ಗುರುವಾರ, ಅಕ್ಟೋಬರ್ 31, 2013

ಹೊಳೆಯಲಿ ಜ್ಞಾನವು ದೀಪಾವಳಿಯಲಿ



ದೀಪವು ಬೆಳಗಲಿ ಹೃದಯದ ಸೊಡರಲಿ
ಪಾಪದ ಕತ್ತಲೆಯಳಿಸುತಲಿ.
ರೂಪಾಂತರಸಂಚಿತವಿಧವಿಧಕರ್ಮ-
ವಿಪಾಕದ ಕೊಳೆಯ ತೊಳೆಯುತಲಿ.

ಸತ್ಯದ ಬತ್ತಿಯ ಹೊಸೆಯುತ ಅನುದಿನ
ಪ್ರೀತಿಯ ಎಣ್ಣೆಯನೆರೆಯುತಲಿ.
ಹೊತ್ತಿಸಿ ಶ್ರದ್ಧಾಭಕ್ತಿಯ ಕಿಡಿಯಲಿ
ತತ್ತ್ವಜ್ಯೋತಿಯ ಬೆಳಗುತಲಿ.

ಆತ್ಮಾರಾಮಗೆ ಆರತಿಯೆತ್ತುತ
ನತಮನಭಾವದಿ ಭಜಿಸುತಲಿ
ಸ್ವಾತ್ಮಾನಂದದಿ ನಿತ್ಯವು ನೆಲೆಸಲಿ
ಸತತವು ಸೃಷ್ಟಿಯ ಸ್ತುತಿಸುತಲಿ.

ಬೆಳಕನು ಚೆಲ್ಲುವ ಹಾರ್ದಿಕ ಹಣತೆಯು
ಸಾಲಲಿ ನಿಲ್ಲಲಿ ಸಮತೆಯಲಿ.
ಹೊಳೆಯಲಿ ಜ್ಞಾನವು ದೀಪಾವಳಿಯಲಿ
ಬಾಳಿನ ಪಥವನು ತೋರಿಸಲಿ.

ಡಿ.ನಂಜುಂಡ
31/10/2013

ಬುಧವಾರ, ಅಕ್ಟೋಬರ್ 30, 2013

ಕನ್ನಡಾಂಬೆಯು ಎದ್ದು ನಾಲಗೆಗೆ ಬರಲಿ



ಆನನದಿ ಕುಣಿದಾಡು ಮೌನಘನಚೇತನವೆ!
ಪ್ರಾಣದೊಳು ಪದವಿರಿಸಿ ಮನವ ಸಂಸ್ಕರಿಸಿ.
ಅಣುರೇಣುತೃಣಕಾಷ್ಠವನುರಣಿಸಿ ಬಾ ಎದೆಗೆ
ಝಣಝಣಿಪ ಓಂಕಾರಬೀಜವಂಕುರಿಸಿ.

ಧ್ಯಾನಾಗ್ನಿಕುಂಡದಲಿ ಜ್ಞಾನಾಗ್ನಿ ಪ್ರಜ್ವಲಿಸಿ
ಅನವದ್ಯ ಭಾವಗಳು ಹವಿಯಾಗಿ ಸುಡಲಿ.
ಮೌನಭಾಂಡದ ಒಳಗೆ ಚೆನ್ನುಡಿಯ ರಸಪಿಡಿದು
ಕನ್ನಡಾಂಬೆಯು ಎದ್ದು ನಾಲಗೆಗೆ ಬರಲಿ.

ಹೃದಯ ಕಮಲದ ಒಳಗೆ ಮಧುರಹನಿಗಳು ತುಂಬಿ
ಪದಗರ್ಭದೊಳಹೊಕ್ಕು ಫಲವಾಗಿ ಬರಲಿ.
ಮೊದಲ ನುಡಿಗಳ ತೊದಲು ಮೃದುಲತದ್ಭವವಾಗಿ
ವದನವರಳಿಸಿ ಮುದದಿ ಹೊರಹೊಮ್ಮುತಿರಲಿ.

ಡಿ.ನಂಜುಂಡ
30/10/2013

ಗುರುವಾರ, ಅಕ್ಟೋಬರ್ 24, 2013

ಡಮರುಗದ ನುಡಿಯಂತೆ ಕೇಳಾ



ಗಡಿಗೆಯೊಳು ಆಡುತಿಹ ಪಡಿಯಕ್ಕಿ ನೋಡ
ಅಡಿಗಡಿಗೆ ಡಮರುಗದ ನುಡಿಯಂತೆ ಕೇಳಾ

ಗುಡಿಯ ನಡುವಿನ ಕಲ್ಲ ಬಿಡದೆಯರ್ಚಿಸಿ ನಿತ್ಯ
ಬೇಡುವೆವು ವರಗಳನು ಮೂಢರಂತೆ.
ಜೋಡೆತ್ತುಗಳ ಕಟ್ಟಿ ಹೂಡಿ ಹೊಲದಲಿ ಬಿತ್ತಿ
ಪಡಿಯಿತ್ತು ಪೊರೆವವನ ಕಡೆಗಣಿಸುತ.

ನೋಡಿ ಸಿರಿಗಳ ಹರಿಯ ಸಡಗರದಿ ಮಗಳಿತ್ತ
ಕಡಲಿನೊಡೆಯನು ಅಂದು ಮಥಿಸಿ ಮನದಿ.
ಕಡೆದು ಉದಿಸಿದ ವಿಷವ ಕುಡಿದಿಹನು ಆ ಹರನು
ಬೇಡನಾಗಿಹನೆಂದು ಕೊಟ್ಟನವಗೆ.

ಅಡಿಕೆಸೋಗೆಯ ಮಾಡು ತಡಿಕೆಯಂದವ ನೋಡು
ಗುಡಿಸಲೊಳಗಿನ ಬದುಕ ಇಣುಕಿಯಿಣುಕಿ.
ಬಡಶಿವನು ನಿಂತಿಹನು ಜಡಿಮಳೆಗೆ ತಲೆಕೊಟ್ಟು
ಹಿಡಿಯುತಲಿ ಗಂಗೆಯನು ಕೆಂಜಡೆಯಲಿ.

ಮಡಿಯುಟ್ಟು ಪಠಿಸಿದೊಡೆ ಬಡಬಡನೆ ಮಂತ್ರಗಳ
ಸುಡುವ ಒಡಲಿನ ಕಿಡಿಯು ತಣಿಯದೆಂದೂ.
ಕೊಡುಗೈಯ ದೇವತೆಯ ಬೇಡೋಣ ಪೊಡಮೊಟ್ಟು
ಎಡಬಿಡದೆ ಕೊಡುವವನು ಕಾಳುಕಡಿಯ.

ಡಿ.ನಂಜುಂಡ
25/10/2013

ಬುಧವಾರ, ಅಕ್ಟೋಬರ್ 23, 2013

ಸವತಿಮತ್ಸರ




ವನಶಿವೆಯು ತಬ್ಬಿಹಳು ತನ್ನಿನಿಯ ಗಿರಿಶಿವನ
ಹನಿಕರಿಪ ಗಂಗೆಯನು ದಬ್ಬಿ ದಬ್ಬಿ.
ಕಣಿವೆಯಾಳಕೆ ಬಿದ್ದ  ಹೊನಲ ರಾಣಿಯು ಎದ್ದು
ಮೌನಶರಧಿಯ ಕಡೆಗೆ ಓಡುತಿಹಳು.

ಕಡಲ ಒಡೆಯನ ಕೂಡಿ ಒಡಲ ಕಿಡಿಯನು ಕಕ್ಕಿ
ಮೋಡದಲಿ ತಾ ಬೆರೆತು ಗುಡುಗಿ ನಿಂದು.
ಪಡುವಣದ ಬಾನಿನಲಿ ಸಿಡುಕುತಲಿ ಕಪ್ಪೇರಿ
ಬಡಬಡನೆ ಸುರಿಮಳೆಯನುಗುಳುತಿಹಳು.

ಬಿರುಗಾಳಿಯೊಡಗೂಡಿ ತರುಬಾಹುಗಳ ಮುರಿದು
ಎರಚಿಹಳು ಬಿರುನೀರ ಸವತಿಯೆಡೆಗೆ.
ಬೇರುಗಳು ಅಲುಗುತಿರೆ ಕರವೆತ್ತಿ ಶಂಕರಿಯು
ಶರಣು ತಾ ಶರಣೆಂದು ಕೂಗುತಿಹಳು.

ದೀನತೆಯ ದನಿ ಕೇಳಿ ಕರ ಪಿಡಿದು ಹನಿಯಿರಿಸಿ
ಹರಸಿದಳು ಪ್ರೀತಿಯಲಿ ಬನಸವತಿಯ.
ಪರಶಿವನ ನೀ ಬಳಸು ಗಿರಿಶಿರದಿ ನಾನಿರುವೆ
ಮರೆಯೋಣ ಮತ್ಸರವ ಎಂದಳವಳು.

ಶಿವೆಗಂಗೆಯರ ನಡುವೆ ಸವತಿಯಂತರವಳಿಯೆ
ಬುವಿಯೆಲ್ಲ ತಂಪಾಗಿ ನಗುತಲಿಹುದು.
ಅವಳಿರದೆ ಇವಳಿಲ್ಲ ಇವಳಿರದೆ ಅವಳಿಲ್ಲ
ಶಿವನೊಡನೆ ಇಬ್ಬರೂ ಬಾಳುತಿಹರು.

ಡಿ.ನಂಜುಂಡ
23/10/2013