪನೆಯ ಕಲ್ಪಗಳು ಕಳೆದಿರುವ ಕಾವ್ಯಗಳ
ಇತಿಹಾಸ ವೃತ್ತಗಳ ತನ್ನಿ ನೀವು.

ಹೂವೊಳಗೆ ತುಂಬಿರುವ ಮಕರಂದ ಕಲೆಹಾಕಿ
ನಾಲಗೆಗೆ ಸವಿಯಿತ್ತ ಜೇನಿನಲ್ಲಿ.
ಹಣ್ಣುಗಳೊಳಗಿನ ಬೀಜಗಳ ಬಿತ್ತುತ್ತ
ತಿರುಳಗಳ ತಿನ್ನುವಾ ಹಕ್ಕಿಯಲ್ಲಿ.

ಕೀಟಗಳು ಹೆಣೆದಿರುವ ಬಲೆಯ ಮೇಲ್ಗಡೆಯಲ್ಲಿ
ಮುತ್ತಾಗಿ ಹೊಳೆದಿರುವ ಮಂಜಿನಲ್ಲಿ.
ಆಟವಾಡಲು ಬಳ್ಳಿ ಹಿಡಿದಿರುವ ವಾನರರ
ಚುರುಕು ನೋಟದ ಕಣ್ಣ ಹೊಳಪಿನಲ್ಲಿ.

ಸತ್ತಿರುವ ಎಲೆಯೊಳಗಿನಾ ಅಂತಃ ಸತ್ತ್ವವನು
ಚಿಗುರೆಲೆಗೆ ಕಳುಹಿಸಿದ ಮಣ್ಣಿನಲ್ಲಿ.
ಮಣ್ಣಿನಾ ಸತ್ತ್ವವನು ತನ್ನೊಳಗೆ ಕಲೆಸುತ್ತ
ಬೇರೊಳಗೆ ಬೆರೆಸಿರುವ ನೀರಿನಲ್ಲಿ.

ನೀರಡಿಕೆ ನೀಗಿದಾ ಮುಗಿಲುಗಳ ಅಪ್ಪುಗೆಗೆ
ಮೈಚಾಚಿ ನಿಂತಿರುವ ಮರಗಳಲ್ಲಿ.
ಮುಗಿಲುಗಳ ತಾ ಹೊತ್ತು ಮರಗಳ ಬಳಿಯಿತ್ತು
ಒಪ್ಪಿಗೆಯನಿತ್ತಾ ತಂಗಾಳಿಯಲ್ಲಿ.

ಬಿರುಗಾಳಿಗೆದೆಯೊಡ್ಡಿ ಮುರಿದಿರುವ ರೆಂಬೆಗಳ
ಜೀವವನು ತಳೆದಿರುವ ಬೆಂಕಿಯಲ್ಲಿ.
ಭಾವಗಳನುಕ್ಕಿಸುವ ರೂಪಗಳೊಳಹೊಕ್ಕು
ಸಾವನರಿಯದಾ ಜೀವಜೀವಗಳಲಿ.

ಕಲ್ಪನೆಗೆ ಕಸುವಿಟ್ಟ ಕವಿಗಳಾ ನುಡಿಗಳಲಿ
ಹುದುಗಿರುವ ಭಾವಗಳ ನೆನಪಿನಲ್ಲಿ.
ಕಲ್ಪನೆಯ ಕಲ್ಪಗಳೇ ಕಳೆದಿರುವ ಕಾವ್ಯದಲಿ
ಇತಿಹಾಸ ವೃತ್ತಗಳ ಹರಹಿನಲ್ಲಿ.


ಹೊರಹೊಮ್ಮಬಾರದೇ!? ಕವಿತಾರ್ಥ


ತಪವನಾಚರಿಸಿದಳು ಪದಪ್ರಕೃತಿ
ಅರ್ಥಸಂಸರ್ಗಕೆ...
ಸುಸಂಸ್ಕೃತವಸ್ತ್ರಧಾರಿಣಿಯಾಗಿ. ತತ್ಪುರುಷನ ಸುಳಿವಿಲ್ಲ.
***
ವಿವಸ್ತ್ರಳಾದಳು,
ಪುರುಷತ್ವ ಕೆರಳಿಸಲು....ವ್ಯರ್ಥರಸವೂ ಸ್ರವಿಸಲಿಲ್ಲ.
***
ಅಸಮವಸ್ತ್ರ ಧರಿಸಿದಳು, ಮೈಸೊಬಗು ಕಾಣುವಂತೆ !
ಕಾಣದಂತೆ....!
ಅನಿಸಿತು ಅರ್ಥ ಬಂದಂತೆ...ಬರಲಿಲ್ಲ... ಸಾರ್ಥಕವಾಗಲಿಲ್ಲ.
****
ಅದೆಂಥ ಅರ್ಥರಸಧಾರಿ..!
ಅದೆಂಥ ಪುರುಷಾರ್ಥ....!
ರಸಸ್ರವಿಸಿ ಮನ ತಣಿಸಬಾರದೇ !?
ಪದಪ್ರಕೃತಿ ಮೈದುಂಬುವಂತೆ.
ನವಮಾಸ ತುಂಬುವಂತೆ.
ಕವಿತಾರ್ಥ ಹೊರಹೊಮ್ಮುವಂತೆ.

ಪದಬಿರಿದು ಬಾ ಸರಸತಿಯೆ


ಸರಸತಿಯೆ ಸರಸಿಜಾತನ ಮತಿಯೆ
ಮತಿಯಲ್ಲಿ ಪದವಿರಿಸಿ ಸರಸರನೆ ಬಾ.
ಪದತುಂಬಿದೀ ಬಿಂದಿಯಲಿ ಕಲೆತು ಬಾ.
ಪದದುಡುಗೆ ನಿನ್ನುಡಿಗೆ ಪದದಡಿಗೆ ನಿನ್ನಡಿಗೆ
ಪದಪದಗಳಲಿ ಸರಿಗಮದ ನಡಿಗೆ
ಪದಕುಸುಮ ಪದಮಾಲೆ ಪದದೋಲೆ ನಿನಗೆ
ಕದತೆರದು ಪದಬಿರಿದು ಮುದದೋರು ಬಾ.