ಪಡುವಣ ಕೋಣೆಯ ಸೇರಿದ ರವಿಯನು
ಕೂಡಲು ರಜನಿಯು ಕಾದಿಹಳು.
ಸಡಗರದಿಂದಲಿ ಒನಪಲಿ ನಡೆವಳು
ಉಡುಹೂಮಾಲೆಯ ಹಿಡಿದಿಹಳು.
ಹೊಸಿಲನು ದಾಟಿದ ಕೃಷ್ಣಾನನೆಯು
ಶಶಿಮುಖದೀಪವ ಬೆಳಗಿದಳು.
ಮಿರಮಿರ ಮಿಣುಕಿನ ಜರಿಗಳ ಹೊಸೆದಿಹ
ಕರಿಯಂಬರವನು ಧರಿಸಿಹಳು.
ಭೂಮ್ಯಾಕಾಶಕೆ ನಯನವ ವ್ಯಾಪಿಸಿ
ಪ್ರೇಮಾದಿತ್ಯನ ಅರಸಿಹಳು.
ಇನಿಯನ ಕಾಣದೆ ವಿರಹವ ತಾಳದೆ
ದುಃಖಿಸಿ ಕಂಬನಿಗರೆದಿಹಳು.
ಕಣ್ಣಿನ ಕಾಡಿಗೆಯೆಲ್ಲವು ಕಳೆಯಲು
ಮಂಜಿನ ಹನಿಗಳು ಸುರಿಯುತಿರೆ.
ಮೂಡಲ ಬಾಗಿಲ ಕದವನು ಸರಿಸುತ
ಇಣುಕಿದ ಇನ ತಾ ಮೇಲೆದ್ದು.
ದಿನಕರನಯನವ ದಿಟ್ಟಿಸಿ ನೋಡುತ
ತನುಮನವರ್ಪಿಸಿ ಕರಗುತಿರೆ.
ಅದ್ವೈತಾಮೃತವರ್ಷಿಣಿಯಾಗಿ
ಅನುದಿನ ತಮವನು ಕಳೆದಿಹಳು.
ಡಿ.ನಂಜುಂಡ
17/10/2013
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ