ಶನಿವಾರ, ಡಿಸೆಂಬರ್ 27, 2014

ಬೆರಗು

ಮನ ಕುಣಿವುದು ಮುಂಜಾನೆಯ ಮುಸುಗಿಗೆ
ಕಣ್ ತಣಿವುದು ಪ್ರತಿ ಸಂಜೆಯ ಕೆಂಪಿಗೆ
ಬೆರಗಾಗುವುದೀ ಸೃಷ್ಟಿಯ ಬೆಡಗಿಗೆ
ಛಂದಃಪ್ರಾಸವಿರಡಿಗಡಿಗೆ

ಸುಳಿದಾಡುವ ತಂಗಾಳಿಯ ಸ್ಪರ್ಶಕೆ
ಹರಿಯುವ ಹೊನಲಿನ ಬೆಳ್ನೊರೆ ನಗುವಿಗೆ
ಗುಡುಗಿಗೆ ಸಿಡಿಲಿಗೆ ಕಡಲಿನ ಮೊರೆತಕೆ
ವನಖಗಜಲಚರ ನಿಃಸ್ವನಕೆ

ಕುಸುಮಿತ ತರುಗಳ ಬಹುಫಲಭಾರಕೆ
ಗಿರಿಕಟಿಯಟವಿಯ ಮೈಕೈಮಾಟಕೆ
ಸರಸರ ಚಿಮ್ಮುವ ಚಿಗುರಗಳೋಟಕೆ
ಚಂದನಚರ್ಚಿತ ಘಮಘಮಕೆ

ಅನ್ನವ ಬೆಳೆಯುವ ಬುವಿ ತಾಯ್ತನಕೆ
ಚಿನ್ನವ ನೀಡುವ ಗಣಿನಿಸ್ಸ್ವಾರ್ಥಕೆ
ಕಾಣದ ಕೈಗಳ ಬಳೆಗಳ ನಾದಕೆ
ಶ್ರುತಿಲಯವಿರೆ ಪ್ರತಿಕಣಕಣಕೆ

ಡಿ.ನಂಜುಂಡ

27/12/2014

2 ಕಾಮೆಂಟ್‌ಗಳು: