ಭಾನುವಾರ, ಡಿಸೆಂಬರ್ 14, 2014

ಕಾಯಕ

ಕಡಲೆ ಹಿಟ್ಟಿಗೆ ನೀರನು ಬೆರೆಸಿ
ಉಪ್ಪು ಖಾರದ ಜೊತೆಯಲಿ ಕಲೆಸಿ
ಚಿಟಿಕೆ ಸೋಡವನದರೊಳಗುದುರಿಸಿ
ಹಸಿಮೆಣಸುಗಳನದ್ದಿದಳು

ತೊಟ್ಟನು ಹಿಡಿದು ಮೇಲಕೆ ಎತ್ತಿ
ಕುದಿಯುವ ಎಣ್ಣೆಯ ಒಳಗಡೆಗೊತ್ತಿ
ಸಟ್ಟಗವನ್ನು ಸೊಟ್ಟಗೆ ತಿರುಗಿಸಿ
ಕಡೆಗೀಕಡೆಗಟ್ಟಿದಳು

ಘಮ್ಮನೆ ಪರಿಮಳ ಬಂದೊಡನೆ
ಹದದುರಿಯೊಳಗವು ಬೆಂದೊಡನೆ
ಬಾಣಲೆ ಹೊರಗಡೆ ತಂದಿರಿಸಿದಳು
ನಮ್ಮೆಡೆಗೊಮ್ಮೆ ನೋಡಿದಳು

ಒಂದು ಎರಡು ಮೂರು ನಾಲ್ಕು
ಐದಾರೆನ್ನುತಲೆಣಿಸಿದಳು
ಕೊಟ್ಟೆಯೊಳಿಟ್ಟು ಕಟ್ಟಿದಳು
ಚಾಚಿದ ಕೈಮೇಲಿರಿಸಿದಳು

ನಾಲಗೆ ಚಪಲವ ಉಳ್ಳವರಿರಲಿ
ತಿನ್ನಲಿ ಬೋಂಡವ ದಿನದಿನವೂ
ಇಲ್ಲವರೆಲ್ಲರಿಗನ್ನವನೀಯಲಿ
ಬೋಂಡವ ಕರಿಯುವ ಕಾಯಕವು

ಡಿ.ನಂಜುಂಡ
14/12/2014

1 ಕಾಮೆಂಟ್‌:

  1. ಅಸಲೀ ಕವಿ, ತನ್ನ ಗ್ರಹಿಕೆಗೆ ಸಿಕ್ಕ ಎಂತದೇ ವಸ್ತುವನ್ನೂ ಕವನವಾಗಿಸುವ ಕಲೆ ಕರಗತಮಾಡಿಕೊಳ್ಳಬೇಕು. ತಮ್ಮ ಗ್ರಹಿಕೆ ಮತ್ತದರ ಅನಾವರಣದಲ್ಲಿ ತೋರುವ ಸೂಕ್ಷ್ಮ ಕಲೆಗಾರಿಕೆಗೆ ಉಘೇ... ಉಘೇ...

    ಈವತ್ತ್ ರಾತ್ರಿ ಬೋಂಡಾ ಮೆಲ್ಲು ಉತ್ಸಾಹ..

    ಪ್ರತ್ಯುತ್ತರಅಳಿಸಿ