ಏನು ಮಾಡುತಲಿರುವೆ? ಬಾ ಇಲ್ಲಿ ಒಂದು ಕ್ಷಣ,
ಕನ್ನಡಕ ಹುಡುಕಿಕೊಡು, ಹೊತ್ತಾಯಿತೆನಗೆ.
ಮೇಜಿನಾ ಮೇಲಿತ್ತು ಸರಿಯಾಗಿ ನೆನಪುಂಟು
ಹೋಯಿತೆಲ್ಲಿಗೆ ಈಗ?, ಹೇಳು ಬೇಗ.
ಹುಡುಕೊಳ್ಳಿರಿ ನೀವೆ, ಕೆಲಸವಿದೆ ನನಗಿಲ್ಲಿ
ಕಸಗುಡಿಸಿಕೊಡಿ ಬನ್ನಿ, ಸುಸ್ತಾಯಿತೆನಗೆ.
ಎಲ್ಲೆಲ್ಲೋ ತೆಗೆದಿಟ್ಟು ನನ್ನನ್ನು ಕೇಳಿದರೆ
ಹೇಗೆ ಹುಡುಕಲಿ ನಾನು ಕೆಲಸ ಬಿಟ್ಟು?
ಕನ್ನಡಕ ಇಲ್ಲದೆಯೇ ಹುಡುಕುವಾ ಪರಿ ಹೇಗೆ?
ಗೊತ್ತಿದ್ದೂ ಹೀಗೇಕೆ ಬಾಯ್ಮಾಡುತಿರುವೆ?
ಕಸವು ಕಾಣದ ನೆಲದಿ ಗುಡಿಸುವುದು ಏನನ್ನು?
ಹೇಳು ಬಾ ಬಳಿಯಿಲ್ಲಿ, ಹುಡುಕು ಬಾರೆ.
ನಿಮ್ಮ ಮರೆವನು ನೋಡಿ ನಗೆಯು ಬರುತಿದೆ ಎನಗೆ
ಹಾಕಿಕೊಂಡಿರುವಿರಲ್ಲ ಕನ್ನಡಕವನ್ನು!
ಫೇಸ್ ಬುಕ್ಕು ನೋಡುತ್ತ ಹೊತ್ತಾಯಿತೆನ್ನುತ್ತ
ಹುಚ್ಚು ಹುಚ್ಚಿನ ಹಾಗೆ ಆಡಬೇಡಿ.
ಕನ್ನಡಕ ಕಳೆದಿಲ್ಲ, ಕಳೆದದ್ದು ಹೊಸಪೆನ್ನು
ನಾ ನಿನ್ನೆ ಕೊಂಡಿದ್ದು ಹುಡುಕಿಕೊಡು ಬಾರೆ.
ನಾಲಗೆಯು ತಡವರಿಸಿ ಏನೇನೋ ಒದರಿದೆನು
ನಗಬೇಡ ಗಹಗಹಿಸಿ ನೀನು ಹಾಗೆ.
ಸಿಲ್ಲಿಲಲ್ಲಿಯ ಕಥೆಯ ವಿಠಲ ಡಾಕ್ಟರ ಹಾಗೆ
ನೀವೊಬ್ಬ ಲೆಕ್ಚರರು ಜೋಕರಿನ ಹಾಗೆ.
ಜೇಬಲ್ಲೆ ಪೆನ್ನುಂಟು!, ಹುಡುಕಿಕೊಡು ಎನ್ನುವಿರಿ
ನಗಬರದೆ ಇನ್ನೇನು ಪೆದ್ದು ನೀವು.
ಬೆಳಗಾಗಿ ನಾನೆದ್ದು ಕಾಫಿಯನು ಕುಡಿದಿಲ್ಲ
ಹಾಗಾಗಿ ನಾನಿಂದು ಕೋಡಂಗಿಯಾದೆ.
ಕಾಲೇಜು ಬೆಲ್ಲಾಗಿ ಹುಡುಗರೆಲ್ಲರು ಬಂದು
ಕಾಯುತಿರಬಹುದೀಗ ಅಲ್ಲವೇನೆ?
ನೀವೊಂದು ಮರೆಗುಳಿಯ ಪ್ರೊಫೆಸರ್ರು ಕಣ್ರೀ
ದಸರಾದ ರಜೆಯನ್ನು ಮರೆತಿರುವುದೇಕೆ?
ನೀವೆ ಕಾಫಿಯ ಮಾಡಿ, ಕುಡಿದು ಪಾತ್ರೆಯ ತೊಳೆದು
ರೊಟ್ಟಿ ಹಿಟ್ಟನು ಕಲೆಸಿ ಕೊಟ್ಟಿರಲ್ಲ!
ಚಾಳೈಸಿದರೆ ನೀನು ಪದ್ಯ ಬರೆವೆನು ನೋಡು
ನಕ್ಕು ಬಿಡುವರು ಫ್ರೆಂಡ್ಸು ಫೇಸ್ ಬುಕ್ಕಿನಲ್ಲಿ.
ಹಿಟ್ಟು ಹಿಡಿದಿಹ ನಿನ್ನ ಸೊಡ್ಡನ್ನು ಸೆರೆಹಿಡಿದು
ಪೋಸ್ಟು ಮಾಡುವೆ ಈಗ ಸುಮ್ಮಗಾಗು.
ಸೆಲ್ ಫೋನು ರಿಂಗಾಗಿ ಎತ್ತಿರಲು ನನ್ನವಳು
ಮುಗಿಯಿತಲ್ಲಿಗೆ ಒಂದು ಕಥನದಾ ಕಂತು.
ಒಂದಾದ ಮೇಲೊಂದು ಫೋನ್ ಕರೆಯು ಬರುತಿರಲು
ತೋಚಿದ್ದು ಗೀಚುತ್ತ ಕುಳಿತೆ ನಾನು.
ಡಿ.ನಂಜುಂಡ
22/10/2013
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ