ಕನ್ನಡಹೂವ್ಗಳ ಜೇನನು ಸವಿಯಲು
ಬನ್ನಿರಿ ಹಾರುತ ದುಂಬಿಗಳೆ!
ಬಣ್ಣಬಣ್ಣಗಳ ನವಸುಮವರಳಿರೆ
ಕಣ್ಮನ ತಣಿಸುವ ತೋಟದಲಿ.
ಸ್ವರವ್ಯಂಜನಮಧುರಸಭುಂಜಿಸಿ
ಹರುಷದಿ ಕುಣಿಯಿರಿ ಬಂಧುಗಳೆ!
ತೆರೆಮರೆಸೊಬಗಿನ ರಮ್ಯಕುಸುಮಗಳ
ಪರಾಗಕೆ ಬನ್ನಿ ಝೇಂಕರಿಸಿ.
ಪಂಪರನ್ನರಾ ಪೆಂಪನು ಮೆಲ್ಲುತ
ಇಂಪಲಿ ಶುಕಗಳು ಉಲಿಯುತಿರೆ.
ಕಂಪನು ಬೀರುವ ಆ ಕಾನನದಲಿ
ಝೋಂಪನು ತರಿಸುವ ರಸವರಸಿ.
ಕೆರೆತೊರೆನದಿಝರಿಕರೆಗಳನಾಲಿಸಿ
ಗಿರಿತಲವನದಲಿ ಅಡಿಯಿರಿಸಿ.
ಸರಸ್ವತಿರಚಿತ ಕವಿಯುದ್ಯಾನದಿ
ವಿರಮಿಸಿ ಮಧುವನು ಸ್ವೀಕರಿಸಿ.
ಕನ್ನಡನಾಡಿಗೆ ಪ್ರಕೃತಿಯೆ ಪ್ರತಿಮೆಯು
ಜನಗಣಮನಸುಮಮಕರಂದ.
ಹನಿಸಂಗ್ರಹದಾ ಮಧುಕರವೃತ್ತಿಗೆ
ಕನ್ನಡಕಾವ್ಯದ ಸಂಬಂಧ.
ಡಿ.ನಂಜುಂಡ
18/10/2013
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ