ಗುರುವಾರ, ಅಕ್ಟೋಬರ್ 10, 2013

ಪ್ರಕೃತಿಮಾತೆಯ ಮಡಿಲಿನಲಿ



ತೇಲಿಸಲು ಮೆಲುದನಿಯ ಮಗುವಿನಂತೆ.
ಆಲಿಸುತ ಪೊರೆದಿಹಳು ಪ್ರಕೃತಿಮಾತೆ.

ಮುಗಿಲು ಸುರಿಸಿದ ಮಳೆಗೆ ನಗೆಯ ಬೀರಿದೆ ಇಳೆಯು
ಜಗಜಗಿಪ ಮಲ್ಲಿಗೆಯ ಹೂವ ಮೊಗದಿ.
ಬಗೆಬಗೆಯ ಬಳ್ಳಿಗಳು ಚಿಗುರೊಡೆದು ಮರ ತಬ್ಬಿ
ಬಾಗಿ ಬಳುಕಿರೆ ಬನದಿ ತನುಭಾರದಿ.

ಒಲವಿನಲಿ ಹನಿಹನಿಯ ಎಲೆಎಲೆಯ ಮೇಲಿರಿಸಿ
ಚೆಲುವನೆರೆದಿರೆ ಲತೆಯ ಕೆನ್ನೆ ಕುಳಿಗೆ.
ನೆಲದ ಆಳಕೆ ಇಳಿದು ಬಳಸುತಲಿ ಬೇರುಗಳ
ಹೊಳಪನೆರೆದಿದೆ ಸೋನೆ ತಳಿರಿನೊಳಗೆ.

ಪಸೆಯಿರಲು ಮಣ್ಣಿನಲಿ ಉಸಿರಿರಲು ಹಸಿರಿನಲಿ
ಹೆಸರಿರಿಸಿ ಕರೆಯುವರು ಎಲ್ಲ ಬಸಿರ.
ಪಸರಿಸಿಹ ಗಿರಿಸೆರಗ ಪಸುರುಡೆಯ ನೆರಳಿನಲಿ
ಹೊಸತಿಳಿವ ಹಾಲ್ಕುಡಿವ ಕೂಸೆಲ್ಲರ.

ಡಿ.ನಂಜುಂಡ
10/10/2013


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ