ಅಂಬರಚುಂಬಿತ ಸುಂದರ ಗಿರಿಯಲಿ
ಚಂದಿರ ಕುಳಿತಿಹ ರಾತ್ರಿಯಲಿ.
ಹಾಲಿನ ಮಳೆಯಲಿ ಮಿಂದಿವೆ ಮರಗಳು
ತಿಂಗಳ ಹಬ್ಬದ ಹರುಷದಲಿ.
ಕುಸುಮಸುಶೋಭಿತ ಬಂಧುರತರುಗಳು
ಫಲಗಳ ಭಾರದಿ ಬಾಗುತಿವೆ.
ತನುಮನಪುಲಕಿತ ಗಂಧವಿಲೇಪಿತ
ಮಂದಸಮೀರವು ಬೀಸುತಿದೆ.
ಬನಶಂಕರಿಯಾಲಿಂಗನ ಬಿಗಿತಕೆ
ಗಿರಿಶಿವ ಸುರಿಸಿರೆ ಜಲಧಾರೆ.
ವನರಾಮಣ್ಯಕ ಗಿರಿಕಂದರದೊಳು
ಹೊನಲಿನ ಮೊಗದಲಿ ನಗೆಯ ನೊರೆ.
ಹೃನ್ಮನತನ್ಮಯಭಾವೋಲ್ಲಾಸದಿ
ಮರೆತಿರೆ ಇಹವನು ಪ್ರತಿಕ್ಷಣದಿ.
ಅಖಂಡ ಸೃಷ್ಟಿಯ ಘನರಮ್ಯತೆಯೊಳು
ಉಸಿರನು ಬೆಸೆದಿಹೆ ಅನುಕ್ಷಣದಿ.
ಡಿ.ನಂಜುಂಡ
28/09/2013
ಅದೆಷ್ಟು ಚಂದ ನಿಮ್ಮ ಪದಗಳ ಜೋಡಣೆ. ಮತ್ತೆ ಮತ್ತೆ ಓದಬೇಕೆನಿಸುತ್ತದೆ. ಹೃನ್ಮನ ತನ್ಮಯ ಭಾವೋಲ್ಲಾಸ ಖಂಡಿತ ೧೦೦% ಆಯಿತು ಇದನ್ನು ಓದಿ.
ಪ್ರತ್ಯುತ್ತರಅಳಿಸಿ"ಬನಶಕರಿ ಅಲಿಂಗನಕೆ ಗಿರಿಶಿವ ಸುರಿಸಿಹನು ಜಲಧಾರೆ" ... ವರ್ಣಾತೀತ ಕಲ್ಪನೆ ... ಅಡ್ಡ ಬೀಳುವೆ ಗುರುವರ್ಯ ಎಂದಷ್ಟೇ ನಾನು ಹೇಳಬಲ್ಲೆ ... ಅತ್ಯತ್ತಮ ...
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಬದರೀನಾಥ್
ಪ್ರತ್ಯುತ್ತರಅಳಿಸಿನಿಮ್ಮ ಪದ ಲಾಲಿತ್ಯದ ಅಭಿಮಾನಿಯಾಗಿದ್ದೆನೆ. ಸು೦ದರವಾದ ಕವನ.
ಪ್ರತ್ಯುತ್ತರಅಳಿಸಿಧನ್ಯವಾದಗಳು ಕಾರ್ತಿಕ್
ಪ್ರತ್ಯುತ್ತರಅಳಿಸಿ