ಸೋಮವಾರ, ಡಿಸೆಂಬರ್ 29, 2014

ಕಾನನ

ಸುಂದರ ಮಾನಸವೀ ಪ್ರಕೃತಿ
ಅನುಸಂಧಾನದ ಸಂಪ್ರೀತಿ
ಸುರನಂದನಸಮ ವನಮಂದಿರದೊಳು
ಮಹದಾನಂದದ ಸಂಕ್ರಾಂತಿ

ಗಿರಿಮೂಲದಿ ಜಲಸಂಕಲನ
ಜಲಚರಚಲನೆಯ ಸಂವಹನ
ವನಕವಿಗಳ ರಸಗವಿತಾವಾಚನ
ವ್ಯೋಮಾಂತರತಮ ನಿರ್ವಚನ

ತರುತಲದಲಿ ತರಗೆಲೆ ಆಚ್ಛಾದನ
ವನಚರಗಳ ಪಥಸಂಚಲನ
ವರ್ಷಾವರ್ತನ ಋತುಸಂಕೀರ್ತನ
ಮೋದಾಮೋದದ ಪ್ರತಿಫಲನ

ನಯನಮನೋಹರ ಕಾನನದರ್ಶನÀ
ಛಂದೋಬಂಧಕೆ ಆಹ್ವಾನ
ವರ್ಣಾಕರ್ಷಣ ಅರ್ಥಾರೋಹಣ
ಸರಿಗಮಪದಸ್ವರ ಸಂಚರಣ
ಡಿ.ನಂಜುಂಡ

29/12/2014

ಶನಿವಾರ, ಡಿಸೆಂಬರ್ 27, 2014

ಬೆರಗು

ಮನ ಕುಣಿವುದು ಮುಂಜಾನೆಯ ಮುಸುಗಿಗೆ
ಕಣ್ ತಣಿವುದು ಪ್ರತಿ ಸಂಜೆಯ ಕೆಂಪಿಗೆ
ಬೆರಗಾಗುವುದೀ ಸೃಷ್ಟಿಯ ಬೆಡಗಿಗೆ
ಛಂದಃಪ್ರಾಸವಿರಡಿಗಡಿಗೆ

ಸುಳಿದಾಡುವ ತಂಗಾಳಿಯ ಸ್ಪರ್ಶಕೆ
ಹರಿಯುವ ಹೊನಲಿನ ಬೆಳ್ನೊರೆ ನಗುವಿಗೆ
ಗುಡುಗಿಗೆ ಸಿಡಿಲಿಗೆ ಕಡಲಿನ ಮೊರೆತಕೆ
ವನಖಗಜಲಚರ ನಿಃಸ್ವನಕೆ

ಕುಸುಮಿತ ತರುಗಳ ಬಹುಫಲಭಾರಕೆ
ಗಿರಿಕಟಿಯಟವಿಯ ಮೈಕೈಮಾಟಕೆ
ಸರಸರ ಚಿಮ್ಮುವ ಚಿಗುರಗಳೋಟಕೆ
ಚಂದನಚರ್ಚಿತ ಘಮಘಮಕೆ

ಅನ್ನವ ಬೆಳೆಯುವ ಬುವಿ ತಾಯ್ತನಕೆ
ಚಿನ್ನವ ನೀಡುವ ಗಣಿನಿಸ್ಸ್ವಾರ್ಥಕೆ
ಕಾಣದ ಕೈಗಳ ಬಳೆಗಳ ನಾದಕೆ
ಶ್ರುತಿಲಯವಿರೆ ಪ್ರತಿಕಣಕಣಕೆ

ಡಿ.ನಂಜುಂಡ

27/12/2014

ಶುಕ್ರವಾರ, ಡಿಸೆಂಬರ್ 26, 2014

ವಿಫಲ

ಚಪ್ಪಲಿ ಹರಿಯಿತು ಶೂ ಗಮ್ ಬಿಟ್ಟಿತು
ನನ್ನಾವೇಗದ ನಡಿಗೆಯಲಿ
ಶರ್ಟ್ ಕೊಳೆಯಾಯಿತು ಪ್ಯಾಂಟ್ ಕಲೆಯಾಯಿತು
ಮೈಕೈಕಾಲಿನ ಬೆವರಿನಲಿ

ಹೊಟ್ಟೆಯ ಹೊರ ಸುತ್ತನು ಬಳಸಿಹ
ಕೊಬ್ಬತ್ತಿತ್ತಲುಗಲೆ ಇಲ್ಲ
ಮೀಟರುಗಟ್ಟಲೆ ಬಟ್ಟೆಗಳೆಲ್ಲವು
ಉಬ್ಬನು ಮರೆಮಾಚಲೆ ಇಲ್ಲ

ಸವಿಜೇನಿನ ಕೊಡ ಬರಿದಾಯ್ತು
ಲಿಂಬೆಯ ಮರವದು ಬೋಳಾಯ್ತು
ಬಿಸಿನೀರಿನ ಜೊತೆ ಎರಡೂ ಸೇರಿಸಿ
ಕುಡಿದಾ ಶ್ರಮವೂ ವೇಸ್ಟಾಯ್ತು

ಪ್ರಾಣಾಯಾಮದ ವೇಗೋತ್ಕರ್ಷಕೆ
ಮೂಗೊಳ ಹನಿಗಳು ಬರಿದಾಯ್ತು
ಧ್ಯಾನದೊಳೆದ್ದಿಹ ಒಳಮೈಯುಷ್ಣಕೆ
ಜೀರ್ಣದ ರಸ ದುಪ್ಪಟ್ಟಾಯ್ತು

ಮಾಡಿದ ಅಡುಗೆಗಳೆಲ್ಲವು ಖಾಲಿ
ಎದ್ದಿತು ತಿನ್ನುವ ಹಳೆಚಾಳಿ
ಉಬ್ಬಿದ ಹೊಟ್ಟೆಯ ಕೆಳಗಿಳಿಸುವ ಬಗೆ
ಇನ್ನೇನಿದೆಯೋ ನೀವ್ ಹೇಳಿ

ಡಿ.ನಂಜುಂಡ
26/12/2014



ಮಂಗಳವಾರ, ಡಿಸೆಂಬರ್ 23, 2014

ಬೇಲಿ

ಎದೆಯೊಳಗೆ ಹೊಸ ಉಸಿರ ತುಂಬಿ ಪುಳಕಿಸಿ ಒಮ್ಮೆ
ಕೈ ಬೀಸಿ ಕರೆಯುತಿದೆ ಹಸಿರಾದ ಬೇಲಿ 
ಒಳಗಡಿಯನಿಡುವಾಗ ತಲೆಯ ಸವರುತ ಹರಸಿ
ಹಾಸುತಿದೆ ಮೃದುವಾದ ಎಲೆದರಗ ವಲ್ಲಿ
ಡಿ.ನಂಜುಂಡ
23/12/2014

ಸೋಮವಾರ, ಡಿಸೆಂಬರ್ 15, 2014

ಪದ

ಪದಕೋಶದಿಂದ ಪ್ರತಿಯೊಂದು ಪದವೂ
ಜಿಗಿದೆದ್ದು ಬರಲಿ ಬೇಗ
ಉಸಿರಿನೊಳು ಚಲಿಸಿ ಉಲ್ಲಾಸವಿರಿಸಿ
ತರಲಿ ಬಾನ್ತುಂಬ ರಾಗ

ಕನ್ನಡದ ಮಣ್ಣ ಸಾರವನು ಸೆಳೆದು
ತೆನೆಯಾದ ಪದಗಳೆಲ್ಲ
ಅನ್ನದೊಳು ಬಂದು ಗುನುಗುನಿಸಿ ನಿಂದು
ಹಾಡಾಗಿ ತೇಲಲೆಲ್ಲ

ಬಾನ ನೀಲ ಬನದ ನವಿಲ
ಚಿತ್ತಾರಗಳನು ತಂದು
ಸುರಿಯುತಿಹ ಮಳೆಯ ಹರಿಯುತಿಹ ಹೊನಲ
ಒಲವಿನೊಳು ಮುಳುಗಿ ಬಂದು

ಭಾವದೊಳ ಬಣ್ಣ ಒಳಗಣ್ಣ ತುಂಬಿ
ಶಿವಬಿಂಬವಾಗಿ ನಿಲಲಿ
ಸಾವಿಲ್ಲದಂಥ ಪದವಾಗಿ ನಿಂತು
ಸಮರಸವ ಸುರಿಸುತಿರಲಿ

ಡಿ.ನಂಜುಂಡ

15/12/2014

ಭಾನುವಾರ, ಡಿಸೆಂಬರ್ 14, 2014

ಕಾಯಕ

ಕಡಲೆ ಹಿಟ್ಟಿಗೆ ನೀರನು ಬೆರೆಸಿ
ಉಪ್ಪು ಖಾರದ ಜೊತೆಯಲಿ ಕಲೆಸಿ
ಚಿಟಿಕೆ ಸೋಡವನದರೊಳಗುದುರಿಸಿ
ಹಸಿಮೆಣಸುಗಳನದ್ದಿದಳು

ತೊಟ್ಟನು ಹಿಡಿದು ಮೇಲಕೆ ಎತ್ತಿ
ಕುದಿಯುವ ಎಣ್ಣೆಯ ಒಳಗಡೆಗೊತ್ತಿ
ಸಟ್ಟಗವನ್ನು ಸೊಟ್ಟಗೆ ತಿರುಗಿಸಿ
ಕಡೆಗೀಕಡೆಗಟ್ಟಿದಳು

ಘಮ್ಮನೆ ಪರಿಮಳ ಬಂದೊಡನೆ
ಹದದುರಿಯೊಳಗವು ಬೆಂದೊಡನೆ
ಬಾಣಲೆ ಹೊರಗಡೆ ತಂದಿರಿಸಿದಳು
ನಮ್ಮೆಡೆಗೊಮ್ಮೆ ನೋಡಿದಳು

ಒಂದು ಎರಡು ಮೂರು ನಾಲ್ಕು
ಐದಾರೆನ್ನುತಲೆಣಿಸಿದಳು
ಕೊಟ್ಟೆಯೊಳಿಟ್ಟು ಕಟ್ಟಿದಳು
ಚಾಚಿದ ಕೈಮೇಲಿರಿಸಿದಳು

ನಾಲಗೆ ಚಪಲವ ಉಳ್ಳವರಿರಲಿ
ತಿನ್ನಲಿ ಬೋಂಡವ ದಿನದಿನವೂ
ಇಲ್ಲವರೆಲ್ಲರಿಗನ್ನವನೀಯಲಿ
ಬೋಂಡವ ಕರಿಯುವ ಕಾಯಕವು

ಡಿ.ನಂಜುಂಡ
14/12/2014

ಯಾರವನು!?

ಆವನೋ ಬರೆಯುವನು ಪರಿಪರಿಯ ಕವಿತೆಗಳ
ಭಾವಕ್ಕೆ ತಕ್ಕ ಪದವಿನ್ಯಾಸವಿರಿಸಿ
ಆವನೋ ಕುಣಿಯುವನು ಹೃದಯನವರಂಗದಲಿ
ಜೀವತಾಳವ ತಕ್ಕ ಮೇಳದೊಳಗಿರಿಸಿ

ಕನಸುಗಳ ಲೋಕದಲಿ ಅನುದಿನವು ಅಭಿನಯಿಸಿ
ಮನದಾಳದತಿಯಾಸೆಗಳನೆಲ್ಲ ತಣಿಸಿ
ಬಾನಗಲ ಬಿತ್ತರದ ತಾನನವನೈತಂದು
ದನಿಯಾಳದಲ್ಲಿರಿಸಿ ಕಣಕಣದಿ ಗುಣಿಸಿ

ಕಾಗೆ ಕೋಗಿಲೆ ಗೂಬೆ ಗುಬ್ಬಚ್ಚಿ ಗೂಡುಗಳ
ರಾಗರಂಜಿತ ಕೂಗುಗಳನು ಸಂಕಲಿಸಿ 
ಬಗೆಬಗೆಯ ಮಾತುಗಳ ಮಾಧುರ್ಯದರಳಾಗಿ
ಮೊಗವೇರಿ ಬರುತಿಹನು ನಗೆಹೂವ ಮುಡಿಸಿ

ಡಿ.ನಂಜುಂಡ
14/12/2014