ಸೋಮವಾರ, ಡಿಸೆಂಬರ್ 15, 2014

ಪದ

ಪದಕೋಶದಿಂದ ಪ್ರತಿಯೊಂದು ಪದವೂ
ಜಿಗಿದೆದ್ದು ಬರಲಿ ಬೇಗ
ಉಸಿರಿನೊಳು ಚಲಿಸಿ ಉಲ್ಲಾಸವಿರಿಸಿ
ತರಲಿ ಬಾನ್ತುಂಬ ರಾಗ

ಕನ್ನಡದ ಮಣ್ಣ ಸಾರವನು ಸೆಳೆದು
ತೆನೆಯಾದ ಪದಗಳೆಲ್ಲ
ಅನ್ನದೊಳು ಬಂದು ಗುನುಗುನಿಸಿ ನಿಂದು
ಹಾಡಾಗಿ ತೇಲಲೆಲ್ಲ

ಬಾನ ನೀಲ ಬನದ ನವಿಲ
ಚಿತ್ತಾರಗಳನು ತಂದು
ಸುರಿಯುತಿಹ ಮಳೆಯ ಹರಿಯುತಿಹ ಹೊನಲ
ಒಲವಿನೊಳು ಮುಳುಗಿ ಬಂದು

ಭಾವದೊಳ ಬಣ್ಣ ಒಳಗಣ್ಣ ತುಂಬಿ
ಶಿವಬಿಂಬವಾಗಿ ನಿಲಲಿ
ಸಾವಿಲ್ಲದಂಥ ಪದವಾಗಿ ನಿಂತು
ಸಮರಸವ ಸುರಿಸುತಿರಲಿ

ಡಿ.ನಂಜುಂಡ

15/12/2014

1 ಕಾಮೆಂಟ್‌:

  1. 'ಭಾವದೊಳ ಬಣ್ಣ ಒಳಗಣ್ಣ ತುಂಬಿ
    ಶಿವಬಿಂಬವಾಗಿ ನಿಲಲಿ'
    ಇಂತಹ ಸದಾಶಯವೇ ಮುನ್ನಡೆಸಲಿ ನಮ್ಮ

    ಪ್ರತ್ಯುತ್ತರಅಳಿಸಿ