ಭಾನುವಾರ, ಸೆಪ್ಟೆಂಬರ್ 11, 2016

ನಾನು ನೀನೆ ನೀನು ನಾನೆ

ಕುಣಿದು ಕುಣಿದು ನಕ್ಕು ನಲಿದು
ದಣಿದುದಿನ್ನು ಸಾಕು
ಬೆಣ್ಣೆ ಕದ್ದು ಅಡಗಿ ಕುಳಿತು
ಮೆದ್ದುದೆಲ್ಲ ಸಾಕು

ಬಯಲಿನಲ್ಲಿ ಹರಹಿದೊಲವು
ತಾನೆ ಚೆಲುವೆಯಾಗಿ
ಸೃಷ್ಟಿಯಾಗೆ ಅವಳ ದೃಷ್ಟಿ
ನಿನಗೆ ಸೋಕಲಾಗಿ

ಮಲಗೆನು ನಾನೆಂಬ ಹಟವ
ತೊಟ್ಟು ಕುಣಿಯುತಿರುವೆ
ಅಣು ಅಣುಗಳ ಮರೆಯಲಡಗಿ
ಆಟವಾಡುತಿರುವೆ

ಸಾಕು ಮುದ್ದು ಬಾಲ ಬಾರೊ
ತೊಟ್ಟಿಲಲ್ಲಿ ಮಲಗು
ಕನಸ ಕಂಡು ನೀನು ನಕ್ಕು
ಒಳಗ ಬೇಗ ಬೆಳಗು

ನೀನು ನಿದ್ದೆಗೈವ ತನಕ
ಲಾಲಿ ಹಾಡಿ ತೂಗೆ
ಪದಗಳೆಲ್ಲ ಮಲಗುವಾಗ
ನಿನ್ನೆಡೆ ನಾ ಬಾಗೆ
ನಾನು ನೀನೆ ನೀನು ನಾನೆ
ನಿನಗೆ ನಾನು ತಾಗೆ

ಡಿ. ನಂಜುಂಡ
11/09/2016

3 ಕಾಮೆಂಟ್‌ಗಳು:

 1. ಮಾಧವನೆಂದರೆ ಮತ್ತಿನ್ನಾರು
  ನಮ್ಮೊಳಗಡಗಿಹ ಯುಗಪುರುಷ
  ಲೀಲೆಯ ಮಾಡುವ ಮಗುವನು ಕಾಣಲು
  ಅದರೊಳು ಮೂಡುವ ಕೃಷ್ಣಾಕ್ಷ

  ಮಲಗಿಹ ಕೊಬ್ಬಿಹ ಚಿಂತನೆಯೆನ್ನುವ
  ಗೋವರ್ಧನವನು ಮೇಲೆತ್ತಿ
  ಮನದಲಿ ಕ್ರಾಂತಿಯ ಹಬ್ಬವ ಮಾಡಿಸಿ
  ನಗುವನು ಹೂಮೊಗ ಮೇಲೆತ್ತಿ

  ಮನೆಯಲಿ ಮಲಗಿಹ ಪ್ರತಿ ಮಗುವಿನಲೂ
  ಮೂಡುವ ತುಂಟನು ಆಗಾಗ
  ಕೀಟಲೆ ಮಾಡುವ ಮಗುವನು ಮಲಗಿಸೆ
  ಸುಮ್ಮನಾಗುವನು ಬಲುಬೇಗ

  ಪ್ರತ್ಯುತ್ತರಅಳಿಸಿ
 2. ಮಾಧವನೆಂದರೆ ಮತ್ತಿನ್ನಾರು
  ನಮ್ಮೊಳಗಡಗಿಹ ಯುಗಪುರುಷ
  ಲೀಲೆಯ ಮಾಡುವ ಮಗುವನು ಕಾಣಲು
  ಅದರೊಳು ಮೂಡುವ ಕೃಷ್ಣಾಕ್ಷ

  ಮಲಗಿಹ ಕೊಬ್ಬಿಹ ಚಿಂತನೆಯೆನ್ನುವ
  ಗೋವರ್ಧನವನು ಮೇಲೆತ್ತಿ
  ಮನದಲಿ ಕ್ರಾಂತಿಯ ಹಬ್ಬವ ಮಾಡಿಸಿ
  ನಗುವನು ಹೂಮೊಗ ಮೇಲೆತ್ತಿ

  ಮನೆಯಲಿ ಮಲಗಿಹ ಪ್ರತಿ ಮಗುವಿನಲೂ
  ಮೂಡುವ ತುಂಟನು ಆಗಾಗ
  ಕೀಟಲೆ ಮಾಡುವ ಮಗುವನು ಮಲಗಿಸೆ
  ಸುಮ್ಮನಾಗುವನು ಬಲುಬೇಗ

  ಪ್ರತ್ಯುತ್ತರಅಳಿಸಿ
 3. ಪ್ರತಿಗವನದ ಮೂಲಕ ಪ್ರತಿಕ್ರಿಯಿಸಿದ ನಿಮಗೆ ಧನ್ಯವಾದಗಳು ವಿಶ್ವನಾಥ್

  ಪ್ರತ್ಯುತ್ತರಅಳಿಸಿ