ಭಾನುವಾರ, ಅಕ್ಟೋಬರ್ 20, 2013

ಕನ್ನಡತಿ ನಿಂತಿಹುದ ನೋಡಬನ್ನಿ!



ಕರುನಾಡ ಮಣ್ಣ ಸಾರವನು ಹೀರಿ
ಅರಳುತಿರೆ ಕಾವ್ಯವೋಡೋಡಿ ಬನ್ನಿ.
ವರತುಂಗೆ ಹರಿವ ಬಲದಂಡೆ ಬನದ
ಗಿರಿತಳದ ತಂಪ ತಂಗುದಾಣದಲಿ.

ಮಲೆನಾಡ ಕಣಿವೆಯೊಳಗೊಂದು ಕೂಗು
ಕೇಳಿಬರುತಲಿರೆ ಅಲ್ಲಲ್ಲಿ ನಿಲ್ಲಿ.
ಕಲ್ಲರಳುತಿಹುದು ಕವಿಶೈಲದಲ್ಲಿ
ಸೊಲ್ಲುಸೊಲ್ಲುಗಳ ಮೆಲುದನಿಯ ಕೇಳಿ.

ಕವಿಕುವೆಂಪುವಿನ ಬೀಡಿಹುದು ಅಲ್ಲಿ
ಅವಿತಿರಲು ವಿಶ್ವಮಾನವತೆ ಸಾರ.
ಛವಿಯೆಲ್ಲ ಕೂಡಿ ಸೃಷ್ಟಿಯಲಿ ಬೆರೆಯೆ
ದೇವಿ ಕನ್ನಡತಿ ನಿಂತಿಹುದ ನೋಡಿ.

ಕಣ್ ತೆರೆದು ನೋಡೆ ಕಾಣುವುದು ಗುಡಿಯು
ಕಣ್ ಪೊರೆಯ ಕಳಚಿದೊಡೆ ಗೋಡೆಯಿಲ್ಲ.
ಕನ್ನಡದ ಕವಿಯು ಕೇತನವ ತೊರೆಯೆ
ಚೆನ್ನುಡಿಯು ಹರಹಿ ಬಯಲಾಯಿತೆಲ್ಲ.

ಕೂಡೋಣ ಬನ್ನಿ ಹರಗೋಣ ಮಣ್ಣ
ನಾಡ ಉತ್ಸವದ ಉಲ್ಲಾಸದಲ್ಲಿ.
ನುಡಿಹೂವ ಕುಡಿದು ನಡೆಯೋಣ ಮುಂದೆ
ಹಾಡಿ ಹಾರಾಡಿ ತಾಯ್ನಾಡಿನಲ್ಲಿ.

ಡಿ.ನಂಜುಂಡ
20/10/2013

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ