ಶುಕ್ರವಾರ, ಡಿಸೆಂಬರ್ 26, 2014

ವಿಫಲ

ಚಪ್ಪಲಿ ಹರಿಯಿತು ಶೂ ಗಮ್ ಬಿಟ್ಟಿತು
ನನ್ನಾವೇಗದ ನಡಿಗೆಯಲಿ
ಶರ್ಟ್ ಕೊಳೆಯಾಯಿತು ಪ್ಯಾಂಟ್ ಕಲೆಯಾಯಿತು
ಮೈಕೈಕಾಲಿನ ಬೆವರಿನಲಿ

ಹೊಟ್ಟೆಯ ಹೊರ ಸುತ್ತನು ಬಳಸಿಹ
ಕೊಬ್ಬತ್ತಿತ್ತಲುಗಲೆ ಇಲ್ಲ
ಮೀಟರುಗಟ್ಟಲೆ ಬಟ್ಟೆಗಳೆಲ್ಲವು
ಉಬ್ಬನು ಮರೆಮಾಚಲೆ ಇಲ್ಲ

ಸವಿಜೇನಿನ ಕೊಡ ಬರಿದಾಯ್ತು
ಲಿಂಬೆಯ ಮರವದು ಬೋಳಾಯ್ತು
ಬಿಸಿನೀರಿನ ಜೊತೆ ಎರಡೂ ಸೇರಿಸಿ
ಕುಡಿದಾ ಶ್ರಮವೂ ವೇಸ್ಟಾಯ್ತು

ಪ್ರಾಣಾಯಾಮದ ವೇಗೋತ್ಕರ್ಷಕೆ
ಮೂಗೊಳ ಹನಿಗಳು ಬರಿದಾಯ್ತು
ಧ್ಯಾನದೊಳೆದ್ದಿಹ ಒಳಮೈಯುಷ್ಣಕೆ
ಜೀರ್ಣದ ರಸ ದುಪ್ಪಟ್ಟಾಯ್ತು

ಮಾಡಿದ ಅಡುಗೆಗಳೆಲ್ಲವು ಖಾಲಿ
ಎದ್ದಿತು ತಿನ್ನುವ ಹಳೆಚಾಳಿ
ಉಬ್ಬಿದ ಹೊಟ್ಟೆಯ ಕೆಳಗಿಳಿಸುವ ಬಗೆ
ಇನ್ನೇನಿದೆಯೋ ನೀವ್ ಹೇಳಿ

ಡಿ.ನಂಜುಂಡ
26/12/20141 ಕಾಮೆಂಟ್‌: