ಸೋಮವಾರ, ಸೆಪ್ಟೆಂಬರ್ 5, 2016

ಕಬ್ಬಿಗ

ಕಬ್ಬಿಗರ ಕಬ್ಬಿಗನು ಭಾವದೊಳಗುಬ್ಬುಬ್ಬಿ
ಹಬ್ಬುತಿರಲೆಲ್ಲೆಲ್ಲೂ ನಮಗೆ ಹಬ್ಬ
ಒಬ್ಬಟ್ಟು, ಸಿಹಿಗಡಬು ಕಜ್ಜಾಯಗಳ ಮೆದ್ದು
ಕಬ್ಬಗಳಲವತರಿಪ ಗಣಪನೊಬ್ಬ

ಅಕ್ಷರಾಕ್ಷರಗಳನು ಹಾರದೊಲು ಪೋಣಿಸುತ
ಅಕ್ಷರವೆ ತಾನಾಗೆ ಗಣಗಳೊಡೆಯ
ತ್ರ್ಯಕ್ಷರದ ಬಂಧವನು ಸೃಷ್ಟಿಸೌಂದರ್ಯದಲಿ
ಸಾಕ್ಷರೀಕರಿಸದನೆ ರಸಗಳೊಡೆಯ

ಮಾತು ತಾ ಮೈಯಿಂದ ಕೊಳೆಯ ಕಳೆಯುವ ವೇಳೆ
ಮತಿಯಲನ್ಯರನೊಳಗೆ ಬಿಡದಂತೆ 
ಮಥಿಸಿ ಒಂದರ್ಥವನು ತಂದು ನಿಲ್ಲಿಸೆ ಹೊರಗೆ
ಪತಿಯಾದ ಮೌನಶಿವ ಬಂದನಂತೆÀ

ಒಳಗೆ ಬಿಡೆನೆಂದವನ ಕ್ಷಣದೊಳಗೆ ತಲೆ ಕಡಿಯೆ
ಅಳುವಿನೊಳಗಿಳಿದಂತೆ ಮಾತ್ರಕಾಲ
ಇಳೆಯಗಲ ಸಲಗದಲೆ ಕಡಿದು ಮತ್ತಿಡಲಲ್ಲಿ
ಹೊಳೆದಂತೆ ಗಣ ಋಷಿಗೆ ಸೂತ್ರಜಾಲ

ನಿಯತಛಂದೋ ಗತಿಯ ಗಣನಿಯಾಮಕನಾಗಿ
ಪೃಕೃತಿಕಾವ್ಯವ ಬರೆದ ಪ್ರಥಮ ಕವಿಯು
ಕವಿಗಣಕೆ ಕವಿಯಾಗಿ ಅಕ್ಷರದ ಛವಿಯಾಗೆ
ಗಣಪತಿಯು ಜಗದೇಕಕಾವ್ಯಋಷಿಯು

ಡಿ.ನಂಜುಂಡ
05/09/2016


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ