ಬುಧವಾರ, ಸೆಪ್ಟೆಂಬರ್ 28, 2016

ಮಾಂ ಪಾಹಿ ಶ್ರೀಮಾತೆ

ಮಾಂ ಪಾಹಿ ಶ್ರೀಮಾತೆ ಜಗದಂಬೆ ಶ್ರೀ ಲಲಿತೆ
ಶ್ರೀವನಿತೆ ಶ್ರೀಚಕ್ರರಾಜಸ್ಥಿತೆ
ಶ್ರೀಕಾರಸಂಕರ್ಷಿತೇ
ಓಂಕಾರಸಂದರ್ಶಿತೇ
ಸಚ್ಚರಿತ ಸದ್ಭಾವನೈವೇದ್ಯಸಂಪ್ರೀತೆ 
ಶ್ರೀಪದ್ಮದಲಮಧ್ಯರಾರಾಜಿತೆ

ಮತಿಯು ಮಥಿಸಿದ ಕಲ್ಪನಾ ಕಥಿತ ಬಿಂಬದಲಿ
ಪ್ರತಿವಚನವೀಯುತ್ತಲವತರಿಸು ಮಾತೆ
ಗತಿ ನೀನೆ ಜ್ಞಾನಸಂಗೀತೆ
ಹಿತವೀವ ಸಂಪತ್ಪ್ರದಾತೆ
ಶ್ರುತಿವಾಕ್ಯಸಮತೂಕದಾನಂದರಸರೂಪ-
ದತಿಶಯದ ವೈಖರಿಯನಾವರಿಸು ಲಲಿತೆ

ಪರಿಶುದ್ಧ ವಸ್ತುವನು ಪರಿಚಯಿಪ ಪದಗಳಿಗೆ
ಪರಿಪರಿಯ ವರ್ಣಗಳ ಪೂರೈಸು ಮಾಯೆ
ಅರಿವೀವ ನೀನಂತರಾತ್ಮಛಾಯೆ
ವರಕುಸುಮದಲಗಳನು ತೋರು ತಾಯೆ
ಸ್ವರಚಲಿತ ಮಾಧುರ್ಯನಾದಯೋಗವನಿತ್ತು
ಚರಭೋಗವಿಷಯಗಳ ಸಂಹರಿಸಿ ಕಾಯೆ

ಡಿ.ನಂಜುಂಡ
28/09/201

ಭಾನುವಾರ, ಸೆಪ್ಟೆಂಬರ್ 25, 2016

ಬಯಲು

ಬಯಲು ತಾ ಬಯಲಿನಲಿ ಬಯಲ ಬಳಪದಿ ಬರೆದ
ಬಯಲಗಲದಕ್ಷರವನೋದಲೆನ್ನೆದೆಯು 
ಬಯಲೆದುರು ಭಾವವನು ತಂದು ನಿಲ್ಲಿಸ ಬಯಸೆ
ಬಯಲಾದಿ ಸಿಕ್ಕೀತೆ? ದಕ್ಕೀತೆ ಕೊನೆಯು?

ಬಯಲಗಲ ಹಲಗೆಯಿರೆ ಬಯಲಗಲ ಬಳಪವಿರೆ
ಬಯಲಗಲದಕ್ಕರವ ಬರೆಯಲೂ ಬಹುದೆ
ಬಯಲಾಗದಿರಲೆದೆಯು ಬರಹವೋದಲುಬಹುದೆ?
ಬಯಲರ್ಥವನರವರತವನುಭವಿಸಬಹುದೆ?

ಬಯಲಲ್ಲಿ ಪಸರಿಸಿಹ ಬಾನುಲಿಯನೆಳೆತಂದು
ಬಯಲ ಹಾಡನು ನನ್ನದೆನ್ನಬಹುದೆ?
ಬಯಲ ತಂದಿರಿಸಲಿಕೆ ಬೇರಾವ ಜಾಗವಿದೆ?
ಬಯಲನೆಳೆಯುವ ಬಲವು ಬೇರೆಯಿದೆಯೆ?

ಬಯಲಿನೊಲವಲಿ ಬೆರೆತ ಬರಹವೆಲ್ಲವೂ ಬಯಲೆ
ಬಯಲ ಹೊರತಾಗನ್ಯ ಬರಹವೆಲ್ಲಿಹುದು?
ಬಯಲು ತಾ ಬಾನ್ತುಂಬಿ ಬಾನಾಡಿಯಂತಾಡಿ
ಬಯಲಿನಕ್ಷರವುಲಿಯೆ ಭಾವವೆಲ್ಲಿಯದು?

ಡಿ.ನಂಜುಂಡ
25/09/2016

ಭಾನುವಾರ, ಸೆಪ್ಟೆಂಬರ್ 11, 2016

ನಾನು ನೀನೆ ನೀನು ನಾನೆ

ಕುಣಿದು ಕುಣಿದು ನಕ್ಕು ನಲಿದು
ದಣಿದುದಿನ್ನು ಸಾಕು
ಬೆಣ್ಣೆ ಕದ್ದು ಅಡಗಿ ಕುಳಿತು
ಮೆದ್ದುದೆಲ್ಲ ಸಾಕು

ಬಯಲಿನಲ್ಲಿ ಹರಹಿದೊಲವು
ತಾನೆ ಚೆಲುವೆಯಾಗಿ
ಸೃಷ್ಟಿಯಾಗೆ ಅವಳ ದೃಷ್ಟಿ
ನಿನಗೆ ಸೋಕಲಾಗಿ

ಮಲಗೆನು ನಾನೆಂಬ ಹಟವ
ತೊಟ್ಟು ಕುಣಿಯುತಿರುವೆ
ಅಣು ಅಣುಗಳ ಮರೆಯಲಡಗಿ
ಆಟವಾಡುತಿರುವೆ

ಸಾಕು ಮುದ್ದು ಬಾಲ ಬಾರೊ
ತೊಟ್ಟಿಲಲ್ಲಿ ಮಲಗು
ಕನಸ ಕಂಡು ನೀನು ನಕ್ಕು
ಒಳಗ ಬೇಗ ಬೆಳಗು

ನೀನು ನಿದ್ದೆಗೈವ ತನಕ
ಲಾಲಿ ಹಾಡಿ ತೂಗೆ
ಪದಗಳೆಲ್ಲ ಮಲಗುವಾಗ
ನಿನ್ನೆಡೆ ನಾ ಬಾಗೆ
ನಾನು ನೀನೆ ನೀನು ನಾನೆ
ನಿನಗೆ ನಾನು ತಾಗೆ

ಡಿ. ನಂಜುಂಡ
11/09/2016

ಮಂಗಳವಾರ, ಸೆಪ್ಟೆಂಬರ್ 6, 2016

ನಾನು

ನಾನು ಮಲಗುವವರೆಗೆ ಕಾಯವುದೆ ಕತ್ತಲೆಯು?
ನಾನು ಏಳುವವರೆಗೆ ಕಾಯುವುದೆ ಬೆಳಗು?
ನಾನು ಹುಟ್ಟಿದ ಮೇಲೆ ಹುಟ್ಟಿದುದೆ ಭವಸುಖವು?
ನಾನಿಲ್ಲವೆಂದತ್ತು ಸೊರಗೀತೆ ಜಗವು?

ನಿನ್ನೆಯನು ಮರ್ಶಿಸುತ ನಾಳೆಯನು ಕರ್ಷಿಸುತ
ನಾನಿಂದಿನೀ ಕ್ಷಣವ ಸ್ಪರ್ಶಿಸದೆ ಇರಲು
ಜಗವು ನನ್ನನೆ ನೆಚ್ಚಿ ಇಂದೆ ನಾಳೆಯನೀದು
ಹರ್ಷದಿಂದುಬ್ಬುಬ್ಬಿ ನಲಿದೀತೆ ಹೇಳು?

ಬಾನೊಳಗೆ ನಾನಿದ್ದು ನನ್ನೊಳಗ ಬಾನಿರುವ
ಅರಿವಿನಾ ಹರಹಿನಲಿ ಬಯಲಾಗೆ ನಾನು
ನನ್ನಿರವಿನೊಳ ಹರಿವು ಬಯಲಿರವಿನಲಿ ಬೆಸೆದು
ನಾನಿಲ್ಲದಂತಾಗೆ ಉಳಿದದ್ದೆ ನಾನು

ಡಿ.ನಂಜುಂಡ

06/09/2016

ಮಳೆ ಸುರಿಯಲಿ

ಮಳೆ ಸುರಿಯಲಿ ನೆಲ ನೆನೆಯಲಿ ಜಲದೊರೆತೆಯು ಮೊರೆಯಲಿ
ಬೆಳೆಗಳ ತಳಿರೊಡೆಯಲಿ ತೆನೆಹಾಲ್ ತುಂಬಲಿ, ತೂಗಲಿ

ಕಾವೇರಿಯು ಮೈನೆರೆಯಲಿ ಕಾವೆಲ್ಲವ ತಣಿಸಲಿ
ಭಾವ ಝರಿಯ ಹರಹಿನಲ್ಲಿ ನಾವು ನಮ್ಮ ಮರೆಯಲಿ

ತುಂಗೆಯ ಇಕ್ಕೆಲೆಗಳಲ್ಲಿ ಹೊಂಗೆ ಬೀಜವುದುರಲಿ
ಸಿಂಗಾರದ ಸಿಕ್ಕೊಡೆಯಲಿ ತೆಂಗಿನ ಗರಿಗೆದರಲಿ

ಅಂಬುತೀರ್ಥದಿಂದ ಜಗದ ಅಂಬೆಯು ಅವತರಿಸಲಿ
ನಂಬಿದವರಿಗಿಂಬನೀವ ಹೊಂಬೆಳಗಣ್ ತೆರೆಯಲಿ

ಮಲೆನಾಡಿನ ಮಳೆಹಾಡಿಗೆ ಕಲೆಗಳ ಸೆಲೆಯೊಡೆಯಲಿ 
ಜಲದೊಲವಿಗೆ ಮೊಗಮೊಗಗಳು ಮೊರಗಳ ಹಾಗಾಗಲಿ

ಡಿ.ನಂಜುಂಡ
06/07/2016